ಶುಕ್ರವಾರ, ಜನವರಿ 24, 2020
28 °C
ಮಂಗಳೂರು ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ

ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕೂಟ: ಸೋನಲ್, ಕೋಮಲ್‌ ದಾಖಲೆ

ಮಹೇಶ್‌ ಎಸ್‌. ಕನ್ನೇಶ್ವರ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉದಯಪುರದ ಮೋಹನ್‌ ಲಾಲ್‌ ಸುಖಾಡಿಯಾ ವಿಶ್ವವಿದ್ಯಾಲಯದ ಸೋನಲ್ ಸುಖ್‍ವಾಲ್, 80ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕೂಟದಲ್ಲಿ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕೂಟ ದಾಖಲೆ ಸ್ಥಾಪಿಸಿದರು. ಈ ಕೂಟದ ಮೂರನೇ ದಿನ ಎರಡು ದಾಖಲೆಗಳು ಮೂಡಿಬಂದಿದ್ದು, ಇನ್ನೊಂದನ್ನು ಸಾವಿತ್ರಿಬಾಯಿ ಫುಲೆ ವಿವಿಯ ಕೋಮಲ್‌ ಜಗದಾಲೆ 3,000 ಮೀಟರ್‌ ಸ್ಪೀಪಲ್ ಚೇಸ್‌ನಲ್ಲಿ ಸ್ಥಾಪಿಸಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ,  ಸೋನಲ್, 20 ಕಿ.ಮೀ ನಡಿಗೆ ಸ್ಪರ್ಧೆಯನ್ನು 1 ಗಂಟೆ 38 ನಿಮಿಷ 40 ಸೆಕೆಂಡುಗಳ ದಾಖಲೆ ಅವಧಿಯಲ್ಲಿ ಪೂರೈಸಿದರು. ಈ ಹಿಂದಿನ ದಾಖಲೆ, ರೋಹ್ಟಕ್‌ನ  ಮಹರ್ಷಿ ದಯಾನಂದ ವಿವಿಯ ಎಂ.ಆರ್. ರವೀನ (ಕಾಲ: 1 ಗಂಟೆ 43 ನಿಮಿಷ 58 ಸೆ) ಹೆಸರಿನಲ್ಲಿತ್ತು. ಮಂಗಳೂರು ವಿ.ವಿ.ಯ ಬಂಧನ್‌ ಪಾಟೀಲ್‌ ಮೂರನೇ ಸ್ಥಾನ ಪಡೆದರು.

ಕೋಮಲ್‌, ಸ್ಟೀಪಲ್ ಚೇಸ್‌ ಓಟವನ್ನು 10 ನಿ. 23: 65 ಸೆ.ಗಳ ಅವಧಿಯಲ್ಲಿ ಪೂರೈಸಿದರು. ಈ ಹಿಂದಿನ ದಾಖಲೆ ಮಂಗಳೂರು ವಿವಿಯ ಭಗತ್ ಶೀತಲ್ ಜಾಮಜಿ (10 ನಿ.34:53 ಸೆ) ಅವರ ಹೆಸರಿನಲ್ಲಿತ್ತು.

ಮೂರನೇ ದಿನದ  ಸ್ಪರ್ಧೆಗಳ ನಂತರ ಮಂಗಳೂರು ವಿಶ್ವವಿದ್ಯಾಲಯ ಒಟ್ಟು 86 ಪಾಯಿಂಟ್‌ (4 ಚಿನ್ನ, 6 ಬೆಳ್ಳಿ, 4 ಕಂಚು) ದಾಖಲಿಸಿ ಅಗ್ರಸ್ಥಾನದಲ್ಲಿದೆ. ಮದ್ರಾಸ್‌ ವಿಶ್ವವಿದ್ಯಾಲಯ 45 ಮತ್ತು ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ 29 ಪಾಯಿಂಟ್ ಸಂಗ್ರಹಿಸಿವೆ.

ಮೂರನೇ ದಿನದ ಫಲಿತಾಂಶಗಳು ಇಂತಿವೆ 

ಪುರುಷರ ವಿಭಾಗ: 400 ಮೀ ಓಟ: ರಾಜೇಶ್ ಆರ್. (ಮದ್ರಾಸ್ ವಿವಿ) -1, ಜಶನ್‌ಪ್ರೀತ್ ಸಿಂಗ್ (ಲವ್ಲಿ ಫ್ರೊಫೆಶನಲ್ ವಿವಿ)-2, ಪರಮ್‌ವೀರ್ ಸಿಂಗ್ (ಲವ್ಲಿ ಫ್ರೊಫೆಶನಲ್ ವಿವಿ)-3, ಕಾಲ: 47.90 ಸೆ; ಡಿಸ್ಕಸ್‌ ಥ್ರೊ: ಭಾನು ಶರ್ಮಾ (ರಾಜಸ್ಥಾನ ವಿವಿ)- 1, ಅಂಕಿತ್ ದಹಿಯಾ (ಡಿಎವಿ ವಿವಿ, ಜಲಂಧರ್) -2, ಪ್ರವೀಣ್ ಕುಮಾರ್ ಮೆಹರ್‌ (ಮಹಾರಾಜ ಗಂಗಾಸಿಂಗ್ ವಿವಿ, ಬಿಕಾನೇರ್‌) -3, ದೂರ: ದೂರ: 51.48 ಮೀ.; ಲಾಂಗ್‌ಜಂಪ್‌: ಸ್ವಾಮಿನಾಥನ್ ಆರ್. (ಮದ್ರಾಸ್ ವಿವಿ)- 1, ಪಿ.ಎಸ್.ವಿಷ್ಣು (ಮಂಗಳೂರು ವಿವಿ)- 2, ಅಖಿಲ್ ಟಿ.ವಿ. (ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ)– 3, ದೂರ: 7.78 ಮೀ. ಡೆಕಥ್ಲಾನ್‌: ಸಲ್ಮಾನ್ ಹ್ಯಾರಿಸ್ ಕೆ.ಪಿ. (ಕ್ಯಾಲಿಕಟ್ ವಿವಿ)–1, ಉಮೇಶ್ ಲಂಬಾ (ರಾಜಸ್ಥಾನ್ ವಿವಿ)–2. ವಿ ನವೀನ್ ಕುಮಾರ್ (ಪೆರಿಯಾರ್ ವಿವಿ, ಸೇಲಂ)–3, ಪಾಯಿಂಟ್ಸ್‌: 6,645 ಪಾಯಿಂಟ್ಸ್‌.

ಮಹಿಳೆಯರ ವಿಭಾಗ: 400 ಮೀ: ಪಿ.ಒ.ಸಯನಾ (ಕೇರಳ ವಿವಿ)-1, ಜ್ಯೋತಿಕಾಶ್ರೀ ಬಿ. (ಕೃಷ್ಣ ವಿವಿ, ಮಚಲಿಪಟ್ಟಣಂ) -2, ಗುಗ್ ಕೌರ್ (ಪಂಚಾಬ್ ವಿವಿ, ಚಂಡೀಗಡ) –3. ಕಾಲ: 54:57 ಸೆ.; 400 ಮೀ ರಿಲೇ: ಮದ್ರಾಸ್ ವಿಶ್ವವಿದ್ಯಾಲಯ -1 (ಕಾಲ: 47.21 ಸೆ.), ಮಹಾತ್ಮ ಗಾಂಧಿ ವಿವಿ– 2 (47.31 ಸೆ.), ಕೇರಳ ವಿಶ್ವವಿದ್ಯಾಲಯ (47.22 ಸೆ.)-3; 3,000 ಮೀ ಸ್ಟೀಪಲ್‌ಚೇಸ್: ಕೋಮಲ್ ಜಗದಾಲೆ (ಸಾವಿತ್ರಿಬಾಯಿ ಫುಲೆ ವಿವಿ)-1, ಜಿ.ಮಹೇಶ್ವರಿ (ಪಲಮೂರ್ ವಿವಿ, ಮೆಹಬೂಬ್‌ನಗರ್)-2, ಜ್ಯೋತಿ ಜಗ್‌ಬಹುದ್ದೂರ್ ಚೌಹಾಣ್‌
(ಮಂಗಳೂರು ವಿವಿ)-3, ಕಾಲ: 10 ನಿ.23:65 ಸೆ. ಕೂಟ ದಾಖಲೆ,  ಹಳೆಯ ದಾಖಲೆ: ಭಗತ್ ಶೀತಲ್ ಜಾಮಜಿ, ಕಾಲ: 10 ನಿ. 34:53 ಸೆ. 20 ಕಿ.ಮೀ ನಡಿಗೆ: ಸೋನಲ್ ಸುಖ್‍ವಾಲ್ (ಕಾಲ: 1 ಗಂಟೆ 38 ನಿಮಿಷ 40:49 ಸೆ., ಮೋಹನ್‌ಲಾಲ್ ಸುಖಾಡಿಯಾ ವಿವಿ, ನೂತನ ದಾಖಲೆ) –1, ರಾಖಿ ಕುಷ್ಬಾಲ್‌ (ಪ್ರೊ. ರಾಜೇಂದ್ರ ಸಿಂಗ್ ವಿವಿ, ಕಾಲ: 1 ಗಂಟೆ 41 ನಿ 09:75 ಸೆ.) 2, ಬಂಧನ್ ಪಾಟಿಲ್ (ಮಂಗಳೂರು ವಿ.ವಿ., ಕಾಲ: 1 ಗಂಟೆ 42 ನಿ 57:62 ಸೆ)- 3; ಹೈಜಂಪ್‌: ಗ್ರೆಸಿನಾ (ಎಂಎಸ್ ವಿವಿ, ತಿರುಚಿನಾಪಳ್ಳಿ)– 1, ಜಿಷ್ಣಾ ಎಂ. (ಕ್ಯಾಲಿಕಟ್ ವಿವಿ) -2, ಗಾಯತ್ರಿ ಶಿವಕುಮಾರ್- (ಮಹಾತ್ಮಗಾಂಧಿ ವಿವಿ ಕಟ್ಟಾಯಂ) –3, ಎತ್ತರ: 1.77 ಮೀ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು