ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌: ತೇಜಸ್ವಿನಿ–ರಜಪೂತ್‌ಗೆ ಚಿನ್ನ

ವಿಜಯವೀರ್‌ಗೆ ಬೆಳ್ಳಿ
Last Updated 26 ಮಾರ್ಚ್ 2021, 12:05 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅನುಭವಿ ಶೂಟಿಂಗ್ ಪಟುಗಳಾದ ಸಂಜೀವ್ ರಜಪೂತ್–ತೇಜಸ್ವಿನಿ ಸಾವಂತ್‌, ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮಿಶ್ರ ತಂಡ ವಿಭಾಗದ 50 ಮೀಟರ್ ರೈಫಲ್ ತ್ರಿ ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಶುಕ್ರವಾರ ಅವರು ಅಗ್ರಸ್ಥಾನ ಗಳಿಸಿದರು.

ಫೈನಲ್ಸ್ ಹಣಾಹಣಿಯಲ್ಲಿ ಭಾರತದ ಶೂಟರ್‌ಗಳು 31–29 ಪಾಯಿಂಟ್ಸ್‌ನಿಂದ ಉಕ್ರೇನ್‌ನ ಸೆರಿಯ್ ಕುಲಿಷ್‌–ಅನ್ನಾ ಇಲಿನಾ ಅವರನ್ನು ಹಿಂದಿಕ್ಕಿದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಐಶ್ವರಿಪ್ರತಾಪ್ ಸಿಂಗ್ ತೋಮರ್‌–ಸುನಿಧಿ ಚೌಹಾನ್ 31–15ರಿಂದ ಅಮೆರಿಕದ ತಿಮೋಥಿ ಶೆರಿ–ವರ್ಜಿನಿಯಾ ಥ್ರೇಷರ್ ಅವರ ಸವಾಲನ್ನು ಮೀರಿ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಅರ್ಹತಾ ಸುತ್ತಿನಲ್ಲಿ ರಜಪೂತ್–ತೇಜಸ್ವಿನಿ ಒಟ್ಟು 588 ಸ್ಕೋರ್ ಕಲೆಹಾಕಿ ಅಗ್ರಸ್ಥಾನ ಗಳಿಸಿದ್ದರು. ತೋಮರ್–ಸುನಿಧಿ ಗಳಿಸಿದ್ದು 580 ಪಾಯಿಂಟ್ಸ್. ಇವರು ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಫೈನಲ್ಸ್‌ಗೆ ಅರ್ಹತೆ ಪಡೆದಿದ್ದರು.

ಪುರುಷರ ವಿಭಾಗದಲ್ಲೂ ಪಾರಮ್ಯ: ನೀರಜ್ ಕುಮಾರ್, ಸ್ವಪ್ನಿಲ್ ಕುಸಾಲೆ ಹಾಗೂ ಚೈನ್ ಸಿಂಗ್ ಅವರನ್ನೊಳಗೊಂಡ ಭಾರತದಪುರುಷರ ತಂಡವೂ 50 ಮೀ. ರೈಫಲ್ 3 ಪೊಸಿಷನ್ಸ್‌ನಲ್ಲಿ ಚಿನ್ನದ ಪದ ತನ್ನದಾಗಿಸಿಕೊಂಡಿತು. ಫೈನಲ್ಸ್‌ನಲ್ಲಿ ಈ ಶೂಟರ್‌ಗಳು 47–25 ಪಾಯಿಂಟ್ಸ್‌ನಿಂದ ಅಮೆರಿಕ ತಂಡವನ್ನು ಮಣಿಸಿದರು. ಇದರೊಂದಿಗೆ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ 12ಕ್ಕೇರಿದೆ.

ಅಮೆರಿಕ ತಂಡದಲ್ಲಿ ನಿಕೊಲಾಸ್ ಮೊವ್‌ರೆರ್‌, ತಿಮೋಥಿ ಶೆರಿ ಹಾಗೂ ಪ್ಯಾಟ್ರಿಕ್ ಸಂಡರ್ಮನ್‌ ಇದ್ದರು.

ಗುರುವಾರ ನಡೆಯಬೇಕಿದ್ದ ಈ ಸ್ಪರ್ಧೆಯ ಫೈನಲ್‌ನಲ್ಲಿ ಭಾರತ ತಂಡವು ಹಂಗರಿಯೊಂದಿಗೆ ಸೆಣಸಬೇಕಿತ್ತು. ಆದರೆ ಹಂಗರಿ ತಂಡದ ಶೂಟರ್‌ಗಳು ಆಂತರಿಕ ಕಲಹದಿಂದಾಗಿ ಹಿಂದೆ ಸರಿದಿದ್ದರು. ಹೀಗಾಗಿ ಮೂರನೇ ಸ್ಥಾನದಲ್ಲಿದ್ದ ಅಮೆರಿಕಕ್ಕೆ ಈ ಅವಕಾಶ ಸಿಕ್ಕಿತ್ತು.

ಚಿನ್ನದ ಪದಕ ತಪ್ಪಿಸಿಕೊಂಡ ವಿಜಯವೀರ್‌: 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಜಯವೀರ್ ಸಿಧು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಫೈನಲ್ಸ್‌ನಲ್ಲಿ ಅವರು ಈಸ್ಟೋನಿಯಾದ ಪೀಟರ್ ಓಲೆಸ್ಕ್‌ ಎದುರು ಹಿನ್ನಡೆ ಅನುಭವಿಸಿದರು.

ಫೈನಲ್ಸ್‌ನಲ್ಲಿ ಇಬ್ಬರೂ ತಲಾ 26 ಪಾಯಿಂಟ್ಸ್ ಕಲೆಹಾಕಿದ್ದರು. ಇದರಿಂದಾಗಿ ಫಲಿತಾಂಶ ನಿರ್ಧರಿಸಲು ಶೂಟ್ ಆಫ್ ಮೊರೆ ಹೋಗಲಾಯಿತು. ಇಲ್ಲಿ ಈಸ್ಟೋನಿಯಾದ ಶೂಟರ್‌ 4–1ರಿಂದ ಗೆದ್ದು ಅಗ್ರಸ್ಥಾನ ಗಳಿಸಿದರು. ಪೋಲೆಂಡ್‌ನ ಆಸ್ಕರ್ ಮಿಲಿವೆಕ್‌ ಕಂಚಿನ ಪದಕ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT