ವಿಶ್ವ ಆರ್ಚರಿ: ಪ್ರಶಸ್ತಿ ಸುತ್ತಿಗೆ ಭಾರತ

ಮಂಗಳವಾರ, ಜೂನ್ 18, 2019
23 °C
2005ರ ನಂತರ ಮೊದಲ ಬಾರಿ ಸಾಧನೆ; ಆತಿಥೇಯ ಹಾಲೆಂಡ್‌ಗೆ ಸೋಲು

ವಿಶ್ವ ಆರ್ಚರಿ: ಪ್ರಶಸ್ತಿ ಸುತ್ತಿಗೆ ಭಾರತ

Published:
Updated:
Prajavani

ಡೆನ್‌ ಬಾಷ್‌, ದಿ ನೆದರ್ಲೆಂಡ್ಸ್: ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಪುರುಷರ ರಿಕರ್ವ್‌ ತಂಡ, ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದೆ. ಆತಿಥೇಯ ಹಾಲೆಂಡ್‌ ತಂಡವನ್ನು ಗುರುವಾರ ಸೋಲಿಸಿದ ಭಾರತ ತಂಡ, 2005ರ ನಂತರ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತು ತಲುಪಿದೆ.

ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತ, ಭಾನುವಾರ ನಡೆಯುವ ಫೈನಲ್‌ನಲ್ಲಿ ಚೀನಾ ತಂಡವನ್ನು ಎದುರಿಸಲಿದೆ. ಚೀನಾ ಇನ್ನೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 6–2ರಲ್ಲಿ ಸೋಲಿಸಿತು.

ಭಾರತ ತಂಡದ ಬಿಲ್ಗಾರರು ಬುಧವಾರ ಸೆಮಿಫೈನಲ್‌ಗೆ ಅರ್ಹತೆ ಪಡೆದಾಗಲೇ, ‘ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್‌’ ಖಚಿತಪಡಿಸಿಕೊಂಡಿದ್ದರು. ತರುಣದೀಪ್‌ ರಾಯ್, ಅತನು ದಾಸ್‌ ಮತ್ತು ಪ್ರವೀಣ್‌ ಜಾಧವ್‌ ಅವರನ್ನೊಳಗೊಂಡ ತಂಡ ಹಿನ್ನಡೆಯಿಂದ ಚೇತರಿಸಿಕೊಂಡು 5–4 ರಿಂದ ಪ್ರಬಲ ಹಾಲೆಂಡ್‌ ತಂಡವನ್ನು ಮಣಿಸಿತು. ಈ ಕೂಟದಲ್ಲಿ ಹಾಲೆಂಡ್‌ ಎರಡನೇ ಶ್ರೇಯಾಂಕ ಪಡೆದಿತ್ತು.

ಭಾರತ ರಿಕರ್ವ್‌ ತಂಡ, 2005ರಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆದಿದ್ದ ಚಾಂಪಿಯನ್‌ ಷಿಪ್‌ನಲ್ಲಿ ಕೊನೆಯ ಬಾರಿ ಫೈನಲ್‌ ತಲುಪಿತ್ತು. ಆ ಸಲ ಅಂತಿಮ ಸುತ್ತಿನಲ್ಲಿ ಕೊರಿಯಾ ಎದುರು 232–244 ಅಂತರದಿಂದ ಪರಾಭವಗೊಂಡಿತ್ತು. ತರುಣ್‌ದೀಪ್‌ ರೈ ಆ ಬಾರಿಯೂ ತಂಡದಲ್ಲಿ ಆಡಿದ್ದರು.

ಕಾಂಪೌಂಡ್‌ ಟೀಮ್ ವಿಭಾಗದಲ್ಲಿ ಭಾರತ ಮಹಿಳೆಯರ ತಂಡಕ್ಕೆ ಪದಕದ ಆಸೆ ಜೀವಂತವಾಗಿದೆ. ಶನಿವಾರ ನಡೆಯುವ ಕಂಚಿನ ಪದಕದ ಪ್ಲೇ ಆಫ್‌ ಪಂದ್ಯದಲ್ಲಿ ಟರ್ಕಿ ವಿರುದ್ಧ ಭಾರತ ವನಿತೆಯರು ಆಡಲಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ತೈಪಿ ವಿರುದ್ಧ 6–0 ಗೋಲುಗಳಿಂದ ಜಯಗಳಿಸಿದ್ದ ಭಾರತ, ಉಪಾಂತ್ಯದಲ್ಲಿ  ಹಾಲೆಂಡ್‌ ತಂಡದಿಂದ ಪ್ರಬಲ ಸವಾಲು ಎದುರಿಸಿತು.  ಎರಡು ವರ್ಷ ಹಿಂದೆ ಮೆಕ್ಸಿಕೊದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದ ವಿಶ್ವದ ಎರಡನೇ ನಂಬರ್‌ ಆಟಗಾರ ಸ್ಟೀವ್‌ ವಿಯ್ಲರ್‌ ಹಾಲೆಂಡ್‌ ತಂಡದ ನಾಯಕರಾಗಿದ್ದರು. 2016ರ ರಿಯೊ ಒಲಿಂಪಿಕ್ಸ್ ಸೆಮಿಫೈನಲ್‌ ತಲುಪಿದ್ದ ಸೀಫ್‌ ವಾನ್‌ ಡೆನ್‌ ಬರ್ಗ್‌ ಮತ್ತು 2012ರ ಲಂಡನ್‌ ಒಲಿಂಪಿಕ್ಸ್‌ ಸೆಮಿಫೈನಲ್ ತಲುಪಿದ್ದ ರಿಕ್‌ ಈ ತಂಡದಲ್ಲಿದ್ದರು.

ಚೀನಾ ವಿರುದ್ಧ ಫೈನಲ್‌ ಪಂದ್ಯದ ಬಗ್ಗೆ ಕೇಳಿದಾಗ, ‘ನಾವು ನಮ್ಮಿಂದಾದಷ್ಟು ಉತ್ತಮ ಪ್ರದರ್ಶನ ನೀಡುತ್ತೇವೆ. ನಮಗೆ ಈ ಹಂತಕ್ಕೆ ಬಂದಿರುವುದು ಹೆಮ್ಮೆ ಎನಿಸಿದೆ’ ಎಂದು ಅತನು ದಾಸ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !