ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ದಿನಕ್ಕೆ ‘ಚಿನ್ನ’ದ ಮೆರುಗು ನೀಡಿದ ಇಳವೆನಿಲಾ

ವಿಶ್ವಕಪ್‌ ಶೂಟಿಂಗ್‌: ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಸಾಧನೆ
Last Updated 29 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ : ಉದಯೋನ್ಮುಖ ಶೂಟರ್‌ ಇಳವೆನಿಲಾ ವಳರಿವಾನ್‌ ಅವರು ರಾಷ್ಟ್ರೀಯ ಕ್ರೀಡಾ ದಿನಕ್ಕೆ ‘ಚಿನ್ನ’ದ ಮೆರುಗು ನೀಡಿದರು. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ನಲ್ಲಿ ಅವರು ಚಿನ್ನದ ಪದಕಕ್ಕೆ ಗುರಿ ಇಟ್ಟರು.

ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಅರಳಿತು. ಸೀನಿಯರ್‌ ವಿಭಾಗದಲ್ಲಿ ಇಳವೆನಿಲಾ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ. ಈ ಸಾಧನೆ ಮಾಡಿದ ಭಾರತದ ಮೂರನೇ ಶೂಟರ್‌ ಎಂಬ ಹಿರಿಮೆಗೂ ಅವರು ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ಅಂಜಲಿ ಭಾಗವತ್‌ ಮತ್ತು ಅಪೂರ್ವಿ ಚಾಂಡೇಲಾ ಈ ಮೈಲಿಗಲ್ಲು ಸ್ಥಾಪಿಸಿದ್ದರು.

ಇಲ್ಲಿ ಚಿನ್ನ ಗೆದ್ದರೂ 20ರ ಹರೆಯದ ಇಳವೆನಿಲಾಗೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಿಗಲಿಲ್ಲ. ಭಾರತದ ಪಾಲಿನ ಎರಡು ಸ್ಥಾನಗಳು ಅಪೂರ್ವಿ ಚಾಂಡೇಲಾ ಮತ್ತು ಅಂಜುಮ್‌ ಮೌಡ್ಗಿಲ್‌ ಅವರ ಪಾಲಾಗಿವೆ. ವಿಶ್ವಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಅಪೂರ್ವಿ ಹಾಗೂ ಎರಡನೇ ಸ್ಥಾನದಲ್ಲಿರುವ ಅಂಜುಮ್‌ ಅವರು ಹೋದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ಒಲಿಂಪಿಕ್ಸ್‌ಗೆ ರಹದಾರಿ ಪಡೆದಿದ್ದರು.

ಇಳವೆನಿಲಾ ಅವರು ಬುಧವಾರ ರಾತ್ರಿ ನಡೆದ ಫೈನಲ್‌ನಲ್ಲಿ 251.7 ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು.

ಅಂತಿಮ ಘಟ್ಟದ ಮೊದಲ ಹಂತದ ಹತ್ತು ಶಾಟ್‌ಗಳು ಮುಗಿದಾಗ ಬ್ರಿಟನ್‌ನ ಸಿಯೊನೆಡ್‌ ಮಿಸಿಂತೋಷ್‌ ಮುನ್ನಡೆ ಗಳಿಸಿದ್ದರು. ಎರಡನೇ ಹಂತದ ಸ್ಪರ್ಧೆಯ ವೇಳೆ ಇಳವೆನಿಲಾ, ಏಕಾಗ್ರತೆ ಕಾಪಾಡಿಕೊಂಡರು. ಎರಡು ಶಾಟ್‌ಗಳು ಮುಗಿದಾಗ ಇಳವೆನಿಲಾ, ಸಿಯೊನೆಡ್‌ ಹಾಗೂ ಚೀನಾ ತೈಪೆಯ ಯಿಂಗ್ ಶಿನ್‌ ಲಿನ್‌ ಅವರು ತಲಾ 147.1 ಪಾಯಿಂಟ್ಸ್‌ ಗಳಿಸಿ ಸಮಬಲ ಸಾಧಿಸಿದ್ದರು.

ನಂತರ ಭಾರತದ ಶೂಟರ್‌ ನಿಖರ ಗುರಿ ಹಿಡಿದು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು. ಚಿನ್ನ ಜಯಿಸಿ ಸಂಭ್ರಮಿಸಿದರು.

250.6 ಪಾಯಿಂಟ್ಸ್‌ ಹೆಕ್ಕಿದಸಿಯೊನೆಡ್‌, ಬೆಳ್ಳಿಯ ಪದಕ ಪಡೆದರು. ಶಿನ್‌ ಲಿನ್‌ (229.9 ಪಾ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಫೈನಲ್‌ಗೆ ಅರ್ಹತೆ ಗಳಿಸಿದ್ದ ಭಾರತದ ಅಂಜುಮ್‌ ಮೌಡ್ಗಿಲ್‌ (166.8 ಪಾ.) ಆರನೇ ಸ್ಥಾನ ಪಡೆದರು. ಅಪೂರ್ವಿ ಚಾಂಡೇಲಾ ಅವರು ಅರ್ಹತಾ ಹಂತದಲ್ಲೇ (11ನೇ ಸ್ಥಾನ) ಹೊರ ಬಿದ್ದರು.

ಅಹಮದಾಬಾದ್‌ನ ಇಳವೆನಿಲಾ ಆರಂಭದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದರು. 13ನೇ ವಯಸ್ಸಿನಲ್ಲಿ ಶೂಟಿಂಗ್‌ಗೆ ಅಡಿ ಇಟ್ಟಿದ್ದ ಅವರು ಜೂನಿಯರ್‌ ವಿಶ್ವಕಪ್‌ ಮತ್ತು ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದ ಅರ್ಹತಾ ಹಂತದಲ್ಲಿ ಅನುರಾಜ್‌ ಸಿಂಗ್‌ (292 ಪಾಯಿಂಟ್ಸ್‌) 12ನೇ ಸ್ಥಾನ ಗಳಿಸಿದರು.

ಚಿಂಕಿ ಯಾದವ್‌ (290 ಪಾ.) ಮತ್ತು ಅಭಿದನ್ಯಾ ಅಶೋಕ್‌ ಪಾಟೀಲ್‌ (286 ಪಾ.) ಅವರು ಕ್ರಮವಾಗಿ 17 ಮತ್ತು 43ನೇ ಸ್ಥಾನಗಳನ್ನು ಪಡೆದರು.

ಪುರುಷರ 50 ಮೀಟರ್ಸ್‌ ರೈಫಲ್‌–3 ಪೊಷಿಸನ್‌ ವಿಭಾಗದ ಮೊದಲ ಎಲಿಮಿನೇಷನ್‌ ಸುತ್ತಿನಲ್ಲಿ ಭಾರತದ ಸಂಜೀವ್‌ ರಜಪೂತ್‌ (1,170 ಸ್ಕೋರ್‌) 14ನೇ ಸ್ಥಾನ ಪಡೆದರು. ಚೈನ್‌ ಸಿಂಗ್‌ (1,163ಪಾ.) 27ನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT