ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಮೇಲೆ ದೋನಿ ಪಡೆಯ ಕಣ್ಣು

ಇಂದು ಸನ್‌ರೈಸರ್ಸ್‌ ಹೈದರಾಬಾದ್‌–ಚೆನ್ನೈ ಸೂಪರ್‌ ಕಿಂಗ್ಸ್‌ ಮುಖಾಮುಖಿ
Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಜಯಭೇರಿ ಮೊಳಗಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಭಾನುವಾರ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌, ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಲಿದೆ. ಬಲಿಷ್ಠ ತಂಡಗಳ ನಡುವಣ ಈ ಹೋರಾಟಕ್ಕೆ ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಸೂಪರ್‌ ಕಿಂಗ್ಸ್‌ ಮತ್ತು ಸನ್‌ರೈಸರ್ಸ್‌ ಈ ಬಾರಿಯ ಲೀಗ್‌ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು ತಲಾ ಆರು ಪಾಯಿಂಟ್ಸ್‌ ಸಂಗ್ರಹಿಸಿವೆ.

ಲೀಗ್‌ನ ಮೊದಲ ಎರಡು ಪಂದ್ಯ ಗಳಲ್ಲಿ ಗೆದ್ದಿದ್ದ ದೋನಿ ಪಡೆ ಮೂರನೇ ಹೋರಾಟದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ ಸೋತಿತ್ತು. ಪುಣೆಯಲ್ಲಿ ಶುಕ್ರವಾರ ನಡೆದಿದ್ದ ಪೈಪೋಟಿಯಲ್ಲಿ 64 ರನ್‌ಗಳಿಂದ ರಾಯಲ್ಸ್‌ ತಂಡವನ್ನು ಸೋಲಿಸಿತ್ತು.

ರಾಜಸ್ಥಾನ್‌ ವಿರುದ್ಧದ ಹಣಾಹಣಿ ಯಲ್ಲಿ ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಶತಕ ಸಿಡಿಸಿ ಮಿಂಚಿದ್ದರು. ಅವರು 57 ಎಸೆತಗಳಲ್ಲಿ 106ರನ್‌ ದಾಖಲಿಸಿದ್ದರು. ಅಮೋಘ ಲಯದಲ್ಲಿರುವ ವಾಟ್ಸನ್‌, ಸನ್‌ರೈಸರ್ಸ್‌ ಬೌಲರ್‌ಗಳ ಮೇಲೂ ಸವಾರಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು ಒಟ್ಟು ಆರು ವಿಕೆಟ್‌ ಉರುಳಿಸಿದ್ದಾರೆ.

ಅಂಬಟಿ ರಾಯುಡು, ನಾಯಕ ದೋನಿ, ಇಂಗ್ಲೆಂಡ್‌ನ ಸ್ಯಾಮ್‌ ಬಿಲ್ಲಿಂಗ್ಸ್‌ ಮತ್ತು ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಅವರೂ ಬ್ಯಾಟಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ. ಈ ಸಲ ರಾಯುಡು ಮತ್ತು ದೋನಿ ಕ್ರಮವಾಗಿ 122 ಮತ್ತು 114ರನ್‌ ಗಳಿಸಿದ್ದಾರೆ. ಬ್ರಾವೊ ಖಾತೆಯಲ್ಲಿ 104ರನ್‌ಗಳಿವೆ. ಸುರೇಶ್‌ ರೈನಾ ಮತ್ತು ರವೀಂದ್ರ ಜಡೇಜಾ ಕೂಡ ಮಿಂಚಿನ ಆಟ ಆಡಿ ಪಂದ್ಯದ ಗತಿ ಬದಲಿಸಬಲ್ಲರು.

ಬೌಲಿಂಗ್‌ನಲ್ಲೂ ಸೂಪರ್‌ ಕಿಂಗ್ಸ್‌ ಬಲಯುತವಾಗಿದೆ. ದೀಪಕ್‌ ಚಾಹರ್‌, ಶಾರ್ದೂಲ್‌ ಠಾಕೂರ್‌, ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌ ಮತ್ತು ಕರಣ್‌ ಶರ್ಮಾ ಪರಿಣಾಮಕಾರಿ ದಾಳಿ ನಡೆಸಿ ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಟ್ಟಿಹಾಕಬಲ್ಲ ಸಮರ್ಥರು.

ತವರಿನಲ್ಲಿ ಮೆರೆಯುವ ತವಕ: ತವರಿನ ಅಂಗಳದಲ್ಲಿ ಆಡುತ್ತಿರುವ ಕೇನ್‌ ವಿಲಿಯಮ್ಸನ್‌ ಬಳಗ ಸೂಪರ್‌ ಕಿಂಗ್ಸ್‌ಗೆ ಸೋಲುಣಿಸುವ ಲೆಕ್ಕಾಚಾರದಲ್ಲಿದೆ.

ಈ ಬಾರಿ‌ಯ ಲೀಗ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿದ್ದ ತಂಡ ನಾಲ್ಕನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರು ಮಣಿದಿತ್ತು.

ಶಿಖರ್‌ ಧವನ್‌ ಮತ್ತು ವೃದ್ಧಿಮಾನ್‌ ಸಹಾ ತಂಡಕ್ಕೆ ಭದ್ರ ಅಡಿಪಾಯ ಹಾಕಿ ಕೊಟ್ಟರೆ, ವಿಲಿಯಮ್ಸನ್‌, ಮನೀಷ್‌ ಪಾಂಡೆ ಮತ್ತು ಶಕೀಬ್‌ ಅಲ್‌ ಹಸನ್‌ ಅವರು ರನ್ ಗೋಪುರ ಕಟ್ಟಬಲ್ಲರು.

ಬೌಲಿಂಗ್‌ನಲ್ಲೂ ಸನ್‌ರೈಸರ್ಸ್‌ ಶಕ್ತಿಯುತವಾಗಿದೆ. ಭುವನೇಶ್ವರ್‌ ಕುಮಾರ್‌, ಸಿದ್ದಾರ್ಥ್‌ ಕೌಲ್‌ ಮತ್ತು ಬಿಲ್ಲಿ ಸ್ಟಾನ್‌ಲೇಕ್‌ ಅವರು ಚೆನ್ನೈ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಲು ಕಾಯುತ್ತಿದ್ದಾರೆ.

ಆರಂಭ: ಸಂಜೆ 4
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT