ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಿತು, ಕೆಡುಕುಗಳ ಆಚೆ ನಿಂತು...

ಕಠುವಾ ಮತ್ತು ಉನ್ನಾವ್ ಅತ್ಯಾಚಾರ ‘ಮೃಗೀಯ’ ಎನ್ನುವುದು ಮೃಗಗಳಿಗೂ ಅವಮಾನ ಮಾಡಿದಂತೆ
ಅಕ್ಷರ ಗಾತ್ರ

ದಾಸ್ತೋವಸ್ಕಿ ಬರೆದ ‘ದ ಬ್ರದರ್ಸ್‌ ಕರಾಮಜೋಫ್’ ಕಾದಂಬರಿಯಲ್ಲಿ ಬರುವ ಎಂದೂ ಕೊನೆಗೊಳ್ಳದ ಕೆಡುಕಿನ ಸಮಸ್ಯೆಯನ್ನು ಕಠುವಾ ಮತ್ತು ಉನ್ನಾವ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ನೆನಪಿಸುತ್ತವೆ. ಈ ಕಾದಂಬರಿಯಲ್ಲಿ ಇವಾನ್ ಕರಾಮಜೋಫ್, ಈ ಜಗತ್ತಿನಲ್ಲಿರುವ ಕೆಡುಕುಗಳಿಗೆ (ಅದರಲ್ಲೂ ಮುಖ್ಯವಾಗಿ, ಮಕ್ಕಳ ಮೇಲಿನ ಹಿಂಸಾಚಾರಗಳ ಬಗ್ಗೆ) ನೀಡಿರುವ ಸಮರ್ಥನೆಯ ಬಗ್ಗೆ ತನ್ನ ಕಿರಿಯ ಸಹೋದರ, ತರುಣ ಸನ್ಯಾಸಿ ಅಲ್ಯೋಶಾನಲ್ಲಿ ಕೇಳುತ್ತಾನೆ. ‘ಬಲ್ಗೇರಿಯಾದ ಎಲ್ಲ ಕಡೆ ಟರ್ಕಿಯವರು ಮತ್ತು ಸರ್ಕ್ಯಾಸಿಯನ್ನರು ನಡೆಸಿದ ಹಿಂಸಾಕೃತ್ಯಗಳ ಬಗ್ಗೆ ನಾನು ಮಾಸ್ಕೋದಲ್ಲಿ ಈಚೆಗೆ ಭೇಟಿ ಮಾಡಿದ ಬಲ್ಗೇರಿಯಾದ ವ್ಯಕ್ತಿಯೊಬ್ಬ ಹೇಳಿದ. ಅವರು ಹಳ್ಳಿಗಳನ್ನು ಸುಟ್ಟಿದ್ದಾರೆ, ಮಹಿಳೆಯರು ಮತ್ತು ಮಕ್ಕಳನ್ನು ಕೊಂದಿದ್ದಾರೆ. ತಮ್ಮ ಕೈದಿಗಳ ಕಿವಿಯನ್ನು ಬೇಲಿಗೆ ಚುಚ್ಚಿ ಅವರನ್ನು ನೇತುಹಾಕಿದ್ದಾರೆ. ಅವರನ್ನು ಅದೇ ಸ್ಥಿತಿಯಲ್ಲಿ ಬೆಳಿಗ್ಗೆಯವರೆಗೆ ಬಿಟ್ಟಿರುತ್ತಾರೆ. ಬೆಳಿಗ್ಗೆ ಬಂದು ಅವರನ್ನು ನೇಣಿಗೆ ಹಾಕುತ್ತಾರೆ– ನೀನು ಊಹಿಸಿಕೊಳ್ಳಲೂ ಆಗದಂತಹ ಕೆಲಸಗಳನ್ನು ಅವರು ಮಾಡಿದ್ದಾರೆ’.

‘ಮೃಗಗಳು ನಡೆಸುವ ಹಿಂಸೆಯ ಬಗ್ಗೆ ಜನ ಕೆಲವೊಮ್ಮೆ ಮಾತನಾಡುತ್ತಾರೆ. ಆದರೆ, ಹಾಗೆ ಮಾತನಾಡುವುದು ಮೃಗಗಳಿಗೆ ಮಾಡುವ ಅವಮಾನ. ಮೃಗಗಳು ಮನುಷ್ಯನಷ್ಟು ಎಂದಿಗೂ ಕ್ರೂರಿಯಾಗಲಾರವು, ಕ್ರೌರ್ಯದಲ್ಲೂ ಕಲಾತ್ಮಕತೆಯನ್ನು ಕಾಣಿಸಲಾರವು. ಹುಲಿ ತನ್ನ ಬಲಿಯನ್ನು ಹರಿದು ಮುಕ್ಕುತ್ತದೆ. ಅದು ಅಷ್ಟನ್ನು ಮಾತ್ರ ಮಾಡಲು ಸಾಧ್ಯ. ತನ್ನಿಂದ ಮಾಡಲು ಸಾಧ್ಯವಿದ್ದರೂ, ತನ್ನ ಬಲಿಯ ಕಿವಿಯನ್ನು ಬೇಲಿಗೆ ಚುಚ್ಚಿ ಅದನ್ನು ಅಲ್ಲಿ ನೇತುಹಾಕುವ ಆಲೋಚನೆಯನ್ನೂ ಅದು ಮಾಡದು. ಟರ್ಕಿಯವರು ಮಕ್ಕಳನ್ನು ಹಿಂಸಿಸುವುದರಲ್ಲೂ ಸಂತಸವನ್ನು ಕಂಡುಕೊಂಡರು. ತಾಯಿಯ ಗರ್ಭದಲ್ಲಿರುವ ಶಿಶುವನ್ನು ಕತ್ತರಿಸುವಲ್ಲಿ, ಪುಟ್ಟ ಶಿಶುಗಳನ್ನು ಅವುಗಳ ತಾಯಂದಿರ ಎದುರೇ ಎತ್ತರಕ್ಕೆ ಹಾರಿಸಿ ಅವು ಕೆಳಕ್ಕೆ ಬೀಳುವಾಗ ಬಂದೂಕಿನ ತುದಿಯ ಚೂಪನೆಯ ಬಾನೆಟ್‌ನಿಂದ ಅವುಗಳಿಗೆ ಚುಚ್ಚುವುದರಲ್ಲಿ ಖುಷಿ ಕಂಡುಕೊಂಡರು. ಇವೆಲ್ಲವನ್ನೂ ಕಂದಮ್ಮಗಳ ತಾಯಂದಿರ ಎದುರಿನಲ್ಲಿ ಮಾಡುವುದು ಅವರ ಖುಷಿಗೆ ಇನ್ನಷ್ಟು ಹುರುಪು ತುಂಬುತ್ತಿತ್ತು. ಇಲ್ಲಿ ಇನ್ನೂ ಒಂದು ಸನ್ನಿವೇಶದ ಬಗ್ಗೆ ಹೇಳಬೇಕು. ಭಯದಿಂದ ನಡುಗುತ್ತಿರುವ ತಾಯಿಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ತಬ್ಬಿ ಹಿಡಿದುಕೊಂಡಿರುವ ದೃಶ್ಯವೊಂದನ್ನು ಕಲ್ಪಿಸಿಕೋ. ಆಕೆಯ ಸುತ್ತ ಆಕ್ರಮಣಕಾರಿ ಟರ್ಕಿಯವರು ಇದ್ದಾರೆ. ಅವರು ಆ ಮಗುವನ್ನು ಮುದ್ದಿಸುತ್ತಾರೆ. ಆ ಮಗು ನಗುವಂತೆ ಮಾಡುತ್ತಾರೆ. ಮಗು ನಗುತ್ತದೆ. ಆಗ ಟರ್ಕಿಯ ಒಬ್ಬ ಮನುಷ್ಯ ಮಗುವಿನ ಮುಖದಿಂದ ನಾಲ್ಕು ಇಂಚು ಅಂತರದಲ್ಲಿ ಪಿಸ್ತೂಲು ಹಿಡಿಯುತ್ತಾನೆ. ಮಗು ಬೊಚ್ಚು ಬಾಯಲ್ಲಿ ನಗುತ್ತದೆ. ತನ್ನ ಪುಟ್ಟ ಕೈಗಳನ್ನು ಚಾಚಿ ಪಿಸ್ತೂಲು ಹಿಡಿದುಕೊಳ್ಳುತ್ತದೆ. ಆಗ ಆ ಮನುಷ್ಯ ಪಿಸ್ತೂಲಿನ ಟ್ರಿಗರ್ ಎಳೆದು ಮಗುವಿನ ಮಿದುಳನ್ನು ಚೂರು ಚೂರಾಗಿಸುತ್ತಾನೆ. ಇದು ಬಹಳ ಕಲಾತ್ಮಕವಾಗಿದೆ, ಅಲ್ಲವೇ...?’

‘ಕೇಡು’, ‘ಕೆಡುಕು’ ಸೃಷ್ಟಿಸುವ ಸಮಸ್ಯೆಗಳು ಈ ಪ್ರಪಂಚದ ವಿವೇಕಿಗಳ ಮತ್ತು ಋಷಿಗಳ ಮನಸ್ಸನ್ನು ಬಹು ಹಿಂದಿನಿಂದಲೂ ಕಾಡಿವೆ. ಮುಗ್ಧ ಜನರಿಗೆ ಹಿಂಸೆ ತಂದಿಡುವ, ಮಕ್ಕಳನ್ನು ಅತ್ಯಾಚಾರಕ್ಕೆ ಒಳಪಡಿಸಿ ಅವರನ್ನುಕೊಲ್ಲುವ ಕೇಡಿನ ಅಸ್ತಿತ್ವವನ್ನು ಹೇಗೆ ವಿವರಿಸುವುದು? ನೈಸರ್ಗಿಕ ವಿಕೋಪಗಳು ಸೃಷ್ಟಿಸುವ ಹಿಂಸೆ ಮತ್ತು ಅವು ಸಹಸ್ರಾರು ಜೀವಜಂತುಗಳನ್ನು ಕೊಲ್ಲುವುದು ಬೇರೆಯದೇ ವಿಚಾರ. ಆದರೆ, ಮಕ್ಕಳನ್ನು ಹಿಂಸೆಗೆ ಗುರಿಪಡಿಸುವುದು, ಅವರನ್ನು ಕೊಲ್ಲುವುದು ನಮ್ಮ ಮನಸ್ಸಿಗೆ ಕಪ್ಪು ಪರದೆ ಕಟ್ಟಿಬಿಡುತ್ತದೆ, ಇಂತಹ ಕೃತ್ಯಗಳು ಎಲ್ಲ ಬಗೆಯ ಅರ್ಥೈಸುವಿಕೆಗಳನ್ನೂ ಮೀರಿದವು.

ಆ ಕಾದಂಬರಿಯಲ್ಲಿ ಇವಾನ್‌ ತನ್ನ ಮಾತು ಮುಂದುವರಿಸಿ ಹೀಗೆ ಹೇಳುತ್ತಾನೆ: ‘ಇಲ್ಲಿ ಕೇಳು! ನಾನು ಹೇಳಬೇಕಿರುವುದನ್ನು ಸ್ಪಷ್ಟಪಡಿಸುವುದಕ್ಕಾಗಿ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಮಾತನಾಡಿದೆ. ಮಾತನಾಡುವ ವಿಷಯವನ್ನು ನಾನು ಉದ್ದೇಶಪೂರ್ವಕವಾಗಿ ಕಿರಿದು ಮಾಡಿಕೊಂಡಿದ್ದೇನೆ. ಈ ಭೂಮಿಯನ್ನು ಅದರ ಮೇಲ್ಮೈನಿಂದ ಕೇಂದ್ರಬಿಂದುವರೆಗೆ ತೋಯ್ದು ಹಾಕಿರುವ ಮನುಕುಲದ ಇತರ ಸಂಕಟಗಳ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಎಲ್ಲವೂ ಶಾಶ್ವತವಾಗಿ ಸರಿಯಾಗಲು ಎಲ್ಲರೂ ಬೆಲೆ ತೆರಬೇಕು ಎಂದಾದರೆ, ಅದಕ್ಕೆ ಮಕ್ಕಳೇನು ಮಾಡಬೇಕು. ನನಗೆ ದಯವಿಟ್ಟು ತಿಳಿಸು. ಮಕ್ಕಳು ಏಕೆ ಕಷ್ಟ ಅನುಭವಿಸಬೇಕು ಎಂಬುದು ಅರ್ಥವೇ ಆಗುತ್ತಿಲ್ಲ, ಎಲ್ಲವನ್ನೂ ಸರಿಪಡಿಸುವುದಕ್ಕಾಗಿ ಅವರು ಏಕೆ ಬೆಲೆ ತೆರಬೇಕು. ಮಕ್ಕಳು ಬೆಲೆ ತೆತ್ತು ಬರುವ ನೆಮ್ಮದಿಯನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ. ಹಿಂಸೆಗೆ ಗುರಿಯಾದ ಒಂದೇ ಒಂದು ಮಗುವಿನ ಕಣ್ಣೀರಿನ ಬೆಲೆಯೂ ಅದಕ್ಕೆ ಇಲ್ಲ. ಮಕ್ಕಳೆಲ್ಲ ಸೇರಿ ಅನುಭವಿಸಿದ ಸಂಕಷ್ಟವು, ಇತರೆಲ್ಲರ ಸಂಕಷ್ಟಕ್ಕೆ ತನ್ನದೊಂದು ಕೊಡುಗೆ ನೀಡಿ, ಆ ಒಟ್ಟು ಕೊಡುಗೆಯು ಸತ್ಯಕ್ಕಾಗಿ ನಾವು ಕೊಡಬೇಕಿರುವ ಬೆಲೆ ಎಂದಾದರೆ, ಅಂತಹ ಸತ್ಯಕ್ಕೆ ಅಷ್ಟೊಂದು ಬೆಲೆ ಇಲ್ಲ ಎಂದು ನಾನು ಹೇಳುತ್ತೇನೆ’. ಇವಾನ್‌ ತನ್ನ ಮಾತನ್ನು ಇನ್ನಷ್ಟು ಮುಂದುವರಿಸುತ್ತಾನೆ. ‘ಈ ಪ್ರಮಾಣದ ಕ್ರೌರ್ಯ ಮತ್ತು ನೋವನ್ನು ನೀನು ಹೇಗೆ ವಿವರಿಸುತ್ತೀಯಾ? ದೇವನೊಬ್ಬ ಇದ್ದಾನೆಯೇ? ಒಬ್ಬ ಇದ್ದಾನೆ ಎಂದಾದರೂ ನಾನು ಅವನನ್ನು ಒಪ್ಪಿಕೊಳ್ಳುವುದಿಲ್ಲ. ನ್ಯಾಯದ ನೆಲೆಯಲ್ಲಿ ನಾನು ಅವನನ್ನು ತಿರಸ್ಕರಿಸುತ್ತೇನೆ’.

ಸರ್ವಶಕ್ತ, ಎಲ್ಲರಿಗೂ ಒಳ್ಳೆಯದನ್ನು ಮಾಡುವ ದೇವನೊಬ್ಬ ಇದ್ದಾನೆ ಎಂದಾದರೆ, ಸಹಸ್ರಾರು ವರ್ಷಗಳಿಂದ ವಿಶ್ವ ಕಾಣುತ್ತ ಬಂದಿರುವ ಕೆಡುಕುಗಳನ್ನು ಮತ್ತು ಕ್ರೌರ್ಯಗಳನ್ನು ಹೇಗೆ ವಿವರಿಸುವುದು? ಇಂಥವುಗಳನ್ನು ಇಂದಿಗೂ ನೋಡುತ್ತಿದ್ದೇವೆ. ಎಲ್ಲರಿಗೂ ಒಳ್ಳೆಯದು ಮಾಡುವವ, ಎಲ್ಲ ರೀತಿಯಿಂದಲೂ ಒಳ್ಳೆಯವನಾಗಿರುವ, ಸರ್ವಶಕ್ತನಾದವ, ಸರ್ವವ್ಯಾಪಿ ಕೂಡ ಆಗಿರುವ ದೇವನಿದ್ದಾನೆ ಎಂದಾದರೆ, ಇಷ್ಟೊಂದು ಕ್ರೌರ್ಯ, ಕೆಡುಕು ಮತ್ತು ನೋವಿನಿಂದ ತುಂಬಿರುವ ಜಗದ ಜೊತೆ ಆತ ಹೇಗೆ ಹೊಂದಾಣಿಕೆ ಮಾಡಿಕೊಂಡಿರಲು ಸಾಧ್ಯ? ತಾರ್ಕಿಕವಾಗಿ ಇದು ಅಸಾಧ್ಯ.

ಗ್ರೀಕ್‌ ತತ್ವಶಾಸ್ತ್ರಜ್ಞ ಎಪಿಕ್ಯುರಸ್‌ ಹೇಳಿರುವಂತೆ:

‘ಕೆಡುಕನ್ನು ತಡೆಯುವ ಮನಸ್ಸು ದೇವರಿಗೆ ಇದೆ, ಆದರೆ ತಡೆಯಲು ಆಗುತ್ತಿಲ್ಲ? ಹಾಗಾದರೆ, ದೇವರು ಸರ್ವಶಕ್ತ ಅಲ್ಲ.

ಕೆಡುಕನ್ನು ತಡೆಯಲು ಆಗುತ್ತದೆ ಎಂದಾದರೆ, ಅವನಿಗೆ ಅದನ್ನು ತಡೆಯುವ ಮನಸ್ಸಿಲ್ಲವೇ? ಹಾಗಾದರೆ ಅವನು ಒಳ್ಳೆಯವನಲ್ಲ.

ಕೆಡುಕನ್ನು ತಡೆಯುವ ಶಕ್ತಿಯೂ ಇದೆ, ಮನಸ್ಸೂ ಇದೆ ದೇವರಿಗೆ. ಹಾಗಾದರೆ, ಕೆಡುಕೆಂಬುದು ಬರುವುದು ಎಲ್ಲಿಂದ?

ದೇವರಿಗೆ ಕೆಡುಕನ್ನು ತಡೆಯುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ. ಹಾಗಾದರೆ ಅವನನ್ನು ದೇವರು ಎಂದು ಕರೆಯುವುದು ಏಕೆ?’

ಎಲ್ಲ ತತ್ವಶಾಸ್ತ್ರಜ್ಞರು, ಅತೀಂದ್ರಿಯ ಶಕ್ತಿ ಹೊಂದಿರುವವರು ಈ ಹಂತದಲ್ಲಿ ಎಡವುತ್ತಾರೆ. ಕೆಡುಕಿನ ಬಗ್ಗೆ ಟ್ಯಾಗೋರ್ ಅವರಲ್ಲಿ ಹಲವು ಬಾರಿ ಪ್ರಶ್ನಿಸಿದಾಗ ಅವರು, ‘ಈ ಜಗತ್ತಿನಲ್ಲಿ ಕೆಡುಕು ಏಕೆ ಇದೆ ಎಂದು ಪ್ರಶ್ನಿಸುವುದು ಸೃಷ್ಟಿ ಎಂಬುದು ಏಕೆ ಇದೆ ಎಂದು ಕೇಳುವುದಕ್ಕೆ ಸಮ. ಈ ಪ್ರಶ್ನೆಯೇ ವ್ಯರ್ಥ. ಇದನ್ನು ಪರಿಪೂರ್ಣತೆಯ ಕಡೆಗೆ ಸಾಗುವ ವಿಕಾಸದ ಭಾಗವೆಂದು ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದರು.

ದುರ್ಬಲ ಜೀವಿಗಳು ಅನುಭವಿಸಿದ ನೋವುಗಳನ್ನು ಸರಿಪಡಿಸುವುದು, ಎಣೆಯಿಲ್ಲದ ಒಳ್ಳೆಯತನ ಹೊಂದಿರುವ ಸೃಷ್ಟಿಕರ್ತ ಇದ್ದರೂ, ಸಾಧ್ಯವಿಲ್ಲದ ಕೆಲಸದಂತೆ ಕಾಣಿಸುತ್ತದೆ ಎಂದು ಚಾರ್ಲ್ಸ್‌ ಡಾರ್ವಿನ್ ಒಮ್ಮೆ ಹೇಳಿದ್ದ.

ದೇವರನ್ನು ನಂಬುವವರು ವಾದಿಸುತ್ತಿರುವ ರೀತಿಯಲ್ಲಿ ಜಗತ್ತು ಪರಿಪೂರ್ಣತೆಯ ಕಡೆ ಸಾಗುತ್ತಿಲ್ಲ ಎಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಕೆಡುಕು ಎಂಬುದು ವರ್ಷಗಳು ಕಳೆದಂತೆ ಕಡಿಮೆಯೇನೂ ಆಗಿಲ್ಲ. ಅದು ಹೊಸ ಹೊಸ ರೂಪಗಳಲ್ಲಿ, ಇನ್ನಷ್ಟು ಹೃದಯಹೀನ ರೂಪದಲ್ಲಿ ಹೆಚ್ಚುತ್ತಿದೆ. ಕಾಲವು ಅನಂತದೆಡೆಗೆ ಸಾಗಿದಂತೆಲ್ಲ ರಕ್ತ ಮತ್ತು ಕಣ್ಣೀರು ಹರಿಯುವುದು ಹೆಚ್ಚುತ್ತಲೇ ಇದೆ.

ಕಠುವಾದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿರುವುದು, ಹದಿನೇಳು ವರ್ಷ ವಯಸ್ಸಿನ ಯುವತಿಯ ಮೇಲೆ ಉನ್ನಾವ್‌ದಲ್ಲಿ ಅತ್ಯಾಚಾರ ನಡೆಸಿರುವುದು, ಆಕೆಯ ತಂದೆ ಪೊಲೀಸ್ ವಶದಲ್ಲಿರುವಾಗ ಸತ್ತಿರುವುದು ಇಡೀ ದೇಶದ ಜನರ ಮನಸ್ಸನ್ನು ಕಲಕಿದೆ. ಈ ಅಪರಾಧ ಕೃತ್ಯಗಳು ತೀರಾ ಹೀನವಾಗಿವೆ ಎಂಬುದೊಂದೇ ಇದಕ್ಕೆ ಕಾರಣವಲ್ಲ. ಮನುಷ್ಯನ ಸ್ವಭಾವಕ್ಕೇ ಇವು ವಿರುದ್ಧವಾಗಿವೆ ಎಂಬುದೂ ಅಲ್ಲ. ಆದರೆ, ಅಧಿಕಾರದಲ್ಲಿ ಇರುವವರು ಮತ್ತು ಅವರ ಹಿಂಬಾಲಕರು ತೋರಿದ ನಿರ್ಲಕ್ಷ್ಯ ಮತ್ತು ನೈತಿಕ ಭ್ರಷ್ಟಾಚಾರ ಇದಕ್ಕೆ ಕಾರಣ. ಅಪರಾಧ ಕೃತ್ಯಕ್ಕೆ ಅವರು ತೋರಿಸಿದ ಪ್ರತಿಕ್ರಿಯೆ, ಈ ಕೃತ್ಯ ಪಡೆದುಕೊಂಡ ಧಾರ್ಮಿಕ, ಕೋಮುವಾದಿ ಮತ್ತು ಜಾತಿವಾದದ ಬಣ್ಣ ಅದಕ್ಕೆ ಕಾರಣ. ಈ ರೀತಿಯ ತಿರುವುಗಳನ್ನು ಈ ಘಟನೆಗಳು ಪಡೆದುಕೊಂಡಿದ್ದು ರಕ್ತ ಹೆಪ್ಪುಗಟ್ಟಿಸುವಂಥದ್ದು.

ಕಠುವಾದಲ್ಲಿ ಕೊಲೆಯಾದ ಹುಡುಗಿಯ ಮುಖ, ಆಕೆಯ ಪಾಲಕರ ಮುಖದಲ್ಲಿ ಮಡುಗಟ್ಟಿದ್ದ ನಿರಾಸೆ, ಅತ್ಯಾಚಾರಕ್ಕೆ ಒಳಗಾಗಿ, ತನ್ನ ತಂದೆಯನ್ನೂ ಕಳೆದುಕೊಂಡ ಉನ್ನಾವ್‌ನ ಯುವತಿ ನ್ಯಾಯ ಬಯಸಿ ಅಸಹಾಯಕವಾಗಿ ಅಳುತ್ತಿದ್ದ ರೀತಿ ನಮ್ಮನ್ನು ಬಹುಕಾಲ ಕಾಡಲಿದೆ.

ಎರಡೂ ಕಡೆಯ ರಾಜಕೀಯ ಪಕ್ಷಗಳು, ವಿವಿಧ ಧರ್ಮ, ಜಾತಿ, ಸಮಾಜೋ– ಆರ್ಥಿಕ ಹಿನ್ನೆಲೆಗಳಿಗೆ ಸೇರಿದ ಜನ, ಹಲವು ಸಂದರ್ಭಗಳಲ್ಲಿ ಪುಕ್ಕಲು ಎಂದು ಭಾವಿಸಿದ ಮಾಧ್ಯಮಗಳು (ಈ ಮಾತಿಗೆ ಅಪವಾದಗಳು ಇವೆ) ಒಟ್ಟಾಗಿ ನಿಂತು ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿದವು. ಈ ಜಗತ್ತಿನಲ್ಲಿ ನಮಗೆ ಗೊತ್ತಿರುವುದು ನ್ಯಾಯ ಮಾತ್ರ, ನಾವೆಲ್ಲ ಕೇಳುತ್ತಿರುವುದು ಅದೊಂದನ್ನು ಮಾತ್ರ. ಇಹದ ಬದುಕಿನ ನಂತರ ಸಿಗುವ ನ್ಯಾಯದ ಬಗ್ಗೆ, ಶಾಂತಿಯ ಬಗ್ಗೆ ನಮಗೆ ಗೊತ್ತಿಲ್ಲ. ಕರ್ಮ ಸಿದ್ಧಾಂತಗಳ ಬಗ್ಗೆಯೂ ಗೊತ್ತಿಲ್ಲ. ಭಾರತದಲ್ಲಿ ಇಂದು ನ್ಯಾಯದಾನ ಎನ್ನುವುದು ಎಷ್ಟು ವಿಳಂಬ ಆಗುತ್ತದೆ ಎಂದರೆ, ಅದು ಹಲವು ಧರ್ಮಗಳಲ್ಲಿ ಹೇಳಿರುವ, ಯಾರಿಗೂ ಖಚಿತತೆ ಇಲ್ಲದ ಸ್ವರ್ಗದಲ್ಲಿ ಸಿಗುವ ನ್ಯಾಯದಂತೆ ಇದೆ.

ಹುಚ್ಚರು ಅಪರಾಧ ಕೃತ್ಯಗಳನ್ನು ಎಸಗಿದಾಗ ಅವುಗಳನ್ನು ಪ್ರತ್ಯೇಕವಾಗಿ ನೋಡಬಹುದು. ಅಂತಹ ಕೃತ್ಯಗಳ ಪರಿಣಾಮ ತೀರಾ ಅಪಾಯಕಾರಿ ಇರುವುದಿಲ್ಲ ಎಂದೂ ಹೇಳಬಹುದು. ಆದರೆ, ಇಂತಹ ಅಪರಾಧಗಳನ್ನು ಧರ್ಮ, ಸಿದ್ಧಾಂತ, ಕೋಮು ಅಥವಾ ಜಾತಿಯ ನೆಲೆಯಲ್ಲಿ ಕಾನೂನಿನ ಬಗ್ಗೆ ಗೌರವವೇ ಇಲ್ಲದಂತೆ ಎಸಗುವುದು ತೀರಾ ಭೀತಿ ಮೂಡಿಸುವಂಥದ್ದು. ಇಂಥ ಕೃತ್ಯಗಳನ್ನು ಅಧಿಕಾರ ಇರುವವರು ಅಧಿಕಾರ ಇಲ್ಲದವರ ಮೇಲೆ, ದುರ್ಬಲರ ಮೇಲೆ, ತಮ್ಮನ್ನು ರಕ್ಷಿಸಿಕೊಳ್ಳಲಾಗದವರ ಮೇಲೆ ನಡೆಸಿದಾಗ ಭೀತಿ ಉಂಟಾಗುತ್ತದೆ. ಮಕ್ಕಳ ಮೇಲೆ, ಚಿಕ್ಕ ವಯಸ್ಸಿನವರ ಮೇಲೆ ಅತ್ಯಾಚಾರ ನಡೆಸುವವರನ್ನು, ಅವರನ್ನು ಕೊಲ್ಲುವವರನ್ನು ಯಾವುದು ಕೂಡ ಶಿಕ್ಷೆಯಿಂದ ತಪ್ಪಿಸಬಾರದು.

ಒಳಿತು ಮತ್ತು ಕೆಡುಕುಗಳ ವಿಶ್ಲೇಷಣೆಯ ಹೊರತಾಗಿ ಹೇಳಬೇಕೆಂದರೆ, ಇಂತಹ ಅಪರಾಧಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮನುಷ್ಯನ ಸ್ವಭಾವವು ಇಂಥದ್ದನ್ನು ಸಹಿಸುವುದಿಲ್ಲ. ಇವಾನ್‌, ಅಲ್ಯೋಶಾ ಬಳಿ ಹೇಳುವಂತೆ, ‘ನಾನು ತಿಳಿದಿರುವಂತೆ, ಇಲ್ಲಿ ಸಂಕಟ, ನೋವು ಇದೆ. ಇಲ್ಲಿ ಯಾರೂ ದೋಷಿಗಳಲ್ಲ. ಇದರ ಜೊತೆ ಇರುವುದಕ್ಕೆ ನಾವು ಸಮ್ಮತಿ ನೀಡಲು ಆಗದು. ನಾನು ನ್ಯಾಯ ಪಡೆಯಬೇಕು. ಇಲ್ಲವಾದರೆ ನಾನು ನನ್ನನ್ನೇ ನಾಶ ಮಾಡಿಕೊಳ್ಳುವೆ. ನ್ಯಾಯ ಎಂಬುದು ದೂರದ ಕಾಲಘಟ್ಟವೊಂದರಲ್ಲಿ ಸಿಗುವಂಥದ್ದಲ್ಲ. ಅದು ಈ ಭೂಮಿಯ ಮೇಲೆಯೇ, ನಾನು ನೋಡುವ ರೀತಿಯಲ್ಲಿಯೇ ಸಿಗುವಂತೆ ಇರಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT