ಶನಿವಾರ, ಏಪ್ರಿಲ್ 17, 2021
27 °C
ಜರ್ಮನಿ, ಬೆಲ್ಜಿಯಂನಲ್ಲಿ ತಲಾ ಎರಡು ಪಂದ್ಯಗಳು; ಒಲಿಂಪಿಕ್ಸ್ ಸಿದ್ಧತೆಗೆ ನಾಂದಿ; ಸುನಿಲ್ ಗೈರು

ಯುರೋಪ್ ಪ್ರವಾಸ: ಭಾರತ ಹಾಕಿ ತಂಡಕ್ಕೆ ಶ್ರೀಜೇಶ್ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19ರಿಂದಾಗಿ ಒಂದು ವರ್ಷ ಪ್ರವಾಸಗಳನ್ನು ನಡೆಸದೇ ಇದ್ದ ಭಾರತ ಹಾಕಿ ತಂಡ ಜರ್ಮನಿ ಮತ್ತು ಬೆಲ್ಜಿಯಂನಲ್ಲಿ ಪಂದ್ಯಗಳನ್ನು ಆಡುವ ಮೂಲಕ ಒಲಿಂಪಿಕ್ಸ್ ಸಿದ್ಧತೆಗಳಿಗೆ ನಾಂದಿ ಹಾಡಲಿದೆ. ತಂಡ ಬೆಂಗಳೂರಿನಿಂದ ಭಾನುವಾರ ಹೊರಡಲಿದೆ.

22 ಆಟಗಾರರು ಮತ್ತು ಆರು ಸಿಬ್ಬಂದಿಯನ್ನು ಒಳಗೊಂಡ ತಂಡ ಇದೇ 28 ಮತ್ತು ಮಾರ್ಚ್ 2ರಂದು ಜರ್ಮನಿಯ ಕ್ರೆಫರ್ಡ್‌ನಲ್ಲಿ ಪಂದ್ಯಗಳನ್ನು ಆಡಲಿದೆ. ನಂತರ ಬೆಲ್ಜಿಯಂನ ಅಂಟ್ವೆರ್ಪ್‌ಗೆ ತೆರಳಿ ಬ್ರಿಟನ್ ವಿರುದ್ಧ ಮಾರ್ಚ್ ಆರು ಮತ್ತು ಎಂಟರಂದು ಸೆಣಸಲಿದೆ. ಒಟ್ಟು 17 ದಿನಗಳ ಪ್ರವಾಸದದಲ್ಲಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ತಂಡವನ್ನು ಮುನ್ನಡೆಸಲಿದ್ದು ಡ್ರ್ಯಾಗ್‌ ಫ್ಲಿಕ್ ಪರಿಣಿತ ಹರ್ಮನ್‌ಪ್ರೀತ್ ಸಿಂಗ್ ಉಪನಾಯಕ ಆಗಿರುವರು. 

ಆಸ್ಟ್ರೇಲಿಯಾ ವಿರುದ್ಧ ಭುವನೇಶ್ವರದಲ್ಲಿ ಕಳೆದ ವರ್ಷದ ಫೆಬ್ರುವರಿಯಲ್ಲಿ ನಡೆದ ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ನ ಪಂದ್ಯಗಳು ಭಾರತ ತಂಡದ ಕೊನೆಯ ಅಂತರರಾಷ್ಟ್ರೀಯ ಹಣಾಹಣಿ ಆಡಿತ್ತು. ಆ ಲೀಗ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದರಿಂದ ಎಫ್‌ಐಎಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿತ್ತು.

ಪ್ರವಾಸ ಕೈಗೊಳ್ಳುವ ತಂಡದಲ್ಲಿ ನಾಯಕ ಮನ್‌ಪ್ರೀತ್ ಸಿಂಗ್ ಇಲ್ಲ. ರೂಪಿಂದರ್ ಪಾಲ್ ಸಿಂಗ್‌, ವರುಣ್ ಕುಮಾರ್ ಮತ್ತು ಎಸ್‌.ವಿ.ಸುನಿಲ್ ಕೂಡ ತೆರಳುತ್ತಿಲ್ಲ. ರೂಪಿಂದರ್ ಮತ್ತು ವರುಣ್ ಗಾಯಗೊಂಡಿದ್ದು ಮನ್‌ಪ್ರೀತ್ ವೈಯಕ್ತಿಕ ಕಾರಣಗಳಿಂದಾಗಿ ಪ್ರವಾಸದಿಂದ ವಿನಾಯಿತಿ ನೀಡುವಂತೆ ಕೋರಿದ್ದರು ಎನ್ನಲಾಗಿದೆ.  

ಜನವರಿಯಿಂದ ಆಟಗಾರರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ಆವರಣದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮಹಿಳೆಯರ ತಂಡ ಕಳೆದ ತಿಂಗಳಲ್ಲಿ ಅರ್ಜೆಂಟೀನಾ ಪ್ರವಾಸ ಕೈಗೊಳ್ಳುವ ಮೂಲಕ ಸ್ಪರ್ಧಾತ್ಮಕ ಚಟುವಟಿಕೆಯನ್ನು ಪುನರಾರಂಭಗೊಳಿಸಿತ್ತು. ಜೂನಿಯರ್ ಮಹಿಳೆಯರ ತಂಡ ಚಿಲಿ ಪ್ರವಾಸ ಕೈಗೊಂಡಿತ್ತು. ಒಲಿಂಪಿಕ್ಸ್ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಈ ಪ್ರವಾಸಗಳು ಉಪಯುಕ್ತ ಎಂದು ವಿಶ್ಲೇಷಿಸಲಾಗಿದೆ. 

ತಂಡ ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು ನಿರ್ದಿಷ್ಟ ಆಟಗಾರರೇ ಪ್ರವಾಸದುದ್ದಕ್ಕೂ ಕೊಠಡಿ ಹಂಚಿಕೊಳ್ಳಲಿದ್ದಾರೆ. ಬಯೊಬಬಲ್ ದಾಟಿ ಯಾರೂ ಹೊರಹೋಗುವಂತಿಲ್ಲ. ಆರ್‌ಟಿ–ಪಿಸಿಆರ್ ಪರೀಕ್ಷೆಯೂ ನಡೆಯಲಿದೆ.

‘ಬಲಿಷ್ಠ ತಂಡಗಳಾದ ಜರ್ಮನಿ ಮತ್ತು ಬ್ರಿಟನ್ ವಿರುದ್ಧದ ಪಂದ್ಯಗಳು ಒಲಿಂಪಿಕ್ಸ್ ಮತ್ತು ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ಗೆ ಸಜ್ಜಾಗಲು ಅನುಕೂಲ ಆಗಲಿವೆ. ಅಗ್ರ 10ರ ಒಳಗಿನ ತಂಡಗಳ ಎದುರು ಆಡುವುದಕ್ಕೆ ನಮ್ಮ ಆಟಗಾರರು ಸದಾ ಉತ್ಸುಕರಾಗಿದ್ದಾರೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ. 

‘ಒಂದು ವರ್ಷದ ನಂತರ ಪ್ರವಾಸ ಕೈಗೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಜರ್ಮನಿ ಮತ್ತು ಬ್ರಿಟನ್ ಎದುರು ಆಡುವ ಮೂಲಕ ಹೊಸ ಉತ್ಸಾಹ ಮೂಡುವ ನಿರೀಕ್ಷೆ ಇದೆ. ಯುರೋಪಿನಲ್ಲಿ ಈಗ ಚಳಿಗಾಲ. ಅದಕ್ಕೆ ಹೊಂದಿಕೊಳ್ಳಲು ಸಮಯಾವಕಾಶವಿದೆ. ಎಲ್ಲ ಸವಾಲುಗಳನ್ನು ಮೀರಿ ಪಂದ್ಯಗಳನ್ನು ಗೆಲ್ಲುವ ಕಡೆಗೆ ಗಮನ ನೀಡಲಿದ್ದೇವೆ’ ಎಂದು ಹರ್ಮನ್‌ಪ್ರೀತ್‌ ಸಿಂಗ್ ತಿಳಿಸಿದ್ದಾರೆ. 

ತಂಡ: ಗೋಲ್‌ಕೀಪರ್‌ಗಳು: ಪಿ.ಆರ್‌.ಶ್ರೀಜೇಶ್ (ನಾಯಕ), ಕೃಷ್ಣ ಬಹದ್ದೂರ್ ಪಾಠಕ್‌.  ಡಿಫೆಂಡರ್‌ಗಳು: ಅಮಿತ್ ರೋಹಿದಾಸ್‌, ಡಿಪ್ಸನ್ ಟರ್ಕಿ, ಗುರಿಂದರ್ ಸಿಂಗ್‌, ಹರ್ಮನ್‌ಪ್ರೀತ್ ಸಿಂಗ್ (ಉಪನಾಯಕ), ಸುರೇಂದರ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್‌, ಬೀರೇಂದರ್‌ ಲಕ್ರ. ಮಿಡ್‌ಫೀಲ್ಡರ್‌ಗಳು: ಚಿಂಗ್ಲೆನ್ಸಾನ ಸಿಂಗ್‌, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್‌ ಪ್ರಸಾದ್‌, ರಾಜಕುಮಾರ್ ಪಾಲ್, ಸಿಮ್ರನ್‌ಜೀತ್ ಸಿಂಗ್‌, ಶಂಶೇರ್ ಸಿಂಗ್‌, ಆಕಾಶ್‌ದೀಪ್ ಸಿಂಗ್‌. ಫಾರ್ವರ್ಡರ್‌ಗಳು: ಗುರ್ಜಂತ್ ಸಿಂಗ್‌, ರಮಣ್‌ದೀಪ್‌ ಸಿಂಗ್‌, ದಿಲ್‌ಪ್ರೀತ್ ಸಿಂಗ್‌, ಮನದೀಪ್ ಸಿಂಗ್‌, ಲಲಿತ್‌ ಕುಮಾರ್ ಉಪಾಧ್ಯಾಯ.

***

12 ತಿಂಗಳ ನಂತರ ತಂಡ ಕಣಕ್ಕೆ ಇಳಿಯಲು ಸಜ್ಜಾಗಿದೆ. ಯುರೋಪ್ ಪ್ರವಾಸ ಕೈಗೊಳ್ಳಲು ಅವಕಾಶ ಒದಗಿಸಿದ್ದಕ್ಕೆ ಸಂಬಂಧಪಟ್ಟ ಎಲ್ಲರಿಗೂ ಕೃತಜ್ಞರಾಗಿದ್ದೇವೆ.

ಗ್ರಹಾಂ ರೀಡ್, ಭಾರತ ತಂಡದ ಮುಖ್ಯ ಕೋಚ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು