ಭಾನುವಾರ, ಮೇ 22, 2022
27 °C

ಊಬರ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆಹಸ್‌, ಡೆನ್ಮಾರ್ಕ್‌: ಊಬರ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಸವಾಲು ಅಂತ್ಯಗೊಂಡಿದೆ. ಗುರುವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜಪಾನ್‌ 3–0ಯಿಂದ ಭಾರತದ ಎದುರು ಗೆದ್ದಿತು.

ಥಾಮಸ್‌ ಕಪ್ ಟೂರ್ನಿಯಲ್ಲಿ ಭಾರತ ಪುರುಷರ ತಂಡವು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಚೀನಾ ಎದುರು ಮಣಿಯಿತು.

ಜಪಾನ್‌ ಎದುರು ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಾಳವಿಕಾ ಬಾನ್ಸೋದ್‌ ಅವರು 12-21, 17-21ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಅಕಾನೆ ಯಮಗುಚಿ ಎದುರು ಎಡವಿದರು. ಕೇವಲ 24 ನಿಮಿಷಗಳಲ್ಲಿ ಈ ಹಣಾಹಣಿ ಅಂತ್ಯವಾಯಿತು.

ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ– ಋತುಪರ್ಣಾ ಪಂಡಾ ಜೋಡಿಯು 8–21, 10–21ರಿಂದ ಯೂಕಿ ಫುಕುಶಿಮಾ ಮತ್ತು ಮಯು ಮತ್ಸುಮೊಟೊ ಎದುರು ನಿರಾಸೆ ಅನುಭವಿಸಿದರು. ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಅದಿತಿ ಭಟ್‌ ಕೂಡ ಮುಗ್ಗರಿಸಿದರು. ಕೇವಲ 29 ನಿಮಿಷಗಳಲ್ಲಿ ಮುಕ್ತಾಯವಾದ ಸೆಣಸಾಟದಲ್ಲಿ ಅವರು 6-21 7-21ರಿಂದ ಸಯಕಾ ತಕಹಶಿ ಎದುರು ಸೋತರು. ‘ಬೆಸ್ಟ್ ಆಫ್‌ ಫೈವ್‘ ಮಾದರಿಯ ಈ ಪಂದ್ಯದಲ್ಲಿ ಮೂರು ಸುತ್ತು ತನ್ನದಾಗಿಸಿಕೊಂಡು ಜಪಾನ್‌ ಸೆಮಿಫೈನಲ್‌ ಪ್ರವೇಶಿಸಿತು.

ಥಾಮಸ್‌ ಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ಆಟಗಾರರು 1–4ರಿಂದ ಚೀನಾ ತಂಡಕ್ಕೆ ಮಣಿದರು. ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ 21-14, 21-14 ಹೆ ಜಿಂಗ್‌ ಟಿಂಗ್‌– ಜೊ ಹಾವೊ ಡಾಂಗ್ ಎದುರು ಗೆದ್ದು ಬೀಗಿದರು. ಆದರೆ ಸಿಂಗಲ್ಸ್ ಹಣಾಹಣಿಗಳಲ್ಲಿ ಕಿದಂಬಿ ಶ್ರೀಕಾಂತ್‌ 12-21, 16-21ರಿಂದ ಶಿ ಯು ಒಯಿ ಎದುರು, ಸಮೀರ್ ವರ್ಮಾ 21-14, 9-21, 22-24ರಿಂದ ಲೂ ಗುವಾಂಗ್ ಜೂ ಎದುರು ಎಡವಿದರು. ಕಿರಣ್ ಜಾರ್ಜ್‌ ಕೂಡ 15-21, 17-21ರಿಂದ ಲಿ ಶಿಂಗ್ ಫೆಂಗ್ ಎದುರು ಕೈಚೆಲ್ಲಿದರು. ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಎಂ. ಆರ್‌. ಅರ್ಜುನ್‌– ಧೃವ ಕಪಿಲ ಜೋಡಿಯು ಎಡವಿತು.

ಆದರೆ ಈಗಾಗಲೇ ಭಾರತ ಪುರುಷರ ತಂಡ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು