ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಪ್ಲೇ ಆಫ್ ಹಂತಕ್ಕೆ ಭಾರತ ಲಗ್ಗೆ

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಕೆನಡಾ ವಿರುದ್ಧ ಏಕಪಕ್ಷೀಯ ಗೆಲುವು
Last Updated 9 ಮೇ 2022, 13:27 IST
ಅಕ್ಷರ ಗಾತ್ರ

ಬ್ಯಾಂಕಾಕ್: ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡ ಅಮೋಘ ಓಟ ಮುಂದುವರಿಸಿದೆ. ಸೋಮವಾರ ನಡೆದ ಎರಡನೇ ಹಣಾಹಣಿಯಲ್ಲಿ ಕೆನಡಾ ವಿರುದ್ಧ 5–0ಯಿಂದ ಜುಯ ಗಳಿಸಿದ ಭಾರತ ನಾಕ್‌ ಔಟ್ ಹಂತದಲ್ಲಿ ಆಡಲು ಅರ್ಹತೆ ಗಳಿಸಿತು.

ಮೊದಲ ಹಣಾಹಣಿಯಲ್ಲಿ ತಂಡ ಜರ್ಮನಿ ವಿರುದ್ಧ 5–0ಯಿಂದ ಗೆಲುವು ಸಾಧಿಸಿತ್ತು. ಸೋಮವಾರದ ಜಯದೊಂದಿಗೆ ಭಾರತ ತಂಡ ‘ಸಿ’ ಗುಂಪಿನ ಅಗ್ರ ಎರಡರಲ್ಲಿ ಸ್ಥಾನ ಗಳಿಸುವುದು ಖಚಿತವಾಯಿತು.

ಕೆನಡಾ ಎದುರಿನ ಮೊದಲ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಪುಟಿದೆದ್ದು ಉಳಿದೆರಡು ಗೇಮ್‌ಗಳನ್ನು ತಮ್ಮದಾಗಿಸಿಕೊಂಡರು. ಬ್ರಯಾನ್ ಯಂಗ್ ಎದುರಿನ 52 ನಿಮಿಷಗಳ ಹಣಾಹಣಿಯಲ್ಲಿ 20-22, 21-11, 21-15ರಲ್ಲಿ ಗೆದ್ದು ಮುನ್ನಡೆ ತಂದುಕೊಟ್ಟರು.

ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೇವಲ 29 ನಿಮಿಷಗಳಲ್ಲಿ ಜೇಸನ್ ಆ್ಯಂಟನಿ ಮತ್ತು ಕೆವಿನ್ ಲೀ ಎದುರು 21–12, 21–11ರಲ್ಲಿ ಗೆಲುವು ಸಾಧಿಸಿದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್ ಕೂಡ ಸುಲಭ ಜಯ ಸಾಧಿಸಿದರು. ಬಿ.ಆರ್‌.ಸಂಕೀರ್ತ್ ಎದುರು 21-15, 21-12ರಲ್ಲಿ ಜಯ ಗಳಿಸಿದ ಅವರು 3–0 ಮುನ್ನಡೆಗೆ ಕಾರಣರಾದರು.

ಎರಡನೇ ಡಬಲ್ಸ್ ಪಂದ್ಯದಲ್ಲೂ ಭಾರತ ಪಾರಮ್ಯ ಮೆರೆಯಿತು. ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಪಾಂಜಲ 21-15, 21-11ರಲ್ಲಿ ಡಾಂಗ್ ಆ್ಯಡಂ ಮತ್ತು ನೈಲ್ ಯಕುರ ವಿರುದ್ಧ ಜಯ ಗಳಿಸಿದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಮುಗಿಯಿತು. 4–0 ಮುನ್ನಡೆ ಗಳಿಸಿದ ತಂಡದ ಕ್ಲೀನ್ ಸ್ವೀಪ್ ಸಾಧನೆ ಕನಸನ್ನು ಪ್ರಿಯಾಂಶು ರಾಜಾವತ್ ನನಸಾಗಿಸಿದರು. ವಿಕ್ಟರ್ ಲಾಲ್ ಎದುರು ಅವರು21-13, 20-22, 21-14ರಲ್ಲಿ ಜಯ ಸಾದಿಸಿದರು.

ಭಾರತ ತಂಡ ಥಾಮಸ್ ಕಪ್‌ನಲ್ಲಿ ಮೊದಲ ಚಿನ್ನದ ನಿರೀಕ್ಷೆಯಲ್ಲಿದೆ. ಟೂರ್ನಿಯಲ್ಲಿ ಭಾರತಕ್ಕೆ ಈ ವರೆಗೆ ಸಮಿಫೈನಲ್ ಪ್ರವೇಶಿಸುವುದಕ್ಕೂ ಸಾಧ್ಯವಾಗಲಿಲ್ಲ. ಕಳೆದ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಬುಧವಾರ ನಡೆಯಲಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ತಂಡ ಚೀನಾ ಥೈಪೆಯನ್ನು ಎದುರಿಸಲಿದೆ. ಉಬರ್ ಕಪ್‌ಗಾಗಿ ನಡೆಯುತ್ತಿರುವ ಮಹಿಳೆಯರ ಟೂರ್ನಿಯಲ್ಲಿ ಭಾರತ ಮಂಗಳವಾರ ಅಮೆರಿಕವನ್ನು ಮತ್ತು ಬುಧವಾರ ಕೊರಿಯಾವನ್ನು ಎದುಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT