ಬುಧವಾರ, ಮಾರ್ಚ್ 29, 2023
25 °C
ಐಎಸ್‌ಎಲ್‌ ಫುಟ್‌ಬಾಲ್‌: ಬಿಎಫ್‌ಸಿಗೆ ಇಂದು ಚೆನ್ನೈಯಿನ್ ಸವಾಲು

ಐಎಸ್‌ಎಲ್‌ ಫುಟ್‌ಬಾಲ್‌: ಗೆಲುವಿನ ಲಯ ಮುಂದುವರಿಸುವ ತವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೆಲುವಿನ ಲಯ ಮುಂದುವರಿಸುವ ತವಕದಲ್ಲಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಮುಖಾಮುಖಿಯಾಗಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಹತ್ತು ದಿನಗಳ ಹಿಂದೆ ಜಮ್ಶೆಡ್‌ಪುರದಲ್ಲಿ ನಡೆದ ಹಣಾಹಣಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ 3–0ಯಿಂದ ಜಮ್ಶೆಡ್‌ಪುರ ಎಫ್‌ಸಿಗೆ ಸೋಲುಣಿಸಿತ್ತು. ತಂಡಕ್ಕೆ ಟೂರ್ನಿಯಲ್ಲಿ ಅದು ಸತತ ಮೂರನೇ ಗೆಲುವಾಗಿತ್ತು.

‘ಹಿಂದಿನ ಪಂದ್ಯದ ಗೆಲುವಿನಿಂದ ಆತ್ಮವಿಶ್ವಾಸ ವೃದ್ಧಿಸಿದೆ. ಅದೇ ವಿಶ್ವಾಸದೊಂದಿಗೆ ಕಣಕ್ಕಿಳಿಯುವೆವು. ಉತ್ತಮ ಆಟಗಾರರನ್ನು ಒಳಗೊಂಡಿರುವ ಚೆನ್ನೈಯಿನ್ ಎಫ್‌ಸಿ ಬಗ್ಗೆ ಗೌರವವಿದೆ‘ ಎಂದು ಬಿಎಫ್‌ಸಿ ಕೋಚ್‌ ಸೈಮನ್ ಗ್ರೇಸನ್ ಹೇಳಿದ್ದಾರೆ.

ಬೆಂಗಳೂರು ತಂಡಕ್ಕೆ ಚೆಟ್ರಿ, ರಾಯ್‌ಕೃಷ್ಣ, ಶಿವಶಕ್ತಿ ನಾರಾಯಣನ್‌ ಪ್ರಮುಖ ಆಟಗಾರರೆನಿಸಿದ್ದಾರೆ.

ಚೆನ್ನೈ ತಂಡವೂ ಜಯದ ವಿಶ್ವಾಸದಲ್ಲಿದೆ.  ಸ್ಟ್ರೈಕರ್ ಪೀಟರ್ ಸ್ಲಿಸ್ಕೊವಿಚ್‌ (8) ಅವರು ಆ ತಂಡದ ಪರ ಈ ಋತುವಿನಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದ್ದಾರೆ. ಗರಿಷ್ಠ ಗೋಲು ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಬಿಎಫ್‌ಸಿ ಆಟಗಾರರು ಮಾಡಬೇಕಿದೆ.

ಎರಡೂ ತಂಡಗಳು ಪ್ಲೇ ಆಫ್‌ ಹಂತ ತಲುಪಲು ಪೈಪೋಟಿ ನಡೆಸುತ್ತಿದ್ದು ಈ ಪಂದ್ಯ ಮಹತ್ವದ್ದೆನಿಸಿದೆ. 15 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ 19 ಪಾಯಿಂಟ್ಸ್ ಗಳಿಸಿ ಏಳನೇ ಸ್ಥಾನದಲ್ಲಿದ್ದರೆ, ಚೆನ್ನೈಯಿನ್‌ 14 ಪಂದ್ಯಗಳಿಂದ 17 ಪಾಯಿಂಟ್ಸ್ ಕಲೆಹಾಕಿ ಎಂಟನೇ ಸ್ಥಾನದಲ್ಲಿದೆ.

 

ಪಂದ್ಯ ಆರಂಭ: ಸಂಜೆ 5.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು