ಭಾನುವಾರ, ಸೆಪ್ಟೆಂಬರ್ 19, 2021
24 °C
ಎರಡು ವಿಭಾಗಗಳಲ್ಲಿ ಫೈನಲ್ ಇಂದು; ಅಭಿಷೇಕ್, ಸೌರಭ್, ಅಪೂರ್ವಿ, ಇಳವೆನ್ನಿಲ ಮೇಲೆ ನಿರೀಕ್ಷೆ

Tokyo Olympics| ಶೂಟಿಂಗ್‌: ‘ಮೊದಲ’ ಪದಕಕ್ಕೆ ಗುರಿ ಇಡುವ ತವಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಇತ್ತೀಚಿನ ವರ್ಷಗಳಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಭಾರತದ ಶೂಟರ್‌ಗಳು ಪದಕಗಳನ್ನು ಗೆಲ್ಲುವ ಭರವಸೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶನಿವಾರ ಕಣಕ್ಕೆ ಇಳಿಯಲಿದ್ದಾರೆ. ಶೂಟಿಂಗ್ ಸ್ಪರ್ಧೆಯ ಮೊದಲ ದಿನ ಎರಡು ವಿಭಾಗಗಳ ಫೈನಲ್ ನಡೆಯಲಿದ್ದು ಭಾರತದ ಎಂಟು ಶೂಟರ್‌ಗಳು ಪದಕ ಪ್ರದಾನ ವೇದಿಕೆ ಏರುವ ನಿರೀಕ್ಷೆಯಲ್ಲಿ ಇದ್ದಾರೆ.

15 ಮಂದಿಯನ್ನೊಳಗೊಂಡ ಬಲಿಷ್ಠ ಶೂಟಿಂಗ್ ತಂಡ ಟೋಕಿಯೊದಲ್ಲಿದ್ದು ಪ್ರತಿಯೊಬ್ಬರೂ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದವರೇ. ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಅಪೂರ್ವಿ ಚಾಂಡೇಲ, ಇಳವೆನ್ನಿಲ ವಾಳರಿವನ್, ಮನು ಭಾಕರ್‌, ಯಶಸ್ವಿನಿ ಸಿಂಗ್ ದೇಸ್ವಾಲ್, ಅಂಜುಮ್ ಮೌದ್ಗಿಲ್, ತೇಜಸ್ವಿನಿ ಸಾವಂತ್ ಮುಂತಾದವರು ಹೆಚ್ಚು ನಿರೀಕ್ಷೆ ಮೂಡಿಸಿದ್ದಾರೆ.

ಮೊದಲ ದಿನ ಪುರುಷರ 10 ಮೀಟರ್ಸ್ ಏರ್‌ ಪಿಸ್ತೂಲು ಮತ್ತು ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿನ ಸ್ಪರ್ಧೆ ನಡೆಯಲಿದ್ದು ಶೂಟರ್‌ಗಳು ಪದಕಗಳಿಗೆ ಗುರಿ ಇಡಲಿದ್ದಾರೆ. ಅಭಿಷೇಕ್ ವರ್ಮಾ ಮತ್ತು ಸೌರಭ್ ಚೌಧರಿ ಪುರುಷರ ವಿಭಾಗದಲ್ಲೂ ಅಪೂರ್ವಿ ಚಾಂಡೇಲ ಮತ್ತು ಇಳವೆನ್ನಿಲ ವಾಳರಿವನ್ ಮಹಿಳೆಯ ವಿಭಾಗದಲ್ಲೂ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಕ್ರೊವೇಷ್ಯಾಗೆ ಅಭ್ಯಾಸಕ್ಕೆ ತೆರಳುವ ಕೆಲವೇ ದಿನಗಳ ಹಿಂದ ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಅಪೂರ್ವಿ ನಂತರ ಚೇತರಿಸಿಕೊಂಡಿದ್ದರು. ನಂತರ ಭರವಸೆಯಲ್ಲೇ ಆಡಿದ್ದರು. ವಿಶ್ವಕಪ್‌ನಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಬೆನ್ನುನೋವಿನಿಂದ ಬಳಲಿ ನರಾಸೆಗೆ ಒಳಗಾಗಿದ್ದರು. ಈ ಬಾರಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ.

21 ವರ್ಷದ ಇಳವೆನ್ನಿಲ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿದ್ದಾರೆ. ದೇಶದ ಅತ್ಯಂತ ಪ್ರತಿಭಾನ್ವಿತ ಶೂಟರ್ ಆಗಿರುವ ಅವರು ಆ ಪ್ರತಿಭೆಯನ್ನು ಪದಕವಾಗಿ ಪರಿವರ್ತಿಸುವ ಹುಮ್ಮಸ್ಸಿನಲ್ಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಗಗನ್ ನಾರಂಗ್ ಅವರ ತರಬೇತಿಯಲ್ಲಿ ಬೆಳೆದಿದ್ದಾರೆ. 

19 ವರ್ಷದ ಸೌರಭ್ ಚೌಧರಿ ಆರು ವರ್ಷಗಳ ವೃತ್ತಿಪರ ಶೂಟಿಂಗ್‌ನಲ್ಲಿ ಮೈಲುಕಲ್ಲುಗಳನ್ನು ಸ್ಥಾಪಿಸಿದ್ದಾರೆ. ಅಭಿಷೇಕ್ ವರ್ಮಾ ಕೂಡ ಶೂಟಿಂಗ್‌ನಲ್ಲಿ  ಭಾರತದ ಹೆಸರನ್ನು ಗಗನದೆತ್ತರಕ್ಕೇರಿಸುವ ಸಾಮರ್ಥ್ಯ ಹೊಂದಿದ್ದಾರೆ.

ನಾಳೆಯೂ ಎರಡು ಫೈನಲ್‌ ನಡೆಯಲಿದ್ದು ಮನು ಭಾಕರ್ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ 10 ಮೀಟರ್ಸ್ ಏರ್ ಪಿಸ್ತೂಲು ವಿಭಾಗದಲ್ಲಿ, ದಿವ್ಯಾಂಶ್ ಸಿಂಗ್ ಪನ್ವರ್, ದೀಪಕ್ ಕುಮಾರ್ 10 ಮೀಟರ್ಸ್ ಏರ್ ರೈಫಲ್ಸ್‌ನಲ್ಲಿ ಪದಕಕ್ಕೆ ಗುರಿ ಇಡುವರು. ಕಳೆದ ಬಾರಿ ಭಾರತದ ಶೂಟರ್‌ಗಳು ಬರಿಗೈಯಲ್ಲಿ ವಾಪಸಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು