ಶುಕ್ರವಾರ, ಏಪ್ರಿಲ್ 23, 2021
32 °C
ದಕ್ಷಿಣ ಆಫ್ರಿಕಾ ಎದುರು 5–1 ಗೋಲುಗಳಿಂದ ಗೆಲುವು ಸಾಧಿಸಿದ ಮನ್‌ಪ್ರೀತ್ ಸಿಂಗ್ ಬಳಗ

ಭಾರತಕ್ಕೆ ಚಿನ್ನದ ಪದಕದ ಪುಳಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಹರ್ಮನ್‌ ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಭಾರತ ತಂಡ ಎಫ್‌ಐಎಚ್ ಸೀರಿಸ್ ಫೈನಲ್ಸ್‌ನ ಚಿನ್ನದ ಪದಕ ಗೆದ್ದುಕೊಂಡಿತು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ 5–1ರಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಭಾರತ ಸದುಪಯೋಗ ಮಾಡಿಕೊಂಡಿತು. ಮೂರನೇ ನಿಮಿಷದಲ್ಲಿ ವರುಣ್ ಕುಮಾರ್ ಚೆಂಡನ್ನು ಗುರಿ ಮುಟ್ಟಿಸಿದರೆ 11ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗುರಿ ಮುಟ್ಟಿದರು.

ಮೊದಲಾರ್ಧದ ಮುಕ್ತಾಯಕ್ಕೆ ಐದು ನಿಮಿಷ ಬಾಕಿ ಇದ್ದಾಗ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ಒಲಿಯಿತು. ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿ ಸಂಭ್ರಮಿಸಿದರು.

3–0 ಗೋಲುಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಭಾರತ ದ್ವಿತೀಯಾರ್ಧದಲ್ಲಿ ನಿರಾಯಾಸವಾಗಿ ಆಡಿತು. ಒತ್ತಡದಲ್ಲೇ ಕಣಕ್ಕೆ ಇಳಿದ ದಕ್ಷಿಣ ಆಫ್ರಿಕಾಕ್ಕೆ ಐದೇ ನಿಮಿಷದಲ್ಲಿ ಭಾರತ ಮತ್ತೊಂದು ಪೆಟ್ಟು ನೀಡಿದರು. ವಿವೇಕ್ ಪ್ರಸಾದ್ ಅವರು ಫೀಲ್ಡ್ ಗೋಲು ಗಳಿಸಿ ತಂಡದ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು.

50ನೇ ನಿಮಿಷದಲ್ಲಿ ವರುಣ್ ಕುಮಾರ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗಳಿಸಿದ ಗೋಲಿನೊಂದಿಗೆ ಭಾರತದ ಮುನ್ನಡೆ 5–0ಗೆ ಏರಿತು. ಸೋಲು ಖಚಿತವಾದ ನಂತರ ಹೆಚ್ಚು ಆಕ್ರಮಣಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ಪಂದ್ಯ ಮುಕ್ತಾಯಕ್ಕೆ ಮೂರು ನಿಮಿಷಗಳು ಇದ್ದಾಗ ಗೋಲು ಗಳಿಸಿ ನಿಟ್ಟುಸಿರು ಬಿಟ್ಟಿತು. ಡ್ರ್ಯಾಗ್‌ ಫ್ಲಿಕ್ಕರ್ ಆಸ್ಟಿನ್ ಸ್ಮಿತ್ ತಂಡಕ್ಕೆ ಸಮಾಧಾನಕರ ಗೋಲು ತಂದುಕೊಟ್ಟರು.

ಶುಕ್ರವಾರ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಗೆದ್ದ ಭಾರತ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಂಡಿತ್ತು.

ಜಪಾನ್‌ಗೆ ಮೂರನೇ ಸ್ಥಾನ: ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ 4–2ರಲ್ಲಿ ಅಮೆರಿಕವನ್ನು ಮಣಿಸಿತು. ಜಪಾನ್ ಪರ ಕುಜುಮಾ ಮುರಾಟ (11ನೇ ನಿಮಿಷ), ಯೋಶಿಕಿ ಕ್ರಿಷಿಟಾ (25ನೇ ನಿ), ಕೆಂಟಾ ತನಾಕ (60ನೇ ನಿಮಿಷ 2 ಗೋಲು) ಚೆಂಡನ್ನು ಗುರಿ ಮುಟ್ಟಿಸಿದರು.

ಅಕಿ ಕೆಪ್ಲರ್ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿ ಅಮೆರಿಕದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು