ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಪ್ರಶಸ್ತಿ ಕಿರೀಟ

ಎಫ್‌ಐಎಚ್‌ ಮಹಿಳಾ ಹಾಕಿ ಸಿರೀಸ್‌ ಫೈನಲ್ಸ್: ಫೈನಲ್‌ ಪಂದ್ಯದಲ್ಲಿ ಜಪಾನ್‌ಗೆ 1–3 ಸೋಲು
Last Updated 23 ಜೂನ್ 2019, 20:00 IST
ಅಕ್ಷರ ಗಾತ್ರ

ಹೀರೋಶಿಮಾ (ಪಿಟಿಐ): ಸರಣಿಯಲ್ಲಿ ಅತ್ಯುತ್ತಮ ಲಯದಲ್ಲಿರುವ ಗುರ್ಜಿತ್‌ ಕೌರ್‌ ಗಳಿಸಿದ ಅವಳಿ ಗೋಲುಗಳ ಬಲದಿಂದ ಎಫ್‌ಐಎಚ್‌ ಹಾಕಿ ಸಿರೀಸ್‌ ಫೈನಲ್ಸ್ ಪ್ರಶಸ್ತಿಗೆ ಭಾರತ ಭಾನುವಾರ ಮುತ್ತಿಕ್ಕಿದೆ. ಫೈನಲ್‌ ಪಂದ್ಯದಲ್ಲಿ ಜಪಾನ್‌ ತಂಡವನ್ನು ರಾಣಿ ರಾಮಪಾಲ್‌ ಪಡೆ 3–1ರಿಂದ ಮಣಿಸಿತು.

ವಿಜೇತ ತಂಡದ ಪರ ಗುರ್ಜಿತ್‌ 45 ಹಾಗೂ 60ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಮಿಂಚಿದರೆ, ನಾಯಕಿ ರಾಣಿ 3ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಜಪಾನ್‌ ಪರ ಕ್ಯಾನೊನ್‌ ಮೊರಿ 11ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಭಾರತ ತಂಡ ಶನಿವಾರ ಸರಣಿಯ ಸೆಮಿಫೈನಲ್‌ ತಲುಪಿದಾಗಲೇ ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಪ್ರವೇಶ ಖಚಿತಪಡಿಸಿತ್ತು.

ಪಂದ್ಯದ ಮೂರನೇ ನಿಮಿಷದಲ್ಲೇ ಭಾರತ ತಂಡದ ನಾಯಕಿ ರಾಣಿ, ಜಪಾನ್‌ ಗೋಲ್‌ಕೀಪರ್‌ ಅಕಿಯೊ ತನಾಕಾ ಅವರನ್ನು ವಂಚಿಸಿದರು. ಚೆಂಡನ್ನು ಸೊಗಸಾಗಿ ಗೋಲುಪೆಟ್ಟಿಗೆಗೆ ಸೇರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಪಂದ್ಯದ ಮೇಲೆ ಹಿಡಿತ ಮುಂದುವರಿಸಿದ ಭಾರತಕ್ಕೆ 9ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ದೊರಕಿತು. ಆದರೆ ಗುರಿ ತಪ್ಪಿತು. ಪ್ರಥಮ ಕ್ವಾರ್ಟರ್‌ನಲ್ಲಿ ಎರಡು ಬಾರಿ ಮಾತ್ರ ಜಪಾನ್‌ ತಂಡಕ್ಕೆ ಭಾರತದ ವೃತ್ತ ಪ್ರವೇಶಿಸಲು ಸಾಧ್ಯವಾಯಿತು. ಆದರೆ ಎರಡನೇ ಬಾರಿ ವೃತ್ತಕ್ಕೆ ಪ್ರವೇಶಿಸಿದಾಗಲೇ ಜಪಾನ್‌ನ ಕ್ಯಾನೊನ್‌ ಮೊರಿ ಫೀಲ್ಡ್ ಗೋಲು ದಾಖಲಿಸಿ ಸ್ಕೋರ್‌ ಸಬಬಲಗೊಳಿಸಿದರು.

18ನೇ ನಿಮಿಷದಲ್ಲಿ ಭಾರತಕ್ಕೆ ಉತ್ತಮ ಅವಕಾಶ ಲಭಿಸಿತ್ತು. ವಂದನಾ ಕಟಾರಿಯಾ ಬಾರಿಸಿದ ಚೆಂಡು ಗೋಲುಪೆಟ್ಟಿಗೆಯ ಅಂಚಿನಿಂದ ಸಾಗಿ ಹೊರಗೆ ದಾಟಿತು. ಆ ಬಳಿಕ ಜಪಾನ್‌ ಭಾರೀ ಪ್ರಯತ್ನ ನಡೆಸಿದರೂ ಭಾರತದ ಕೋಟೆಯನ್ನು ಭೇದಿಸಲಾಗಲಿಲ್ಲ.

ಮೂರನೇ ಕ್ವಾರ್ಟರ್‌ನಲ್ಲಿ ತನ್ನ ದಾಳಿಯನ್ನು ಚುರುಕಾಗಿಸಿದ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳು ದೊರೆತವು. ಆದರೆ ಯಶಸ್ಸು ಕೈ ತಪ್ಪಿತು.

ಈ ವೇಳೆ ಗುರ್ಜಿತ್‌ ಕೌರ್‌ ಮತ್ತೊಮ್ಮೆ ಭಾರತಕ್ಕೆ ಆಪತ್ಬಾಂಧವರಾದರು. 45ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನ್ನು ಅದ್ಭುತ ಗೋಲಾಗಿಸಿ ಭಾರತದ 2–1 ಮುನ್ನಡೆಗೆ ಕಾರಣರಾದರು.

ನಾಲ್ಕನೇ ಕ್ವಾರ್ಟರ್‌ ಆರಂಭದ ನಿಮಿಷಗಳಲ್ಲಿ ಭಾರತಕ್ಕೆ ಮತ್ತೊಂದು ಗೋಲು ಗಳಿಸುವ ಅವಕಾಶವಿತ್ತು. ಆದರೆ ಜಪಾನ್‌ ಗೋಲ್‌ಕೀಪರ್‌ ಉತ್ತಮ ಪ್ರಯತ್ನದಿಂದ ಯಶಸ್ಸು ದೊರೆಯಲಿಲ್ಲ.

ಆದರೆ ಪಂದ್ಯದ ಕೊನೆಯ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಪೆನಾಲ್ಟಿ ಕಾರ್ನರ್‌ ಮೂಲಕ ತಮ್ಮ ಎರಡನೇ ಗೋಲು ದಾಖಲಿಸಿದರು. ಭಾರತ ಜಯದ ಸಂಭ್ರಮದಲ್ಲಿ ಮಿಂದೆದ್ದಿತು.

ರಾಣಿ ಅವರಿಗೆ ಟೂರ್ನಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಲಭಿಸಿದರೆ, ಗುರ್ಜಿತ್‌ ಗರಿಷ್ಠ ಗೋಲು ಗಳಿಸಿದ ಆಟಗಾರ್ತಿ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT