ಮಂಗಳವಾರ, ಡಿಸೆಂಬರ್ 7, 2021
19 °C
ಇನ್ಫೊಸಿಸ್ ಫೌಂಡೇಶನ್‌ ಬ್ಯಾಡ್ಮಿಂಟನ್‌ ಟೂರ್ನಿ

ಬ್ಯಾಡ್ಮಿಂಟನ್‌ ಟೂರ್ನಿ: ಅನುಪಮಾ, ಪ್ರಿಯಾಂಶುಗೆ ಸಿಂಗಲ್ಸ್ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನುಪಮಾ ಉಪಾಧ್ಯಾಯ ಹಾಗೂ ಪ್ರಿಯಾಂಶು ರಾಜಾವತ್‌ ಅವರು ಭಾನುವಾರ ಮುಕ್ತಾಯವಾದ ಇನ್ಫೊಸಿಸ್‌ ಫೌಂಡೇಶನ್‌ ಇಂಡಿಯಾ ಇಂಟರ್‌ನ್ಯಾಶನಲ್‌ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಅನುಪಮಾ 21–19, 21–19ರಿಂದ ಉನ್ನತಿ ಹೂಡಾ ಎದುರು ಜಯ ಗಳಿಸಿದರು. 44 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಪ್ರಿಯಾಂಶು 12-21, 21-10, 21-8ರಿಂದ ರಘು ಮರಿಸ್ವಾಮಿ ಎದುರು ಗೆದ್ದು ಬೀಗಿದರು. 45 ನಿಮಿಷಗಳ ಈ ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊದಲ ಗೇಮ್‌ ಸೋತ ಪ್ರಿಯಾಂಶು ಬಳಿಕ ಪುಟಿದೆದ್ದರು. ಸತತ ಎರಡನೇ ಗೇಮ್‌ಗಳನ್ನು ತಮ್ಮದಾಗಿಸಿಕೊಂಡು ಟ್ರೋಫಿಗೆ ಮುತ್ತಿಕ್ಕಿದರು.

ಪುರುಷರ ಡಬಲ್ಸ್ ವಿಭಾಗದಲ್ಲಿ ಕೃಷ್ಣಪ್ರಸಾದ್‌ ಗರಗ್ ಹಾಗೂ ವಿಷ್ಣುವರ್ಧನ್ ಗೌಡ್‌ ಪ್ರಾಂಜಲ್ ಜೋಡಿಯು 24-22, 13-21, 22-20ರಿಂದ ಅರುಣ್ ಜಾರ್ಜ್‌– ಸನ್ಯಾಮ್ ಶುಕ್ಲಾ ಎದುರು ಜಯಿಸಿ ಪ್ರಶಸ್ತಿ ಗೆದ್ದಿತು.

ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿಯು ತ್ರೀಶಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್‌ ಅವರಿಗೆ ಒಲಿಯಿತು. ಫೈನಲ್‌ ಪಂದ್ಯದಲ್ಲಿ ಇವರಿಬ್ಬರು 23-21, 21-14ರಿಂದ ತನಿಶಾ ಕ್ರಾಸ್ಟೊ ಮತ್ತು ಋತುಪರ್ಣಾ ಪಂಡಾ ಎದುರು ಜಯ ಸಾಧಿಸಿದರು.

ಇಶಾನ್ ಭಟ್ನಾಗರ್‌ ಹಾಗೂ ತನಿಶಾ ಕ್ರಾಸ್ಟೊ ಅವರು ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಈ ಜೋಡಿಯು 21-16, 21-19ರಿಂದ ಸಾಯಿ ಪ್ರತೀಕ್‌ ಹಾಗೂ ಗಾಯತ್ರಿ ಗೋಪಿಚಂದ್‌ ಎದುರು ಗೆಲುವು ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು