ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಬ್ರಿಜ್‌ಭೂಷಣ್ ವಿರುದ್ಧ ತನಿಖೆಗೆ ಸಮಿತಿ ನೇಮಕ

ಒಲಿಂಪಿಕ್‌ ಸಂಸ್ಥೆಯ ಮೊರೆಹೋದ ಪೈಲ್ವಾನರು; ಮುಂದುವರಿದ ಪ್ರತಿಭಟನೆ
Last Updated 20 ಜನವರಿ 2023, 22:15 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಭಾರತ ಒಲಿಂ‍‍‍ಪಿಕ್‌ ಸಂಸ್ಥೆಯು (ಐಒಎ) ಏಳು ಸದಸ್ಯರ ಸಮಿತಿಯನ್ನು ನೇಮಿಸಿದೆ.

ಐಒಎ ಅಧ್ಯಕ್ಷೆ ಪಿ.ಟಿ.ಉಷಾ ನೇತೃತ್ವದಲ್ಲಿ ಶುಕ್ರವಾರ ನಡೆದ ತುರ್ತುಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೂಟರ್ ಅಭಿನವ್‌ ಬಿಂದ್ರಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಹಿಳಾ ಬಾಕ್ಸರ್‌ ಎಂ.ಸಿ.ಮೇರಿಕೋಮ್, ಕುಸ್ತಿಪಟು ಯೋಗೇಶ್ವರ್‌ ದತ್‌, ಆರ್ಚರಿ ಸ್ಪರ್ಧಿ ಡೋಲಾ ಬ್ಯಾನರ್ಜಿ ಮತ್ತು ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಅಧ್ಯಕ್ಷ ಸಹದೇವ್‌ ಯಾದವ್‌ ಅವರು ಸಮಿತಿಯಲ್ಲಿದ್ದಾರೆ.

‘ಬ್ರಿಜ್‌ಭೂಷಣ್‌ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಶೀಘ್ರದಲ್ಲೇ ಸಮಿತಿಯನ್ನು ನೇಮಕ ಮಾಡಬೇಕು’ ಎಂದು ಶುಕ್ರವಾರ ಬೆಳಿಗ್ಗೆ ಕುಸ್ತಿಪಟುಗಳು ಪಿ.ಟಿ.ಉಷಾ ಅವರನ್ನು ಆಗ್ರಹಿಸಿದ್ದರು.

‘ಅಧ್ಯಕ್ಷರನ್ನು ಕಿತ್ತುಹಾಕುವುದಲ್ಲದೆ, ಸಂಪೂರ್ಣ ಫೆಡರೇಷನ್‌ಅನ್ನು ವಜಾ ಮಾಡಬೇಕು. ಡಬ್ಲ್ಯುಎಫ್‌ಐನ ದೈನಂದಿನ ಆಡಳಿತ ನೋಡಿಕೊಳ್ಳಲು ಕುಸ್ತಿಪಟುಗಳು ಸಲಹೆ ಪಡೆದು ಹೊಸ ಸಮಿತಿ ನೇಮಿಸಬೇಕು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದರು.

'ಕುಸ್ತಿಪಟುಗಳು ಸಾಕಷ್ಟು ಧೈರ್ಯ ತಂದುಕೊಂಡು ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಒಟ್ಟಾಗಿ ಪ್ರತಿಭಟಿಸುತ್ತಿದ್ದಾರೆ. ನಮಗೆ ಜೀವ ಭಯವಿದೆ. ಅವರನ್ನು ವಜಾಗೊಳಿಸದೇ ಇದ್ದಲ್ಲಿ, ಧರಣಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿರುವ ಎಲ್ಲ ಯುವ ಕುಸ್ತಿಪಟುಗಳ ವೃತ್ತಿಜೀವನ ಕೊನೆಗೊಳ್ಳಲಿದೆ’ ಎಂದೂ ಆತಂಕ ತೋಡಿಕೊಂಡಿದ್ದರು.

ಟೋಕಿಯೊ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳಾದ ರವಿ ದಹಿಯಾ, ಬಜರಂಗ್‌ ಪೂನಿಯಾ, ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿ ಯನ್‌ಷಿಪ್‌ನ ಪದಕ ವಿಜೇತರಾದ ವಿನೇಶಾ ಪೋಗಟ್‌ ಮತ್ತು ದೀಪಕ್‌ ಪೂನಿಯಾ ಪತ್ರಕ್ಕೆ ಸಹಿ ಹಾಕಿದ್ದರು.

ಬ್ರಿಜ್‌ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಫೆಡರೇಷನ್‌ನಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಖ್ಯಾತನಾಮ ಕುಸ್ತಿಪಟುಗಳು ಬುಧವಾರ ಆರಂಭಿಸಿದ್ದ ಧರಣಿ, ಶುಕ್ರವಾರವೂ ಮುಂದುವರಿಯಿತು.

ಬೀಜಿಂಗ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬಾಕ್ಸರ್‌ ಮತ್ತು ಕಾಂಗ್ರೆಸ್‌ ಮುಖಂಡರೂ ಆಗಿರುವ ವಿಜೇಂದರ್‌ ಸಿಂಗ್‌ ಅವರು ಶುಕ್ರವಾರ ಪ್ರತಿಭಟನೆ ನಡೆಯುತ್ತಿರುವ ಜಂತರ್‌ ಮಂತರ್‌ಗೆ ಭೇಟಿ ನೀಡಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದರು.

ಸಭೆ ವಿಫಲ: ಪ್ರತಿಭಟನಾನಿರತ ಕುಸ್ತಿಪಟುಗಳು ಗುರುವಾರ ರಾತ್ರಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರ ನಿವಾಸದಲ್ಲಿ ಸಭೆ ನಡೆಸಿದ್ದರು. ಆದರೆ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಆಗಲಿಲ್ಲ. ಕುಸ್ತಿಪಟುಗಳು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರವು ಡಬ್ಲ್ಯುಎಫ್‌ಐ ಅಧ್ಯಕ್ಷರಿಗೆ ನೀಡಿರುವ 72 ಗಂಟೆಗಳ ಗಡುವು ಶನಿವಾರ ಸಂಜೆ ಕೊನೆಗೊಳ್ಳಲಿದೆ.

ಶಾಹೀನ್‌ಬಾಗ್‌ ಪ್ರತಿಭಟನೆಗೆ ಹೋಲಿಕೆ
ನಂದಿನಿನಗರ, ಉತ್ತರ ಪ್ರದೇಶ: ತಮ್ಮ ವಿರುದ್ಧದ ಪ್ರತಿಭಟನೆಯನ್ನು ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರುಶಾಹೀನ್‌ಬಾಗ್‌ ಪ್ರತಿಭಟನೆಗೆ ಹೋಲಿಸಿದ್ದಾರೆ.

‘ಕುಸ್ತಿಪಟುಗಳು ನನ್ನ ವಿರುದ್ಧ ನಡೆಸುತ್ತಿರುವುದು ಶಾಹೀನ್‌ಬಾಗ್‌ ಮಾದರಿಯ ಧರಣಿ’ ಎಂದು ಶುಕ್ರವಾರ ಟೀಕಿಸಿದರು. ಪೌರತ್ವ ತಿದ್ದುಪ‍ಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ 2019ರ ಕೊನೆಯಿಂದ 2020ರ ಆರಂಭದ ವರೆಗೆ ಪ್ರತಿಭಟನೆ ನಡೆದಿತ್ತು. ‘ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಿಲ್ಲ. ಪ್ರತಿಭಟನೆಯ ಹಿಂದೆ ಕಾಂಗ್ರೆಸ್‌ ಪಕ್ಷದ ಪಿತೂರಿಯಿದೆ. ಇದು ನನ್ನ ವಿರುದ್ಧ ನಡೆಯುತ್ತಿರುವ ಹೋರಾಟ ಅಲ್ಲ. ಕಾಂಗ್ರೆಸ್‌ ಪಕ್ಷ ನನ್ನ ಮೂಲಕ ಬಿಜೆಪಿ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ದಾಳಿ‘ ಎಂದು ಬಿಜೆಪಿ ಸಂಸದರೂ ಆಗಿರುವ ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT