ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಾ ಸಿಂಹ’ನಾದ ಅನಿರುದ್ಧ್

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

* ‘ರಾಜಾ ಸಿಂಹ’ ಚಿತ್ರದ ವಿಶೇಷ ಏನು?
ವಿಷ್ಣುವರ್ಧನ್ ಅವರು ‘ಸಿಂಹಾದ್ರಿಯ ಸಿಂಹ’ ಚಿತ್ರದಲ್ಲಿ ಮೂರು ಪಾತ್ರ ನಿರ್ವಹಿಸಿದ್ದಾರೆ. ಅದರಲ್ಲಿ ನರಸಿಂಹೇಗೌಡ ಎಂಬ ತಂದೆ ಪಾತ್ರವಿದೆ. ‘ರಾಜಾ ಸಿಂಹ’ದಲ್ಲಿ ಆ ಪಾತ್ರವನ್ನು ಮುಂದುವರಿಸಿಕೊಂಡು ಹೋಗಿದ್ದೇವೆ. ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಅರ್ಧಾಂಗಿಯಾಗಿ ಭಾರತಿ ವಿಷ್ಣುವರ್ಧನ್‌ ಅವರೇ ನಿರ್ವಹಿಸಿದ್ದಾರೆ. ಅವರ ಪುತ್ರನ ಪಾತ್ರ ನನ್ನದು. ವಿಷ್ಣುವರ್ಧನ್‌ ಅವರ ಚಿತ್ರಗಳಲ್ಲಿ ಹಳ್ಳಿಗಳ ನಡುವೆ ಸಾಮರಸ್ಯ ಬೆಸೆಯುವುದನ್ನು ಕಾಣುತ್ತೇವೆ. ಜನರ ನಡುವೆ ಸ್ನೇಹದ ಸೇತುವೆ ಕಟ್ಟುವುದನ್ನು ಕಾಣಬಹುದು. ಅವರದು ಸ್ಫೂರ್ತಿದಾಯಕ ವ್ಯಕ್ತಿತ್ವ. ಈ ಚಿತ್ರದಲ್ಲಿಯೂ ಅಂತಹ ಚಿತ್ರಣವಿದೆ.

* ಈ ಚಿತ್ರಕ್ಕೆ ಪ್ರೇರಣೆ ಯಾರು?
ವಿಷ್ಣುವರ್ಧನ್ ಅವರ ಅಭಿಮಾನಿಗಳೊಂದಿಗೆ ನನ್ನ ಒಡನಾಟ ಮುಂದುವರಿದಿದೆ. ಅವರು ಶಾರೀರಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಅವರು ನಿರ್ವಹಿಸುತ್ತಿದ್ದ ಪಾತ್ರಗಳು ಇಂದು ಮೂಡಿಬರುತ್ತಿಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿತ್ತು. ಹಾಗಾಗಿ, ಸಿನಿಮಾಗಳನ್ನು ನೋಡುತ್ತಿಲ್ಲ ಎಂದು ಬೇಸರದಿಂದ ಹೇಳುತ್ತಿದ್ದರು. ಅಭಿಮಾನಿಗಳ ಪ್ರೇರಣೆ ಕೂಡ ಈ ಚಿತ್ರ ನಿರ್ಮಾಣದ ಆಶಯಗಳಲ್ಲಿ ಒಂದಾಗಿದೆ. ಜತೆಗೆ, ಮನರಂಜನೆ ನೀಡುವುದು ಮೂಲ ಉದ್ದೇಶ.

* ಯುವಜನರಿಗೆ ಸಂದೇಶ ಇದೆಯೇ?
ನಾವಿಂದು ನಕಾರಾತ್ಮಕ ವಿಷಯಗಳ ಬಗ್ಗೆಯೇ ಹೆಚ್ಚು ಕೇಳುತ್ತಿರುತ್ತೇವೆ. ಆದರೆ, ನಮ್ಮಲ್ಲಿನ ಸಂಸ್ಕೃತಿ, ಸಂಪ್ರದಾಯದ ಮೇಲೆ ಧನಾತ್ಮಕ ಅಂಶಗಳು ಹೆಚ್ಚು ಪರಿಣಾಮ ಬೀರಿವೆ. ಇದನ್ನೇ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರ ಸ್ಫೂರ್ತಿದಾಯಕವಾಗಿದೆ. ಸಿನಿಮಾದಲ್ಲಿ ಸಂದೇಶ ಇದೆ.

* ಭಾರತಿ ವಿಷ್ಣುವರ್ಧನ್‌ ಜತೆ ನಟಿಸಿದ ಅನುಭವ ಹೇಗಿತ್ತು?
ವಿಷ್ಣುವರ್ಧನ್ ಅವರೊಂದಿಗೆ ನಾನು ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ಭಾರತಿ ವಿಷ್ಣುವರ್ಧನ್ ಅವರೊಟ್ಟಿಗೆ ನಟಿಸಿರಲಿಲ್ಲ. ಇದು ಅವರೊಂದಿಗೆ ನಟಿಸುತ್ತಿರುವ ಮೊದಲ ಚಿತ್ರ. ಸಾಕಷ್ಟು ಖುಷಿಪಟ್ಟೆ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ವಿಷ್ಣುವರ್ಧನ್ ಅವರಿಗೆ ಶಕ್ತಿಯಾಗಿದ್ದರು. ಈ ಸಿನಿಮಾ ಹಾಗೂ ನಿಜ ಜೀವನದಲ್ಲೂ ನನಗೆ ಅವರು ದೊಡ್ಡ ಶಕ್ತಿ.

* ಚಿತ್ರದಲ್ಲಿ ಇಬ್ಬರು ನಾಯಕಿಯರ ಪಾತ್ರವೇನು?
ನಿಖಿತಾ ಮತ್ತು ಸಂಜನಾ ನಾಯಕಿಯರು. ನಿಖಿತಾ ಅವರದ್ದು ಸಂಪ್ರದಾಯಸ್ಥ ಗೃಹಿಣಿ ಪಾತ್ರ. ಸಂಜನಾ ಅವರೊಟ್ಟಿಗೆ ಒಂದು ಹಾಡಿನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಸನ್ನಿವೇಶಕ್ಕೆ ಇದರ ಅಗತ್ಯವಿತ್ತು. ಮನರಂಜನೆ ನೀಡುವುದೇ ಇದರ ಉದ್ದೇಶ. ಸಂಜನಾ ಅವರದ್ದು ಲವಲವಿಕೆಯ ಪಾತ್ರ. ಅವರ ಉಳಿದ ಎಲ್ಲ ಸಿನಿಮಾಗಳಿಗಿಂತಲೂ ಭಿನ್ನವಾದ ಪಾತ್ರ. ಎಲ್ಲಿಯೂ ಅಶ್ಲೀಲತೆ ಇಲ್ಲ.

* ಅಂಬರೀಷ್‌ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಹೇಳಿ.
ಚಿತ್ರದಲ್ಲಿ ಅಂಬರೀಷ್‌ ಅವರದ್ದು ಅತಿಥಿ ಪಾತ್ರ. ಅವರೊಂದಿಗೆ ನನ್ನದು ಮೊದಲ ಅಭಿನಯ. ಅವರ ಸಮಯ ಹೊಂದಾಣಿಕೆ ಕಷ್ಟ. ‘ರಾಜಾ ಸಿಂಹ’ ನಿರ್ಮಾಣದ ಬಗ್ಗೆ ಅವರಿಗೆ ಹೇಳಿದೆ. ನಾನೊಬ್ಬನೇ ಮನೆಗೆ ಬರುವಂತೆ ಹೇಳಿದರು. ಅವರ ಮನೆಗೆ ತೆರಳಿ ಕಥೆ ಬಗ್ಗೆ ಹೇಳಲು ಮುಂದಾದೆ. ಆದರೆ, ನಾನು ಯಾವಾಗ ಶೂಟಿಂಗ್‌ಗೆ ಬರಬೇಕೆಂದು ಹೇಳು; ಬರುತ್ತೇನೆ ಅಂದ್ರು. ನಿರ್ದಿಷ್ಟ ವ್ಯಕ್ತಿಗಳೇ ಕೆಲವು ಪಾತ್ರ ಮಾಡಬೇಕಿದೆ. ಆದರೆ, ನಿರ್ದೇಶಕರು ಬದಲಿ ವ್ಯಕ್ತಿಗಳನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳುವುದು ಉಂಟು. ಈ ಚಿತ್ರದಲ್ಲಿನ ಪಾತ್ರಕ್ಕೆ ಅಂಬರೀಷ್‌ ಅವರೇ ಸೂಕ್ತ ವ್ಯಕ್ತಿ. ಅವರ ಮೊದಲ ಶಾಟ್‌ನಲ್ಲೇ ವಿಷ್ಣುವರ್ಧನ್‌ ಬಗ್ಗೆ ಅವರಲ್ಲಿರುವ ಪ್ರೀತಿ, ಕಳಕಳಿ ಗೊತ್ತಾಗುತ್ತದೆ.

* ಶೂಟಿಂಗ್‌ ಅನುಭವದ ಬಗ್ಗೆ ಹೇಳಿ.
‘ಸಿಂಹಾದ್ರಿಯ ಸಿಂಹ’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿತ್ತು. ‘ರಾಜಾ ಸಿಂಹ’ ಚಿತ್ರದ ಶೂಟಿಂಗ್‌ ಕೂಡ ಮೈಸೂರಿನಲ್ಲಿ ನಡೆದಿದೆ. ಕೆಲವು ದೃಶ್ಯಗಳನ್ನು ಬೆಂಗಳೂರಿನಲ್ಲೂ ಚಿತ್ರೀಕರಿಸಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT