ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರ ಮೇಲೆ ‘ಹಿರಿಯ’ ನಿರೀಕ್ಷೆ...

Last Updated 28 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಈ ಬಾರಿಯ ಏಷ್ಯನ್‌ ಕ್ರೀಡಾಕೂಟಕ್ಕೆ ಬ್ಯಾಸ್ಕೆಟ್‌ಬಾಲ್‌ ತಂಡಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪುರುಷರ ತಂಡ ನಿರಾಸೆಗೆ ಒಳಗಾಗಿತ್ತು. ಕಾಮನ್‌ವೆಲ್ತ್ ಕೂಟದಲ್ಲಿ ಕಳಪೆಯಾಗಿ ಆಡಿದ್ದಕ್ಕಾಗಿ ತಂಡ ಬೆಲೆ ತೆತ್ತಿತ್ತು. ಏಷ್ಯನ್ ಕೂಟಕ್ಕೆ ಕಳುಹಿಸದೇ ಇರಲು ಭಾರತ ಒಲಿಂಪಿಕ್ಸ್‌ ಸಂಸ್ಥೆ ನಿರ್ಧರಿಸಿತ್ತು. ಕೂಟದಲ್ಲಿ ಭಾರತದ ಮಹಿಳಾ ತಂಡ ಗುಂಪು ಹಂತದಿಂದಲೇ ಹೊರಬಿದ್ದಿತ್ತು.

’ಎಕ್ಸ್‌’ ಗುಂಪಿನಲ್ಲಿದ್ದ ತಂಡ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದ್ದರಿಂದ ನಾಕೌಟ್ ಹಂತದಲ್ಲಿ ಆಡಲು ಅವಕಾಶ ಸಿಗದೇ ವಾಪಸಾಗಬೇಕಾಯಿತು. ಆದರೆ ಬಲಿಷ್ಠ ಇಂಡೊನೇಷ್ಯಾ, ಚೀನಾ ತೈಪೆ, ಕಜಕಸ್ತಾನ ಮುಂತಾದ ರಾಷ್ಟ್ರಗಳ ತಂಡಗಳ ವಿರುದ್ಧ ಕೆಚ್ಚೆದೆಯ ಆಟವಾಡಿ ಗಮನ ಸೆಳೆದಿತ್ತು. ದಕ್ಷಿಣ ಕೊರಿಯಾ ಎದುರು 50 ಪಾಯಿಂಟ್‌ಗಳಿಂದ ಸೋತದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲೂ ಸೋಲಿನ ಅಂತರ ಕಡಿಮೆ ಇತ್ತು.

ಇತ್ತೀಚೆಗೆ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ತಾಜಾ ಉದಾಹರಣೆಯಾಗಿತ್ತು ತಂಡದ ಈ ಸಾಧನೆ. ಕಳೆದ ಬಾರಿಯ ಫಿಬಾ ಏಷ್ಯಾಕಪ್‌ ಟೂರ್ನಿಯಲ್ಲಿ ಅಮೋಘ ಸಾಧನೆ ತೋರಿದ ಭಾರತ ಮಹಿಳಾ ತಂಡದವರು ‘ಬಿ’ ವಿಭಾಗದಿಂದ ‘ಎ’ ವಿಭಾಗಕ್ಕೆ ಬಡ್ತಿ ಪಡೆದಿದ್ದರು. ಈ ಅಪೂರ್ವ ಸಾಧನೆಯ ಬೆನ್ನಲ್ಲೇ ಹೊಸ ಪ್ರಯೋಗಗಳನ್ನು ಮಾಡಿದ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ ಫಲವನ್ನೂ ಕಂಡಿದೆ. ತಂಡ ಪ್ರಗತಿಯ ಹಾದಿಯಲ್ಲಿ ಸಾಗಲು ನೆರವಾಗಿದೆ.

ಕಿರಿಯರ ವಿಭಾಗದ ಬಲ
ಸೀನಿಯರ್‌ ವಿಭಾಗಕ್ಕೆ ಕಾಲಿಡುವ ಮುನ್ನ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯರು 16 ಮತ್ತು 18 ವರ್ಷದೊಳಗಿನವರ ಹಂತವನ್ನು ದಾಟಿ ಬರಬೇಕು. ಈ ಎರಡು ಹಂತಗಳಲ್ಲಿ ಉತ್ತಮ ತರಬೇತಿ ಸಿಗುತ್ತಿರುವುದರಿಂದ ಸಮರ್ಥ ಆಟಗಾರ್ತಿಯರು ಸೀನಿಯರ್ ತಂಡಕ್ಕೆ ಸಿದ್ಧರಾಗುತ್ತಿದ್ದಾರೆ.

16 ವರ್ಷದೊಳಗಿನವರ ವಿಭಾಗದಲ್ಲಿ ವೈಷ್ಣವಿ ಜಾಧವ್‌, ಪುಷ್ಪಾ ಸೆಂಥಿಲ್ ಕುಮಾರ್‌, ನೇಹಾ ಕಾರ್ವಾ, ಸಂಜನಾ ರಮೇಶ್‌ ಮುಂತಾದವರು ಭಾರತ ತಂಡದ ಆಧಾರಸ್ತಂಬ ಎನಿಸಿದ್ದಾರೆ. ಇವರ ಅಮೋಘ ಸಾಮರ್ಥ್ಯದಿಂದಾಗಿ ಈ ವರ್ಷದ 16 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆದ್ದ ತಂಡ ಮುಂದಿನ (2019) ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ‘ಎ’ ವಿಭಾಗದಿಂದ ಆಡಲು ಅರ್ಹತೆ ಗಳಿಸಿತ್ತು.

ಏಷ್ಯಾಕಪ್‌ನಲ್ಲಿ ಆಡಲು 17 ಬಾರಿ ಪ್ರಯತ್ನಿಸಿ ವಿಫಲವಾಗಿದ್ದ ಭಾರತ ಮಹಿಳೆಯರ ತಂಡ ಕಳೆದ ಬಾರಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡು ‘ಎ’ ಗುಂಪಿಗೆ ಬಡ್ತಿ ಪಡೆದುಕೊಂಡಿದೆ. 16 ವರ್ಷದೊಳಗಿವನರು ವಿಶ್ವಕಪ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲರಾದರೂ ಏಷ್ಯಾದಲ್ಲಿ ನಮ್ಮದು ಬಲಿಷ್ಠ ತಂಡ ಎಂಬುದನ್ನು ಸಾಬೀತು ಮಾಡಿತ್ತು. ಇದೀಗ 18 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್‌ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಭಾರತ ತಂಡದವರು ‘ಬಿ’ ವಿಭಾಗದಿಂದ ‘ಎ’ ವಿಭಾಗಕ್ಕೆ ಬಡ್ತಿ ಪಡೆಯುವ ಕನಸು ಹೊತ್ತಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 16 ವರ್ಷದೊಳಗಿನ ಬಾಲಕಿಯರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ‘ಬಿ’ ವಿಭಾಗದ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಭಾರತ ತಂಡ ‘ಎ’ ವಿಭಾಗಕ್ಕೆ ತೇರ್ಗಡೆ ಹೊಂದಿತ್ತು. ನಾಯಕಿ ಸಂಜನಾ ರಮೇಶ್‌, ಸೆಂಟರ್ ಆಟಗಾರ್ತಿ ಪುಷ್ಪಾ ಸೆಂಥಿಲ್ ಕುಮಾರ್‌ ಮುಂತಾದವರು ಭರವಸೆ ಮೂಡಿಸಿದ ಆಟಗಾರ್ತಿಯರಾಗಿ ಹೊರಹೊಮ್ಮಿದ್ದರು. ಈ ಬಾರಿ ನಡೆಯುತ್ತಿರುವ 18 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲೂ ಸಮರ್ಥ ಆಟಗಾರ್ತಿಯರ ಹುಡುಕಾಟ ನಡೆಯಲಿದೆ.

ಒಲಿಂಪಿಕ್ಸ್ ಮತ್ತು ವಿಶ್ವಕಪ್‌ಗೆ ಒಮ್ಮೆಯೂ ಅರ್ಹತೆ ಗಳಿಸದ ಭಾರತ ತಂಡ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿದೆಯಾದರೂ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ. ಈ ಎಲ್ಲ ಕೊರತೆಗಳನ್ನು ನೀಗಿಸಿ ಹೊಸ ದಿಸೆಯಲ್ಲಿ ಸಾಗಲು ಈಗ ಕಾಲ ಪಕ್ವವಾಗಿದೆ. ಇದೇ ನಿರೀಕ್ಷೆಯಲ್ಲಿ ತಂಡ ಅಡಿ ಇಡುತ್ತಿದೆ.

ಕಿರಿಯರ ವಿಭಾಗದ ಭರವಸೆಯ ಆಟಗಾರ್ತಿ ಸಂಜನಾ –ಪ್ರಜಾವಾಣಿ ಚಿತ್ರ
ಕಿರಿಯರ ವಿಭಾಗದ ಭರವಸೆಯ ಆಟಗಾರ್ತಿ ಸಂಜನಾ –ಪ್ರಜಾವಾಣಿ ಚಿತ್ರ

ಕೋಚ್‌ಗಳಿಗೂ ಕೋಚಿಂಗ್ ಯೋಜನೆ‌
ಭಾರತ ಸೀನಿಯರ್‌ ಮಹಿಳೆಯರ ತಂಡ ಈಗ ಏಷ್ಯಾದ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ಸೀನಿಯರ್‌ ಮತ್ತು 16 ವರ್ಷದೊಳಗಿನವರ ತಂಡಗಳು ಕಳೆದ ಬಾರಿ ಏಷ್ಯನ್‌ ಚಾಂಪಿಯನ್‌ಷಿಪ್‌ನ ಪಾಯಿಂಟ್‌ ಪಟ್ಟಿಯ ಅಗ್ರಸ್ಥಾನ ಗಳಿಸಿವೆ. 16 ಮತ್ತು 18 ವರ್ಷದೊಳಗಿನವರ ವಿಭಾಗಗಳ ಕಡೆಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು ವಿಶೇಷ ತರಬೇತಿಗೆಂದೇ ವಿದೇಶಿ ಕೋಚ್‌ಗಳನ್ನು ನೇಮಕ ಮಾಡಲಾಗಿದೆ. ಭಾರತದ ಕೋಚ್‌ಗಳಿಗೆ ತರಬೇತಿ ನೀಡುವ ವಿಶೇಷ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ಪ್ರಯತ್ನಗಳಿಗೆ ಈಗ ಫಲ ಸಿಗುತ್ತಿದೆ.
-ಚಂದರ್ ಮುಖಿ ಶರ್ಮಾ,ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT