ಮಂಗಳವಾರ, ನವೆಂಬರ್ 19, 2019
28 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ

ಬಿಎಫ್‌ಸಿಗೆ ದಕ್ಕದ ಜಯ; ಪಂದ್ಯ ಡ್ರಾ

Published:
Updated:
Prajavani

ಬೆಂಗಳೂರು: ಧಾರಾಕಾರ ಮಳೆಯಲ್ಲಿ ಆತಿಥೇಯರ ಜಯದ ಕನಸು ಕೊಚ್ಚಿ ಹೋಯಿತು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಆರನೇ ಆವೃತ್ತಿಯಲ್ಲಿ ಶುಭಾರಂಭ ಮಾಡುವ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಆಸೆಗೆ ನಾರ್ತ್ ಈಸ್ಟ್ ಯುನೈಟೆಡ್‌ ಅಡ್ಡಿಯಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯ ಗೋಲಿಲ್ಲದೆ ಡ್ರಾ ಆಯಿತು. 

ಗಾಯಗೊಂಡಿರುವ ಮಿಡ್‌ಫೀಲ್ಡರ್ ಎರಿಕ್ ಪಾರ್ಟಲು ಮತ್ತು ಡಿಫೆಂಡರ್ ಆಲ್ಬರ್ಟ್‌ ಸೆರಾನ್ ಅನುಪಸ್ಥಿತಿಯಲ್ಲಿ ಬಿಎಫ್‌ಸಿಗೆ ಅಂತಿಮ 11ರ ಆಯ್ಕೆ ಕಠಿಣವಾಗಿತ್ತು.

ಹೊಸದಾಗಿ ತಂಡವನ್ನು ಸೇರಿ ಕೊಂಡ ನಾಲ್ವರ ಪೈಕಿ ಫಾರ್ವರ್ಡ್ ಆಟಗಾರರಾದ ಆಶಿಕ್ ಕುರುಣಿಯನ್‌ ಮತ್ತು ಮ್ಯಾನ್ಯುವಲ್ ಒನ್ವು, ಮಿಡ್‌ಫೀಲ್ಡರ್ ರಾಫೆಲ್ ಆಗಸ್ಟೊ ಅವರಿಗೆ ಅವಕಾಶ ನೀಡಿದ್ದ ಕೋಚ್ ಚಾರ್ಲ್ಸ್‌ ಕ್ವದ್ರತ್ ತಲಾ ಮೂವರು ಡಿಫೆಂಡರ್‌ಗಳು ಮತ್ತು ಫಾರ್ವರ್ಡ್‌, ನಾಲ್ವರು ಮಿಡ್‌ಫೀಲ್ಡರ್‌ಗಳನ್ನು ಕಣಕ್ಕೆ ಇಳಿಸಿದ್ದರು. ಸುನಿಲ್ ಚೆಟ್ರಿ ಬಳಗಕ್ಕೆ ಕಡಿವಾಣ ಹಾಕಲು ನಾರ್ತ್ ಈಸ್ಟ್ ಯುನೈಟೆಡ್ ಕೋಚ್‌ ರಾಬರ್ಟ್ ಜಾರ್ನಿ ನಾಲ್ವರು ಡಿಫೆಂಡರ್‌ಗಳನ್ನು ಕಣಕ್ಕೆ ಇಳಿಸಿ ವ್ಯೂಹ ರಚಿಸಿದ್ದರು. ಈ ತಂತ್ರದಲ್ಲಿ ಯಶಸ್ಸನ್ನೂ ಕಂಡರು. 

ಆರಂಭದಿಂದಲೇ ಆಕ್ರಮಣಕ್ಕೆ ಮುಂದಾದ ಬಿಎಫ್‌ಸಿ ಮೊದಲಾ ರ್ಧದಲ್ಲಿ ಆಧಿಪತ್ಯ ಸ್ಥಾಪಿಸಿತು. ಆದರೆ ಅವಕಾಶಗಳಲ್ಲಿ ಗುರಿ ಕಾಣಲು ತಂಡಕ್ಕೆ ಸಾಧ್ಯವಾಗಲಿಲ್ಲ. 2ನೇ ನಿಮಿಷದಲ್ಲೇ ಸುನಿಲ್ ಚೆಟ್ರಿ ಉತ್ತಮ ಪಾಸ್ ನೀಡಿ ಅವಕಾಶ ಸೃಷ್ಟಿಸಿದರು. ಆದರೆ ಉದಾಂತ ಸಿಂಗ್ ಒದ್ದ ಚೆಂಡು ಗುರಿ ಸೇರುವ ಮೊದಲೇ ಗೋಲ್‌ಕೀಪರ್ ಸುಭಾಷಿಷ್‌ ರಾಯ್ ಚೌಧರಿ ತಮ್ಮ ತೆಕ್ಕೆಗೆ ತೆಗೆದುಕೊಂಡರು.

5ನೇ ನಿಮಿಷದಲ್ಲಿ ಉದಾಂತ ಸಿಂಗ್‌ಗೆ ಅತ್ಯಮೋಘ ಅವಕಾಶ ಲಭಿಸಿತ್ತು. ಅಂಗಣದ ಮಧ್ಯ ದಿಂದ ಚೆಂಡಿನೊಂದಿಗೆ ಧಾವಿಸಿದ ಅವರು ಮಿಂಚಿನ ವೇಗದಲ್ಲಿ ಕ್ರಾಸ್ ಮಾಡಿದರೂ ಗುರಿ ತಲುಪಲಿಲ್ಲ.

13ನೇ ನಿಮಿಷದಲ್ಲಿ ಬಿಎಫ್‌ಸಿ ಮತ್ತೊಮ್ಮೆ ಮುನ್ನುಗ್ಗಿತು. ಎಡ ಭಾಗದಿಂದ ರಾಫೆಲ್ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಒನ್ವು ನಿಖರವಾಗಿ ಗುರಿಯತ್ತ ತಳ್ಳಿದರು. ಆದರೆ ಅಲ್ಲಿ ಕಾಯುತ್ತಿದ್ದ ರೀಗನ್ ಸಿಂಗ್, ನಾರ್ತ್ ಈಸ್ಟ್ ತಂಡವನ್ನು ಆತಂಕದಿಂದ ಪಾರು ಮಾಡಿದರು.

ಎದುರಾಳಿ ತಂಡದ ಡಿಫೆಂಡರ್‌ಗಳನ್ನು ವಂಚಿಸಿ ಮುನ್ನುಗ್ಗುವಲ್ಲಿ ಆಶಿಕ್ ಕುರುಣಿಯನ್ ಕೂಡ ಸಫಲರಾದರು. 21ನೇ ನಿಮಿಷದಲ್ಲಿ ನಾರ್ತ್ ಈಸ್ಟ್ ಮೊದಲ ಬಾರಿ ಆಕ್ರಮಣಕ್ಕೆ ಮುಂದಾಗಿ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿತು. ಆದರೆ ಮಾರ್ಟಿನ್ ಕಾವ್ಸ್‌ ಅವರ
ಪ್ರಯತ್ನವನ್ನು ಗೋಲ್‌ಕೀಪರ್ ಗುರು ಕೀರತ್ ಸಿಂಗ್ ಮೋಹಕ ಡೈವಿಂಗ್ ಮೂಲಕ ವಿಫಲಗೊಳಿಸಿದರು. 

ಆಕ್ರಮಣಕಾರಿ ಆಟದ ದ್ವಿತೀಯಾರ್ಧ: ದ್ವಿತೀಯಾರ್ಧದಲ್ಲಿ ಲಯ ಕಂಡು ಕೊಂಡ ನಾರ್ತ್ ಈಸ್ಟ್‌ ಆಕ್ರಮಣಕ್ಕೆ ಮುಂದಾಗುತ್ತಿದ್ದಂತೆ ಪಂದ್ಯ ರೋಚಕ ವಾಯಿತು. ಎರಡೂ ತಂಡಗಳು ಮುನ್ನ ಡೆಗಾಗಿ ಜಿದ್ದಾಜಿದ್ದಿಯಿಂದ ಕಾದಾಡಲು ಮುಂದಾಗುತ್ತಿದ್ದಂತೆ ಪ್ರೇಕ್ಷಕರ ಸ್ಟ್ಯಾಂಡ್‌ಗಳಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. 52ನೇ ನಿಮಿಷದಲ್ಲಿ ಜೊಸೆ ಡೇವಿಡ್ ಲ್ಯೂಡೊ ಬಳಗಕ್ಕೆ ಮುನ್ನಡೆ ಸಾಧಿಸುವ ಅತ್ಯುತ್ತಮ ಅವಕಾಶ ಲಭಿಸಿತ್ತು. ಅಸಮೊಹ್‌ ಗ್ಯಾನ್ ಒದ್ದ ಚೆಂಡು ಕ್ರಾಸ್ ಬಾರ್‌ಗೆ ತಾಗಿ ಆಚೆಗೆ ಸಾಗಿತು.

ಇಂದಿನ ಪಂದ್ಯ

ಜೆಎಫ್‌ಸಿ – ಒಡಿಶಾ ಎಫ್‌ಸಿ

ಸ್ಥಳ: ಟಾಟಾ ಕಾಂಪ್ಲೆಕ್ಸ್‌ ಜೆಮ್‌ಶೆಡ್‌ಪುರ

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರತಿಕ್ರಿಯಿಸಿ (+)