ಬುಧವಾರ, ಡಿಸೆಂಬರ್ 2, 2020
25 °C

ಸ್ಯಾಫ್‌ನಲ್ಲಿ ಸೂಪರ್‌ ‘ವಿಶ್ವ’ದಲ್ಲಿ ಬೇಕು ಪವರ್‌

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಎ ರಡು ವರ್ಷಗಳ ಹಿಂದೆ ನಡೆದ ಆ ಘಟನೆಯನ್ನು ಹೆಚ್ಚಿನವರು ಮರೆತಿರಲಾರರು. ಕಾಶ್ಮೀರದ ಬೀದಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲೆಸೆದ ಅಫ್ಸಾನ್ ಆಶಿಕ್ ಎಂಬ ಕಾಲೇಜು ಹುಡುಗಿ ಒಂದು ದಿನ ಏಕಾಏಕಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಗೆ ಕಾರಣಳಾಗಿದ್ದಳು.

ನಂತರ ಆಕೆ ಫುಟ್‌ಬಾಲ್ ಆಟಗಾರ್ತಿಯಾದದ್ದು, ಮುಂಬೈನ ಕ್ಲಬ್ ಪರವಾಗಿ ಆಡಿ ಮೊದಲ ಗೋಲಿನ ಸವಿಯುಂಡದ್ದು, ಕಾಶ್ಮೀರ ಮಹಿಳಾ ಫುಟ್‌ಬಾಲ್‌ ತಂಡದ ನಾಯಕಿಯಾದದ್ದು ಎಲ್ಲವೂ ಈಗ ಇತಿಹಾಸ.

ಭಾರತದಲ್ಲಿ ಮಹಿಳೆಯರ ಫುಟ್‌ಬಾಲ್‌ ತಂಡದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಗೊತ್ತಾದದ್ದೇ ಈ ಘಟನೆಯ ನಂತರ. ವಾಸ್ತವದ‌ಲ್ಲಿ ಭಾರತದ ಮಹಿಳಾ ಫುಟ್‌ಬಾಲ್ ತಂಡ 1970ರಿಂದಲೇ ಸಾಧನೆ ಮಾಡುತ್ತಿದೆ. 80ರ ದಶಕದ ಕೊನೆಯಲ್ಲಿ ಮತ್ತು 90ರ ದಶಕದ ಆರಂಭದ ವರ್ಷಗಳಲ್ಲಿ ಎರಡು ಬಾರಿ ಏಷ್ಯಾಕಪ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಅಗಿ ಮೆರೆದಿತ್ತು. ಆ ಸಂದರ್ಭದಲ್ಲಿ ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದು ಎಂದೇ ಭಾರತವ‌ನ್ನು ಪರಿಗಣಿಸಲಾಗುತ್ತಿತ್ತು.

ನಂತರ ತಂಡ ಹೆಸರು ಮಾಡಿದ್ದು 2010ರಲ್ಲಿ. ಆ ವರ್ಷ ಆರಂಭಗೊಂಡ ಸ್ಯಾಫ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ನಂತರ ಸತತ ನಾಲ್ಕು ಬಾರಿಯೂ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿದೆ. ಈ ಬಾರಿಯೂ ತಂಡದ ಸಾಧನೆಗೆ ಸಾಟಿ ಇಲ್ಲದಾಯಿತು. ಗುಂಪು ಹಂತದಿಂದಲೇ ಎದುರಾಳಿಗಳನ್ನು ಹಣಿಯುತ್ತ ಬಂದ ಅದಿತಿ ಚೌಹಾಣ್‌ ಮತ್ತು ಬಳಗ ಅಜೇಯವಾಗಿಯೇ ಫೈನಲ್‌ ಪ್ರವೇಶಿಸಿತು. ಫೈನಲ್‌ನಲ್ಲಿ ಆತಿಥೇಯರನ್ನೇ ಸೋಲಿಸಿ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಉತ್ತಮ ಆರಂಭದ ನಂತರ ಪತನದ ಹಾದಿ

ಏಷ್ಯಾದಲ್ಲಿ ಮಹಿಳೆಯರ ಫುಟ್‌ಬಾಲ್‌ನ ಬೀಜ ಬಿದ್ದದ್ದು 1970ರ ಅವಧಿಯಲ್ಲಿ. ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಚಟುವಟಿಕೆ ತೀವ್ರಗೊಂಡದ್ದು 1975ರ ಸಂದರ್ಭದಲ್ಲಿ. 1980ರಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ರನ್ನರ್ ಆಪ್ ಆಯಿತು. ಮುಂದಿನ ವರ್ಷ ಮೂರನೇ ಸ್ಥಾನಕ್ಕೆ ಕುಸಿದ ತಂಡ 1983ರಲ್ಲಿ ಮತ್ತೆ ರನ್ನರ್ ಅಪ್‌ ಆಯಿತು. ನಂತರ ದಿಢೀರ್ ಪತನದ ಹಾದಿ ಹಿಡಿಯಿತು. 1998ರ ಏಷ್ಯನ್‌ ಕ್ರೀಡಾಕೂಟದ ಫೂಟ್‌ಬಾಲ್‌ನಲ್ಲಿ ಚೀನಾ ಥೈಪೆ ವಿರುದ್ಧ 1–13ರಿಂದ ಮತ್ತು ಚೀನಾ ವಿರುದ್ಧ 0–18ರಿಂದ ಸೋತು ತೀವ್ರ ನಿರಾಸೆಗೊಂಡಿತ್ತು.

ಆದರೆ 2009ರ ವೇಳೆ ತಂಡಕ್ಕೆ ಪುನಶ್ಚೇತನ ಲಭಿಸಿತು. ಇದರ ಫಲ 2010ರ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಕಂಡಿತು. ನಂತರ ತಂಡ ಬಲಿಷ್ಠವಾಗುತ್ತ ಸಾಗಿತು. ಆದರೆ ಇಲ್ಲಿಯ ತನಕ ವಿಶ್ವಕಪ್‌ ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಮಾತ್ರ ಸಾಧ್ಯವಾಗಲೇ ಇಲ್ಲ.

ಪ್ರಯತ್ನಕ್ಕೆ ಮಿಶ್ರ ಫಲ

ಐದನೇ ಬಾರಿ ‘ಸ್ಯಾಫ್‌ ಚಾಂಪಿಯನ್’ ಆದ ತಂಡದ ಮುಂದೆ ಈಗ ಇರುವ ಸವಾಲು ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಪಂದ್ಯ. ಏಷ್ಯಾದಿಂದ ಅರ್ಹತೆ ಗಳಿಸಲು ನಡೆಯುವ ‘ಆಯ್ಕೆ ಪ್ರಕ್ರಿಯೆ’ಯ ಭಾಗವಾಗಿ ಏಪ್ರಿಲ್ ಮೂರರಂದು ತಂಡ ಇಂಡೊನೇಷ್ಯಾವನ್ನು ಎದುರಿಸಲಿದೆ. 2012ರ ಒಲಿಂಪಿಕ್ಸ್‌ ಅರ್ಹತೆಗಾಗಿ ನಡೆದ ಪಂದ್ಯಗಳಲ್ಲಿ ಸ್ವಲ್ಪದರಲ್ಲೇ ಎಡವಿತ್ತು. ಮೊದಲ ಲೆಗ್‌ನಲ್ಲಿ ಉತ್ತಮವಾಗಿಯೇ ಆಡಿದ್ದ ತಂಡ ಎರಡನೇ ಲೆಗ್‌ನಲ್ಲಿ ಸೋತು ಹೊರಬಿದ್ದಿತ್ತು. 2016ರ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲೂ ಇದೇ ರೀತಿಯ ಫಲಿತಾಂಶ ಕಂಡುಬಂದಿತ್ತು.

ಈ ಬಾರಿ ಈಗಾಗಲೇ ಇಂಡೊನೇಷ್ಯಾ ಮತ್ತು ಹಾಂಕಾಂಗ್ ಎದುರಿನ ತಲಾ ಎರಡು ಪಂದ್ಯಗಳಲ್ಲೂ ಗೆದ್ದಿರುವ ತಂಡ ಮುಂದಿನ ಹಾದಿಯಲ್ಲಿ ಕಲ್ಲು–ಮುಳ್ಳು ದಾಟಿ ಯಶಸ್ವಿಯಾಗಿ ಸಾಗುವುದೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾಗಿರುವುದು ಆಟಗಾರ್ತಿಯರ ಸಾಮರ್ಥ್ಯದಿಂದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು