ಬುಧವಾರ, ಮಾರ್ಚ್ 3, 2021
18 °C
ಭಾಕರ್‌, ಹೀನಾಗೆ ನಿರಾಸೆ

ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌: ಓಂ ಪ್ರಕಾಶ್‌ ಚಿನ್ನದ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ಓಂ ಪ್ರಕಾಶ್‌ ಮಿಥರ್ವಾಲ್‌ ಅವರು ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

‍ಮಂಗಳವಾರ ನಡೆದ ಪುರುಷರ 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ. 23 ವರ್ಷ ವಯಸ್ಸಿನ ಓಂ ಪ್ರಕಾಶ್‌ ಫೈನಲ್‌ನಲ್ಲಿ 564 ಸ್ಕೋರ್‌ ಗಳಿಸಿ ಗಮನ ಸೆಳೆದರು.

ಈ ವಿಭಾಗದ ಬೆಳ್ಳಿಯ ಪದಕ ಸರ್ಬಿಯಾದ ದಮಿರ್‌ ಮಿಕೆಚ್‌ ಅವರ ಪಾಲಾಯಿತು. ಫೈನಲ್‌ನಲ್ಲಿ ದಮಿರ್‌ 562 ಸ್ಕೋರ್‌ ಸಂಗ್ರಹಿಸಿದರು. ದಕ್ಷಿಣ ಕೊರಿಯಾದ ಡಯೆಮ್‌ಯಂಗ್‌ ಲೀ (560 ಸ್ಕೋರ್‌) ಕಂಚಿನ ಪದಕ ಪಡೆದರು.

2014ರ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದ ಭಾರತದ ಜಿತು ರಾಯ್‌ 17ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅವರು 552 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು.

ಮಿಥರ್ವಾಲ್‌ ಅವರು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಮತ್ತು 50 ಮೀಟರ್ಸ್‌ ಪಿಸ್ತೂಲ್‌ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು.

ಪುರುಷರ 50 ಮೀಟರ್ಸ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ಭಾರತ ಐದನೇ ಸ್ಥಾನ ಪಡೆಯಿತು.

ಮಿಥರ್ವಾಲ್‌, ಜಿತು ಮತ್ತು ಮಂಜೀತ್‌ ಅವರು ತಂಡದಲ್ಲಿದ್ದರು. ಇವರು ಒಟ್ಟು 1648 ಸ್ಕೋರ್‌ ಕಲೆಹಾಕಿದರು.

ಜೂನಿಯರ್‌ ವಿಭಾಗದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಸೌರಭ್‌ ಚೌಧರಿ ಮತ್ತು ಅಭಿದನ್ಯಾ ಪಾಟೀಲ್‌ ಅವರು ಕಂಚಿನ ಪದಕ ಜಯಿಸಿದರು.

ಫೈನಲ್‌ನಲ್ಲಿ ಭಾರತದ ಜೋಡಿ 407.3 ಸ್ಕೋರ್‌ ಸಂಗ್ರಹಿಸಿತು. ಈ ವಿಭಾಗದ ಚಿನ್ನ ಮತ್ತು ಬೆಳ್ಳಿಯ ಪದಕಗಳು ಆತಿಥೇಯ ದಕ್ಷಿಣ ಕೊರಿಯಾ ತಂಡದ ಪಾಲಾದವು.

ಚೂ ಗಯೆವುನ್‌ ಮತ್ತು ಸಂಗ್‌ ಯನ್‌ಹೊ ಅವರು (483 ಸ್ಕೋರ್‌) ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಯೂ ಹ್ಯೂನ್‌ಯಂಗ್‌ ಮತ್ತು ಲಿಮ್‌ ಹೊಜಿನ್‌ (473.1) ಬೆಳ್ಳಿಯ ಪದಕ ಗಳಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಹಂತದಲ್ಲಿ ಸೌರಭ್‌ ಮತ್ತು ಅಭಿದನ್ಯಾ ನಾಲ್ಕು ಸುತ್ತುಗಳಿಂದ 761 ಸ್ಕೋರ್‌ ಗಳಿಸಿದ್ದರು. ದೇವಾಂಶಿ ರಾಣಾ ಮತ್ತು ಅನ್‌ಮೋಲ್‌ ಜೈನ್‌ ಅವರು 765 ಸ್ಕೋರ್‌ ಕಲೆಹಾಕಿ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಈ ಜೋಡಿ ಫೈನಲ್‌ನಲ್ಲಿ ಐದನೇ ಸ್ಥಾನ ಪಡೆಯಿತು.

ಹೀನಾ, ಮನುಗೆ ನಿರಾಸೆ: ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ಹೀನಾ ಸಿಧು ಮತ್ತು ಮನು ಭಾಕರ್‌ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು.

ಅರ್ಹತಾ ಸುತ್ತಿನಲ್ಲಿ ಮನು (574 ಸ್ಕೋರ್‌) 13ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಹೀನಾ (571 ಸ್ಕೋರ್‌) 29ನೇ ಸ್ಥಾನ ಗಳಿಸಿದರು.

ತಂಡ ವಿಭಾಗದಲ್ಲಿ ಮನು, ಹೀನಾ ಮತ್ತು ಶ್ವೇತಾ ಸಿಂಗ್‌ ಅವರು ನಾಲ್ಕನೇ ಸ್ಥಾನ (1713 ಸ್ಕೋರ್‌) ಗಳಿಸಿದರು.

ಭಾರತ ತಂಡ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಎಂಟು ಪದಕಗಳನ್ನು ಜಯಿಸಿದೆ. ಇದರಲ್ಲಿ ತಲಾ ಮೂರು ಚಿನ್ನ ಮತ್ತು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳಿವೆ.

ಒಟ್ಟು 12 ಪದಕಗಳನ್ನು ಜಯಿಸಿರುವ ದಕ್ಷಿಣ ಕೊರಿಯಾ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು