ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌, ಸೇನ್‌ಗೆ ಗೆಲುವಿನಾರಂಭ

ಸೈನಾ ಮುನ್ನಡೆ
Last Updated 12 ಜನವರಿ 2022, 13:43 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಲಕ್ಷ್ಯ ಸೇನ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಸುಲಭ ಜಯ ಸಂಪಾದಿಸಿ, ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಸೈನಾ ಹಿನ್ನಡೆಯಲ್ಲಿದ್ದರೂ ಅವರ ಎದುರಾಳಿ ಗಾಯದ ಹಿನ್ನೆಲೆಯಲ್ಲಿ ಹಿಂದೆ ಸರಿದ ಕಾರಣ ಎರಡನೇ ಸುತ್ತಿಗೆ ಮುನ್ನಡೆದರು.

ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿ ಸೈನಾ ಅವರು ಗಾಯದ ಕಾರಣ ಕಳೆದ ವರ್ಷ ಹಲವು ಟೂರ್ನಿಗಳಲ್ಲಿ ಆಡಿರಲಿಲ್ಲ. ಈ ಟೂರ್ನಿಯ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅವರು 20–22, 0–1ರಿಂದ ಹಿನ್ನಡೆಯಲ್ಲಿದ್ದಾಗ ಬೆನ್ನುನೋವಿನಿಂದಾಗಿ ಅವರ ಎದುರಾಳಿ ಜೆಕ್‌ ಗಣರಾಜ್ಯದ ತೆರೆಜಾ ಸ್ವಾಬಿಕೊವಾ ಪಂದ್ಯದಿಂದ ಹಿಂದೆ ಸರಿದರು.

ಇಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಸೈನಾ ಮುಂದಿನ ಪಂದ್ಯದಲ್ಲಿ ಭಾರತದ ಮಾಳವಿಕಾ ಬಾನ್ಸೋದ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಹಣಾಹಣಿಯಲ್ಲಿ ಮಾಳವಿಕಾ 21–18, 21–19ರಿಂದ ಭಾರತದವರೇ ಆದ ಸಮಿಯಾ ಇಮದ್‌ ಫಾರೂಕಿ ಅವರಿಗೆ ಸೋಲುಣಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಂಟನೇ ಶ್ರೇಯಾಂಕದ ಪ್ರಣಯ್‌21-14, 21-7ರಿಂದ ಸ್ಪೇನ್‌ನ ಪ್ಯಾಬ್ಲೊ ಅಬಿಯನ್ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಅವರು ಭಾರತದ ಮಿಥುನ್‌ ಮಂಜುನಾಥ್ ಎದುರು ಆಡಲಿದ್ದಾರೆ. ಜಿದ್ದಾಜಿದ್ದಿ ಹೋರಾಟದಲ್ಲಿ ಮಿಥುನ್21-16, 15-21, 21-10ರಿಂದ ಫ್ರಾನ್ಸ್‌ನ ಅರ್ನಾಡ್‌ ಮರ್ಕಲ್‌ ಸವಾಲು ಮೀರಿದರು.

ಮತ್ತೊಂದು ಪಂದ್ಯದಲ್ಲಿ ಲಕ್ಷ್ಯ ಸೇನ್‌21-15 21-7ರಿಂದ ಈಜಿಪ್ಟ್‌ನ ಅಧಮ್‌ ಹ್ಯಾಟೆಮ್‌ ಎಲಗ್‌ಮಲ್ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಭಾರತದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ21-14 21-10ರಿಂದ ಸ್ವದೇಶದ ಆಟಗಾರರಾದ ಚಿರಾಗ್ ಅರೋರಾ ಮತ್ತು ರವಿ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ– ಎನ್‌. ಸಿಕ್ಕಿ ರೆಡ್ಡಿ ಕೂಡ ಮುನ್ನಡೆದರು. ಮೊದಲ ಸುತ್ತಿನಲ್ಲಿ ಅವರು21-7, 19-21, 21-13ರಿಂದ ಭಾರತದವರೇ ಆದ ಜನನಿ ಅನಂತಕುಮಾರ್‌ ಮತ್ತು ದಿವ್ಯಾ ಆರ್‌. ಬಾಲಸುಬ್ರಮಣಿಯನ್ ಎದುರು ಗೆದ್ದರು.

ಇನ್ನುಳಿದ ಪಂದ್ಯಗಳಲ್ಲಿ ಆಕರ್ಷಿ ಕಶ್ಯಪ್‌21-14, 21-14ರಿಂದ ಅನುರಾ ಪ್ರಭುದೇಸಾಯಿ ಎದುರು ಗೆದ್ದರೆ, ರಾಹುಲ್ ಯಾದವ್‌ ಚಿತ್ತಬೊಯಿನಾ ಅವರಿಗೆ ವಾಕ್‌ಓವರ್ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT