ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics| ಭಾರತದ ಭರವಸೆಯ ಕ್ರೀಡಾತಾರೆಗಳು

ಅಕ್ಷರ ಗಾತ್ರ

ಅಮಿತ್‌ ಪಂಗಲ್‌

ಹೋದ ವರ್ಷ ನಡೆದಿದ್ದ ಬಾಕ್ಸಿಂಗ್‌ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿದ್ದ ಅಮಿತ್‌ ಮೇಲೆ ಎಲ್ಲರ ನಿರೀಕ್ಷೆ ಇದೆ. 52 ಕೆ.ಜಿ.ಫ್ಲೈವೇಟ್‌ ವಿಭಾಗದಲ್ಲಿ ರಿಂಗ್‌ಗೆ ಇಳಿಯಲಿರುವ ಅಮಿತ್‌ಗೆ ಶಕೊಬಿದಿನ್‌ ಜೊಯಿರೊವ್‌ ಪ್ರಬಲ ಸವಾಲೊಡ್ಡಬಲ್ಲರು. ಜೊಯಿರೊವ್‌ ಸವಾಲು ಮೀರಿದರೆ ಭಾರತದ ಬಾಕ್ಸರ್‌ಗೆ ಪದಕ ನಿಶ್ಚಿತ ಎಂದು ಹೇಳಲಾಗಿದೆ.

ಪಿ.ವಿ.ಸಿಂಧು

ಬ್ಯಾಡ್ಮಿಂಟನ್‌ನಲ್ಲಿ ಸಿಂಧು, ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ರಿಯೊ ಕೂಟದಲ್ಲಿ ಅವರು ಬೆಳ್ಳಿ ಜಯಿಸಿದ್ದರು. ಸದ್ಯ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ.

ವಿನೇಶಾ ಪೋಗಟ್‌

ರೋಮ್‌ ರ‍್ಯಾಂಕಿಂಗ್‌ ಸೀರಿಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ಪೋಲೆಂಡ್‌ ಓಪನ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ವಿನೇಶಾ ಪೋಗಟ್‌ ಮಹಿಳಾ ಕುಸ್ತಿಯಲ್ಲಿ ಪದಕ ಜಯಿಸುವ ನೆಚ್ಚಿನ ತಾರೆ ಎನಿಸಿದ್ದಾರೆ. 53 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು ಅಗ್ರ ಶ್ರೇಯಾಂಕ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ ಪಾಕ್‌ ಯೊಂಗ್‌ ಮಿ ಕೂಟದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ವಿನೇಶಾ ಹಾದಿ ಮತ್ತಷ್ಟು ಸುಗಮವಾಗಿದೆ.

ಬಜರಂಗ್‌ ಪುನಿಯಾ

ಹಿಂದಿನ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಒಂದಿಲ್ಲೊಂದು ಪದಕ ಗೆಲ್ಲುತ್ತಲೇ ಬಂದಿರುವ ಬಜರಂಗ್‌ ಪುನಿಯಾ ಕುಸ್ತಿಯಲ್ಲಿ ಭಾರತದ ಪದಕದ ಭರವಸೆ ಹೆಚ್ಚಿಸಿದ್ದಾರೆ. 65 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು ಟೋಕಿಯೊ ಕೂಟದಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದಾರೆ.

ಮೀರಾಬಾಯಿ ಚಾನು

ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಎಲ್ಲರ ಕಣ್ಮಣಿಯಾಗಿದ್ದಾರೆ. ಸದ್ಯ ಅವರು 49 ಕೆ.ಜಿ.ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದ ಇಬ್ಬರು ಸ್ಪರ್ಧಿಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಚಾನುಗೆ ಪದಕ ಗೆಲ್ಲುವ ಅವಕಾಶ ಹೆಚ್ಚಿದೆ. ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ ಭಾರತದ ಸ್ಪರ್ಧಿ ದಾಖಲೆ ಹೊಂದಿದ್ದಾರೆ.

ಮನು–ಸೌರಭ್‌

ಶೂಟಿಂಗ್‌ ಸ್ಪರ್ಧಿಗಳಾದ ಮನು ಭಾಕರ್‌ ಮತ್ತು ಸೌರಭ್‌ ಚೌಧರಿ ಜೋಡಿಯ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. 19 ವರ್ಷದ ಸೌರಭ್‌, ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಪಾಲ್ಗೊಂಡ ಐದು ವಿಶ್ವಕಪ್‌ಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ವಿಶ್ವಕಪ್‌ನಲ್ಲಿ ಭಾಕರ್‌ ಕೂಡ ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ನೀರಜ್‌ ಚೋಪ್ರಾ

ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ನೀರಜ್‌ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ. ಈ ವರ್ಷ ನೀರಜ್‌ ನಿರಂತರವಾಗಿ 85 ಮೀಟರ್ಸ್‌ ಸಾಮರ್ಥ್ಯ ತೋರಿದ್ದಾರೆ. ಜಾವೆಲಿನ್‌ನಲ್ಲಿ ಈ ರೀತಿ ಸ್ಥಿರತೆ ಕಾಯ್ದುಕೊಳ್ಳುವುದು ತೀರಾ ಅಪರೂಪ. 23 ವರ್ಷದ ನೀರಜ್‌ ಟೋಕಿಯೊ ಅಂಗಳದಲ್ಲೂ ಮೋಡಿ ಮಾಡಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT