ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಕಾರ್‌ ರ‍್ಯಾಲಿ: ಅಪಘಾತದಲ್ಲಿ ಬೆಂಗಳೂರಿನ ಸಂತೋಷ್‌ ತೀವ್ರ ಗಾಯ

Last Updated 7 ಜನವರಿ 2021, 16:24 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಮೋಟಾರ್‌ಸ್ಪೋರ್ಟ್ಸ್‌ ರ‍್ಯಾಲಿಗಳಲ್ಲಿ ಅತ್ಯಂತ ಅಪಾಯಕಾರಿಯೆಂದೇ ಹೇಳಲಾಗುವ ಡಕಾರ್‌ ರ‍್ಯಾಲಿಯಲ್ಲಿ ಪ್ರತಿವರ್ಷವೂ ದುರ್ಘಟನೆಗಳು ಸಂಭವಿಸುತ್ತವೆ.

ಹೋದ ವರ್ಷದ ರ್‍ಯಾಲಿಯಲ್ಲಿ ಹೀರೊ ತಂಡದ ರೈಡರ್ ಪಾಲೊ ಗೋನ್ಸಾಲ್ವೆಸ್ ಸಾವು ಸಂಭವಿಸಿದ್ದ ಜಾಗದಲ್ಲಿ ಈ ಬಾರಿಯೂ ಮತ್ತೆ ದುರ್ಘಟನೆ ನಡೆದಿದೆ.

ಇದರಲ್ಲಿ ಬೆಂಗಳೂರಿನ ಬೈಕ್ ರೇಸ್‌ ಪಟು ಸಿ.ಎಸ್. ಸಂತೋಷ್ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ.

ಅವರನ್ನು ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತದ ಪ್ರಮುಖ ರೇಸ್‌ಪಟುಗಳಲ್ಲಿ ಒಬ್ಬರಾಗಿರುವ 37 ವರ್ಷದ ಸಂತೋಷ್ ಹೀರೊ ಮೋಟಾರ್‌ಸ್ಪೋರ್ಟ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ.

’ಇದೊಂದು ಅನಿರೀಕ್ಷಿತ ಆಘಾತಕಾರಿ ಘಟನೆಯಾಗಿದೆ. ಡಕಾರ್ 2021 ರ‍್ಯಾಲಿಯ ನಾಲ್ಕನೇ ಸ್ಟೇಜ್‌ ರೇಸ್‌ನಲ್ಲಿ ದುರ್ಘಟನೆ ಸಂಭವಿಸಿದೆ. ರಿಯಾದ್‌ನ ಆಸ್ಪತ್ರೆಗೆ ಸಂತೋಷ್ ಅವರನ್ನು ಕೂಡಲೇ ದಾಖಲಿಸಲಾಗಿದೆ. ಪ್ರಾಥಮಿಕ ಹಂತದ ತಪಾಸಣೆಯಲ್ಲಿ ಅವರ ಆರೊಗ್ಯ ಸ್ಥಿರವಾಗಿದೆಯೆಂದು ಕಂಡುಬಂದಿದೆ. ಅವರು ಬೇಗನೆ ಗುಣಮುಖರಾಗಲಿಯೆಂದು ಹಾರೈಸುತ್ತೇವೆ‘ ಎಂದು ಹೀರೊ ಮೊಟೊಸ್ಪೋರ್ಟ್ಸ್‌ ಟ್ವೀಟ್ ಮಾಡಿದೆ.

ರೇಸ್‌ನ 135 ಕಿ.ಮೀ ದೂರದ ಸ್ಟೇಜ್‌ನಲ್ಲಿ ಸಂತೋಷ್ ಅವರು ಚಾಲನೆ ಮಾಡುತ್ತಿದ್ದ ಬೈಕ್ ಅಪಘಾತಕ್ಕೀಡಾಯಿತು. ಸ್ಥಳಕ್ಕೆ ಹೆಲಿಕಾಫ್ಟರ್‌ನಲ್ಲಿ ಧಾವಿಸಿದ ವೈದ್ಯಕೀಯ ತಂಡವು ಪ್ರಥಮ ಚಿಕಿತ್ಸೆ ನೀಡಿ ರಿಯಾದ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿತು.

ಜನವರಿ 2 ರಿಂದ 16ವರೆಗೆ ನಡೆಯುವ ಈ ರ‍್ಯಾಲಿಯಲ್ಲಿ 12 ಸ್ಟೇಜ್‌ಗಳ ಸ್ಪರ್ಧೆ ಇದೆ. ಒಟ್ಟು 7646 ಕಿ.ಮೀ ದೂರವನ್ನು ಸ್ಪರ್ಧಿಗಳು ಕ್ರಮಿಸಬೇಕು.

ಈ ಅಪಾಯಕಾರಿ ರ‍್ಯಾಲಿಯಲ್ಲಿ ಸಂತೋಷ್ ಏಳನೇ ಬಾರಿ ಸ್ಪರ್ಧಿಸಿದ್ದರು. 2015ರಲ್ಲಿ ರೇಸ್ ಪೂರ್ಣಗೊಳಿಸಿದ ಮೊದಲ ಭಾರತೀಯ ರೇಸರ್‌ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

2013ರಲ್ಲಿ ಅಬುಧಾಬಿ ಡಸರ್ಟ್‌ ಚಾಲೆಂಜ್ ರೇಸ್‌ನಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿಯೂ ಸಂತೋಷ್ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡಿದ್ದರು. ಆ ರೇಸ್‌ನಲ್ಲಿ ಅವರು ಚಾಲನೆ ಮಾಡುತ್ತಿದ್ದ ಸುಜುಕಿ ಎಂ.ಎಕ್ಸ್‌450ಎಕ್ಸ್‌ ಬೈಕ್‌ಗೆ ಬೆಂಕಿ ಹೊತ್ತಿದ್ದರಿಂದ ಸಂತೋಷ್ ಕುತ್ತಿಗೆಯ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT