ಮಹಿಳಾ ಕ್ರಿಕೆಟ್: ಗಟ್ಟಿ ಬೇರು– ಹೊಸ ಚಿಗುರು

ಮಂಗಳವಾರ, ಮಾರ್ಚ್ 19, 2019
21 °C

ಮಹಿಳಾ ಕ್ರಿಕೆಟ್: ಗಟ್ಟಿ ಬೇರು– ಹೊಸ ಚಿಗುರು

Published:
Updated:
Prajavani

ಮಹಿಳಾ ಕ್ರಿಕೆಟ್‌ ಎಂದರೆ ಮೂಗು ಮುರಿಯುತ್ತಿದ್ದವರಿಗೆ ಬ್ಯಾಟ್‌ ಮೂಲಕ ಉತ್ತರ ಕೊಟ್ಟು ತಮ್ಮತ್ತ ಕಣ್ಣೆತ್ತಿ ನೋಡುವಂತೆ ಮಾಡಿದವರು ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂದಾನ ಮುಂತಾದ ಆಟಗಾರ್ತಿಯರು. 29 ವರ್ಷದ ಹರ್ಮನ್‌ಪ್ರೀತ್ ಭಾರತ ಮಹಿಳಾ ಕ್ರಿಕೆಟ್‌ನ ಬ್ಯಾಟಿಂಗ್‌ಗೆ ಸ್ಫೋಟಕ ಶಕ್ತಿ ತುಂಬಿದವರು. ಅವರ ನೆರಳಲ್ಲೇ ಬೆಳೆದ 22ರ ಹರಯದ ಸ್ಮೃತಿ ಮಹಿಳಾ ಕ್ರಿಕೆಟ್‌ಗೆ ಸೊಗಸು ತುಂಬಿದರು. ಆಸ್ಟ್ರೇಲಿಯಾದ ಬೆಲಿಂದಾ ಕ್ಲರ್ಕ್‌, ಶ್ರೀಲಂಕಾದ ಚಾಮರಿ ಅಟಪಟ್ಟು, ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್‌, ವೆಸ್ಟ್ ಇಂಡೀಸ್‌ನ ಸ್ಟೆಫಾನಿ ಟೇಲರ್‌ ಮುಂತಾದವರು ಆಳಿದ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಆಟಗಾರ್ತಿಯರೂ ಈಗ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಹೊಸ ಪೀಳಿಗೆಯವರು ಇದಕ್ಕೆ ಇನ್ನಷ್ಟು ಇಂಬು ತುಂಬಿದ್ದಾರೆ.

ಜೆಮಿಮಾ ರಾಡ್ರಿಗಸ್‌

ಜನನ 2000, ಸೆಪ್ಟೆಂಬರ್‌ 5

ರಾಜ್ಯ ಮಹಾರಾಷ್ಟ್ರ

ತಂಡದಲ್ಲಿ ಪಾತ್ರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌

ಪಂದ್ಯಗಳು (ಏಕದಿನ) 9

ರನ್‌ 186

ಟ್ವೆಂಟಿ–20 22

ರನ್‌ 593

ತಂಡ ಪ್ರವೇಶಿಸಿದ ಮೊದಲ ದಿನದಿಂದಲೇ ಹೆಸರು ಗಳಿಸಿರುವ ಜೆಮಿಮಾ ರಾಡ್ರಿಗಸ್‌ ಏಕದಿನ ಕ್ರಿಕೆಟ್‌ನಲ್ಲಿ ಒಂದು ಮತ್ತು ಟ್ವೆಂಟಿ–20ಯಲ್ಲಿ ಐದು ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಈ ವರ್ಷದ ಜನವರಿಯಲ್ಲಿ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಅಜೇಯ 81 ರನ್‌ ಸಿಡಿಸಿದ್ದ ಅವರು ಫೆಬ್ರುವರಿಯಲ್ಲಿ ಅದೇ ತಂಡದ ವಿರುದ್ಧ 72 ರನ್ ಗಳಿಸಿದ್ದರು. ಇಂಗ್ಲೆಂಡ್ ಎದುರಿನ ಸರಣಿ ಜಯದಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು.

ದೀಪ್ತಿ ಶರ್ಮಾ

ಜನನ 1997, ಆಗಸ್ಟ್‌ 24

ರಾಜ್ಯ ಉತ್ತರ ಪ್ರದೇಶ

ತಂಡದಲ್ಲಿ ಪಾತ್ರ ಆಲ್‌ರೌಂಡರ್‌

ಪಂದ್ಯಗಳು (ಏಕದಿನ) 47

ರನ್‌ 1535; ವಿಕೆಟ್‌ 55

(ಟ್ವೆಂಟಿ–20) 27

ರನ್‌ 153; ವಿಕೆಟ್‌ 26

ಭಾರತ ಏಕದಿನ ಮತ್ತು ಟ್ವೆಂಟಿ–20 ತಂಡಗಳ ಪ್ರಮುಖ ಆಟಗಾರ್ತಿ ದೀಪ್ತಿ ಎಡಗೈ ಬ್ಯಾಟ್ಸ್‌ವುಮನ್ ಮತ್ತು ಆಫ್‌ ಬ್ರೆಕ್‌ ಬೌಲರ್‌. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲದೆ, ಫೀಲ್ಡಿಂಗ್‌ ವಿಭಾಗದಲ್ಲೂ ಭಾರತದ ಮಹಿಳಾ ಕ್ರಿಕೆಟಿಗರ ಪೈಕಿ ಅಗ್ರ ಸ್ಥಾನ ಇವರಿಗಿದೆ. ಕಳೆದ ವರ್ಷ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಮೂರನೇ ಸ್ಥಾನಕ್ಕೇರಿ ಗಮನ ಸೆಳೆದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 20ಕ್ಕೆ6 ವಿಕೆಟ್ ಕಬಳಿಸಿದ ಶ್ರೇಯವೂ ಇವರಿಗೆ ಸೇರಬೇಕು.


ರಾಧಾ ಯಾದವ್‌

ರಾಧಾ ಯಾದವ್‌

ಜನನ 2000, ಏಪ್ರಿಲ್‌ 21

ರಾಜ್ಯ ಮಹಾರಾಷ್ಟ್ರ

ತಂಡದಲ್ಲಿ ಪಾತ್ರ ಬೌಲರ್‌

ಪಂದ್ಯಗಳು (ಟ್ವೆಂಟಿ–20) 17

ವಿಕೆಟ್‌ 21

ಎಡಗೈ ಸ್ಪಿನ್ನರ್‌ ರಾಧಾ ಯಾದವ್ ಕಳೆದ ವರ್ಷ ಐರ್ಲೆಂಡ್ ಎದುರು ನಡೆದ ಟ್ವೆಂಟಿ–20 ಪಂದ್ಯದಲ್ಲಿ 25 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿ ಗಮನ. ಆಸ್ಟ್ರೇಲಿಯಾ ಎದುರು 13ಕ್ಕೆ2, ಇಂಗ್ಲೆಂಡ್ ವಿರುದ್ಧ 21ಕ್ಕೆ2, ನ್ಯೂಜಿಲೆಂಡ್ ವಿರುದ್ಧ 31ಕ್ಕೆ2 ವಿಕೆಟ್ ಸಾಧನೆಯನ್ನೂ ಮಾಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಬರೋಡ ಪರವಾಗಿ ಆಡುತ್ತಿರುವ ಅವರು ಸ್ಪಿನ್‌ ದಾಳಿಯಲ್ಲಿ ವೈವಿಧ್ಯವನ್ನು ಮೆರೆದು ಎದುರಾಳಿಗಳನ್ನು ಕಂಗೆಡಿಸುವಲ್ಲಿ ಸಮರ್ಥರು.

ಅರುಂಧತಿ ರೆಡ್ಡಿ

ಜನನ 1997 ಅಕ್ಟೋಬರ್‌ 4

ರಾಜ್ಯ ಆಂಧ್ರಪ್ರದೇಶ

ತಂಡದಲ್ಲಿ ಪಾತ್ರ ಬೌಲರ್‌

ಪಂದ್ಯಗಳು (ಟ್ವೆಂಟಿ–20) 12

ವಿಕೆಟ್‌ 10

ಭಾರತ ‘ಎ’ ತಂಡದಲ್ಲಿ ಅಮೋಘ ಸಾಧನೆ ಮಾಡಿ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದ ಅರುಂಧತಿ ರೆಡ್ಡಿ ಫೆಬ್ರುವರಿ ತಿಂಗಳ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟ್ವೆಂಟಿ–20 ಸರಣಿಯಲ್ಲಿ ಭಾರತದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದರು. ಶ್ರೀಲಂಕಾದಲ್ಲಿ ಪದಾರ್ಪಣೆ ಪಂದ್ಯ ಆಡಿದ ಅವರು ನಂತರ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಉತ್ತಮ ಸಾಧನೆ ಮಾಡಿದ್ದಾರೆ.


ತನಿಯಾ ಭಾಟಿಯ

ತನಿಯಾ ಭಾಟಿಯ

ಜನನ 1997 ನವೆಂಬರ್‌ 28

ರಾಜ್ಯ ಪಂಜಾಬ್‌

ತಂಡದಲ್ಲಿ ಪಾತ್ರ ವಿಕೆಟ್ ಕೀಪರ್‌

ಪಂದ್ಯಗಳು (ಏಕದಿನ) 8

ರನ್‌ 93

ಔಟ್ ಮಾಡಿದ್ದು 11

ಟ್ವೆಂಟಿ–20 28

ರನ್‌ 89

ಔಟ್ ಮಾಡಿದ್ದು 35

ವಿಕೆಟ್ ಕೀಪಿಂಗ್‌ನಲ್ಲಿ ಭಾರತ ತಂಡದ ಹೆಮ್ಮೆಯ ಆಟಗಾರ್ತಿ ತನಿಯಾ ಭಾಟಿಯ. ಶ್ರೀಲಂಕಾದಲ್ಲಿ ಏಕದಿನ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟ್ವೆಂಟಿ–20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ತನಿಯಾ ವಿಕೆಟ್ ಹಿಂದೆ ಕ್ಯಾಚಿಂಗ್ ಮತ್ತು ಸ್ಟಂಪಿಂಗ್ ಎರಡರಲ್ಲೂ ಕೈಚಳಕ ತೋರಿಸಿದ್ದಾರೆ. ಕಳೆದ ವರ್ಷದ ನಡೆದ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ಎದುರಿನ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ಭಾರತ ತಂಡದ ಕೈಯಿಂದ ಹೆಚ್ಚು ರನ್‌ಗಳು ಹರಿದು ಹೋಗದಂತೆ ನೋಡಿಕೊಂಡ ಅವರು ಕಳೆದ ತಿಂಗಳಲ್ಲಿ ನಡೆದ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಚಾಕಚಕ್ಯ ಮೆರೆದಿದ್ದರು.


ಹರ್ಲಿನ್‌ ಡಿಯೋಲ್‌

ಹರ್ಲಿನ್‌ ಡಿಯೋಲ್‌

ಜನನ 1998 ಜೂನ್‌ 21

ರಾಜ್ಯ ಪಂಜಾಬ್‌

ತಂಡದಲ್ಲಿ ಪಾತ್ರ ಆಲ್‌ರೌಂಡರ್‌

ಪಂದ್ಯ (ಏಕದಿನ) 1

ರನ್‌ 2

ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್ ಮತ್ತು ಆಫ್‌ ಬ್ರೆಕ್‌ ಬೌಲರ್ ಆಗಿರುವ ಹರ್ಲಿನ್‌, ದೇಶಿ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶ ಪರ ಸಾಧನೆ ಮಾಡುತ್ತ ರಾಷ್ಟ್ರೀಯ ತಂಡದ ಕದ ತಟ್ಟಿದ್ದರು. ಇಂಗ್ಲೆಂಡ್ ವಿರುದ್ಧ ಕಳೆದ ತಿಂಗಳಲ್ಲಿ ನಡೆದಿದ್ದ ಮಂಡಳಿ ಅಧ್ಯಕ್ಷರ ಮಹಿಳಾ ಇಲೆವನ್ ಪರ ಕಣಕ್ಕೆ ಇಳಿದು ತೋರಿದ ಸಾಮರ್ಥ್ಯ ಅವರಿಗೆ ಇಂಗ್ಲೆಂಡ್ ಎದುರು ಭಾರತ ತಂಡದ ಪರವಾಗಿ ಆಡಲು ಅವಕಾಶ ದೊರಕಿಸಿಕೊಟ್ಟಿತು. ಪದಾರ್ಪಣೆ ಪಂದ್ಯದಲ್ಲಿ ಮಿಂಚಲು ಸಾಧ್ಯವಾಗದಿದ್ದರೂ ಭಾರತ ತಂಡಕ್ಕೆ ಆಸ್ತಿಯಾಗುವ ಭರವಸೆ ಮೂಡಿಸಿದ್ದಾರೆ.


ಪ್ರಿಯಾ ಪೂನಿಯಾ

ಪ್ರಿಯಾ ಪೂನಿಯಾ

ಜನನ 1996 ಆಗಸ್ಟ್‌ 6

ರಾಜ್ಯ ರಾಜಸ್ಥಾನ್‌

ತಂಡದಲ್ಲಿ ಪಾತ್ರ ಆಲ್‌ರೌಂಡರ್‌

ಪಂದ್ಯ (ಟ್ವೆಂಟಿ–20) 3

ರನ್‌ 9

ಬಲಗೈ ಬ್ಯಾಟ್ಸ್‌ವುಮನ್‌ ಮತ್ತು ಮಧ್ಯಮ ವೇಗಿಯಾಗಿರುವ ಪ್ರಿಯಾ ಚುಟುಕು ಕ್ರಿಕೆಟ್‌ನಲ್ಲಿ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ನಿಭಾಯಿಸುವ ತಾಕತ್ತು ಹೊಂದಿದ್ದಾರೆ. ದೆಹಲಿ ಪರ ದೇಶಿ ಕ್ರಿಕೆಟ್ ಆಡುತ್ತಿರುವ ಅವರು ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟ್ವೆಂಟಿ–20 ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. ಹೊಸ ನಿರೀಕ್ಷೆಗಳೊಂದಿಗೆ ಅವರು ಮತ್ತೊಮ್ಮೆ ತಂಡದಲ್ಲಿ ಸ್ಥಾನ ಗಳಿಸಲು ಕಾಯುತ್ತಿದ್ದಾರೆ.


ದೇವಿಕಾ ವೈದ್ಯ

ದೇವಿಕಾ ವೈದ್ಯ

ಜನನ 1997, ಆಗಸ್ಟ್ 13

ರಾಜ್ಯ ಮಹಾರಾಷ್ಟ್ರ

ತಂಡದಲ್ಲಿ ಪಾತ್ರ ಆಲ್‌ರೌಂಡರ್‌

ಪಂದ್ಯ (ಏಕದಿನ) 9

ರನ್‌ 169

ವಿಕೆಟ್‌ 6

ಎಡಗೈ ಬ್ಯಾಟಿಂಗ್ ಮತ್ತು ಲೆಗ್‌ ಬ್ರೆಕ್ ಗೂಗ್ಲಿ ಬೌಲಿಂಗ್ ಮಾಡಬಲ್ಲ ದೇವಿಕಾ ಅವರು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಪಾಕಿಸ್ತಾನ, ಇಂಗ್ಲೆಂಡ್‌ ಮುಂತಾದ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಹೆಚ್ಚು ಸಾಧನೆ ಮಾಡಲು ಆಗದಿದ್ದರೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ಸಲ್ಲಿಸಿದ್ದಾರೆ. ಏಕದಿನ ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಗರಿಷ್ಠ 89 ರನ್‌ ಗಳಿಸಿ ಭವಿಷ್ಯದ ತಾರೆಯಾಗಿ ಹೊರಹೊಮ್ಮಿದ್ದಾರೆ.

ಇವರೂ ಸಜ್ಜಾಗುತ್ತಿದ್ದಾರೆ...

ಮಂಡಳಿ ಅಧ್ಯಕ್ಷರ ಮಹಿಳಾ ಇಲೆವನ್‌ ಪರ ಮಿಂಚಿದ ಕೆಲ ಯುವ ಆಟಗಾರ್ತಿಯುರು ಭಾರತ ತಂಡದ ಬಾಗಿಲ ಬಳಿ ನಿಂತಿದ್ದಾರೆ. ಅಂಗಣದಲ್ಲಿ ಅವರು ತೋರುವ ಛಲ, ಶೀಘ್ರದಲ್ಲೇ ರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆ ಮೂಡಿಸಿದೆ.

ಎಡಗೈ ಬ್ಯಾಟಿಂಗ್ ಮತ್ತು ಆಫ್ ಬ್ರೆಕ್ ಬೌಲಿಂಗ್ ಮಾಡುವ ಕೇರಳದ ಮಿನ್ನು ಮಿನಿ, ಬ್ಯಾಟ್ಸ್‌ವುಮನ್ ಮತ್ತು ಮಧ್ಯಮ ಕ್ರಮಾಂಕದ ಬೌಲರ್ ಮಹಾರಾಷ್ಟ್ರದ ಮನಾಲಿ ದಕ್ಷಿಣಿ, ಒಡಿಶಾದ ಬೌಲರ್ ರೀಮಾ ಲಕ್ಷ್ಮಿ ಎಕ್ಕ, ಬ್ಯಾಟ್ಸ್‌ವುಮನ್ ಮತ್ತು ಮಧ್ಯಮ ಕ್ರಮಾಂಕದ ಬೌಲರ್ ಮಹಾರಾಷ್ಟ್ರದ ಭಾರತಿ ಫಲ್ಮುಲಿ, ಆಫ್‌ ಬ್ರೆಕ್ ಬೌಲಿಂಗ್ ಕೂಡ ಮಾಡಬಲ್ಲ ಆಂಧ್ರಪ್ರದೇಶದ ಬ್ಯಾಟ್ಸ್‌ವುಮನ್‌ ಕಲ್ಪನಾ ರವಿ, ಎಡಗೈ ಬ್ಯಾಟ್ಸ್‌ವುಮನ್ ಮತ್ತು ಎಡಗೈ ಮಧ್ಯಮ ವೇಗಿ ಹಿಮಾಚಲ ಪ್ರದೇಶದ ತನುಜಾ ಕನ್ವರ್‌, ಮಧ್ಯಮ ವೇಗಿ ಆಂಧ್ರ ಪ್ರದೇಶದ ಸಬ್ಬಿನೇನಿ ಮೇಘನಾ... ಹೀಗೆ ಸಾಗುತ್ತಿದೆ ಈ ಆಟಗಾರ್ತಿಯರ ಪಟ್ಟಿ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !