ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನದಿ ಜಾಗೃತಿ– ಕ್ರಿಕೆಟಿಗರಿಗೆ ದೊಡ್ಡ ಪಾತ್ರ’

Last Updated 21 ಜುಲೈ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದಲ್ಲಿ ಕ್ರಿಕೆಟ್‌ ಮತ್ತು ಸಿನಿಮಾ ಭಾರಿ ಸಂಖ್ಯೆಯಲ್ಲಿ ಜನರನ್ನು ತಲುಪುತ್ತದೆ. ಸಿನಿಮಾಗಳಿಗೆ ಭಾಷೆ ಇದ್ದು ಅದು ರಾಜ್ಯಗಳಿಗೆ ಸೀಮಿತ. ಆದರೆ ಕ್ರಿಕೆಟ್‌ ರಾಷ್ಟ್ರದಲ್ಲೆಲ್ಲಾ ಹಬ್ಬಿದೆ. ಹೀಗಾಗಿ ನದಿ ಉಳಿವಿಗೆ ಜಾಗೃತಿ ಮೂಡಿಸುವಲ್ಲಿ ಕ್ರಿಕೆಟ್‌ ಆಟಗಾರರಿಗೆ ಬಹುದೊಡ್ಡ ಪಾತ್ರವಿದೆ’ ಎಂದು ಈಶ ಫೌಂಡೇಷನ್‌ನ ಜಗ್ಗಿ ವಾಸುದೇವ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಕ್ರಿಕೆಟ್‌ ಅಟಗಾರ ಕೆ.ಎಲ್‌.ರಾಹುಲ್‌ ಜೊತೆ ಸದ್ಗುರು ಸಂವಾದ ನಡೆಸಿದರು. ‘ನದಿ ಅಥವಾ ಕೆರೆ, ಸರೋವರಗಳು ನೀರಿನ ಮೂಲ ಎಂಬ ಭಾವನೆ ಜನರಲ್ಲಿದೆ. ಆದರೆ ಅವು ನೀರಿನ ಮೂಲಗಳಲ್ಲ. ಅವು ನೀರಿಗೆ ಆಶ್ರಯತಾಣಗಳಷ್ಟೇ. ವರ್ಷಕ್ಕೆ45 ರಿಂದ 60 ದಿನ ಬೀಳುವ ಮುಂಗಾರು ಮಳೆಯೇ ನಿಜವಾದ ನೀರಿನ ಮೂಲ. ಕಾಡು ಬೆಳೆಸಿದರಷ್ಟೇ ನೀರನ್ನು ಹಿಡಿದಿಡಬಹುದು’ ಎಂದರು.

ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ, ಆಧ್ಯಾತ್ಮಿಕ ಕ್ರಾಂತಿ ನಡೆಯಬಹುದು. ವಿಜ್ಞಾನಿಗಳು ಚಂದ್ರನ ಮೇಲೆ ಶೋಧ ನಡೆಸಬಹುದು, ಆದರೆ ನೀರಿನ ಸಮಸ್ಯೆ ಬಿಗಡಾಯಿಸಿದರೆ ಎದುರಾಗುವ ನಾಗರಿಕ ದಂಗೆ ಈ ಎಲ್ಲವನ್ನು ಹಿಂದೆ ಸರಿಸುತ್ತದೆ. ಈಗ ಚೆನ್ನೈನಲ್ಲಿ ಗಂಭೀರಿ ಪರಿಸ್ಥಿತಿಯಿದೆ. ಬೆಂಗಳೂರಿನಲ್ಲಿ ಅಂಥ ಸ್ಥಿತಿ ಎದುರಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಎಚ್ಚರಿಸಿದರು.

ನೀರಿನ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳುವಾಗ ತಮಗೆದುರಾದ ಸಂದರ್ಭದ ಬಗ್ಗೆ ರಾಹುಲ್‌ ಪ್ರಸ್ತಾಪಿಸಿದರು. ‘ಇಂಗ್ಲೆಂಡ್‌ನಿಂದ 3–4 ದಿನಗಳ ಹಿಂದೆ ಬೆಂಗಳೂರಿಗೆ ಮರಳಿದ್ದೆ. ನೀರಿನ ಸಮಸ್ಯೆ ಬಗ್ಗೆ ಗೊತ್ತಿರಲಿಲ್ಲ. ಸ್ನಾನಕ್ಕೆ ಹೋಗುವಾಗ ಸೋದರಿ ಹೇಳಿದಳು– ಷವರ್‌ ಬಳಸಬೇಡ. ನೀರಿನ ಸಮಸ್ಯೆಯಿದೆ. ಬಕೆಟ್‌ ನೀರನ್ನು ಬಳಸು’. ಆಗ ಸಮಸ್ಯೆಯ ಅರಿವಾಯಿತು ಎಂದು ರಾಹುಲ್‌ ಹೇಳಿದರು.

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌), ‘ಕಾವೇರಿ ಕಾಲಿಂಗ್‌’ ಆಂದೋಲನದ ಜೊತೆ ಗುರುತಿಸಿಕೊಳ್ಳಲಿದೆ ಎಂದು ರಾಹುಲ್‌ ಹೇಳಿದರು. ಇದೇ ವೇಳೆ ಸೆಪ್ಟೆಂಬರ್‌ ಆರಂಭದಲ್ಲಿ ನಡೆಯುವ ಈ ಲೀಗ್‌ನ ಫೈನಲ್‌ಗೆ ಬರುವುದಾಗಿ ಸದ್ಗುರುಭರವಸೆ ನೀಡಿದರು.

ಕರ್ನಾಟಕದ ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಕಾವೇರಿ ಉಳಿವಿನ ಬಗ್ಗೆ ಸರ್ಕಾರದ ಬಳಿ ಪ್ರಸ್ತಾಪಿಸಲು ಆಗುವುದೇ ಎಂದು ಸಭಿಕರೊಬ್ಬರು ಕೇಳಿದಾಗ ‘ಶೀಘ್ರ ಹೊಸ ಕೂಸು ಹುಟ್ಟಬಹುದು’ ಎಂದು ಸೂಚ್ಯವಾಗಿ ಹೇಳಿದರು.

ಕಣ್ಣುಮುಚ್ಚಿಕೊಂಡಿದ್ದೆ...

ಹಿಂದೊಮ್ಮೆ ಬೆಂಗಳೂರಿಗೆ ಅಮೆರಿಕದ ಮಹಿಳೆಯೊಬ್ಬರು ಬಂದಿದ್ದರು. ಆಗ ರಸ್ತೆಗಳಲ್ಲಿ ಆಟೊಗಳದ್ದೇ ದರ್ಬಾರು. ಕೌಶಲ, ಸದ್ದುಗಳೊಡನೆ ಈ ಮೂರು ಚಕ್ರದ ವಾಹನಗಳು 40–45 ಕಿ.ಮೀ ವೇಗದಲ್ಲಿ ಸಾಗುತ್ತಿದ್ದರೂ, ಚಾಲಕರು ಫಾರ್ಮುಲಾ ಒನ್‌ ವಾಹನದ ರೀತಿ ಚಲಾಯಿಸುತ್ತಿದ್ದರು.

ಈ ಮಹಿಳೆಯನ್ನು ಆಟೊಗೆ ಹತ್ತಿಸಿಕೊಂಡ ಚಾಲಕ ಆಕೆಯ ಗಮನಸೆಳೆಯಲು ವಾಹನಗಳ ಎಡೆಗಳಿಂದ ಮುಂದೆಹೋಗುತ್ತಿದ್ದ. ಒಂದು ಹಂತದಲ್ಲಿ ಎರಡು ಬಸ್‌ಗಳ ನಡುವೆ ವೇಗವಾಗಿ ನುಗ್ಗಿಸಿ ಮುನ್ನಡೆದಿದ್ದ. ಇಳಿದ ಮೇಳೆ ಆಕೆ ಕೇಳಿದಳು– ಅಷ್ಟೊಂದು ಅವಕಾಶ ಇಲ್ಲದಿದ್ದರೂ ಬಸ್‌ಗಳ ಮಧ್ಯೆ ಹೇಗೆ ನುಗ್ಗಿಹೋದೆ?. ಆಗ ಆಟೊ ಚಾಲಕ ಹೇಳಿದ್ದು– ‘ನಾನು ಕಣ್ಣುಮುಚ್ಚಿದ್ದೆ’.

ಸದ್ಗುರು ಈ ಘಟನೆ ಪ್ರಸ್ತಾಪಿಸಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು. ಆ ಮಹಿಳೆ ಸ್ವತಃ ಸದ್ಗುರು ಬಳಿ ಈ ಅನುಭವ ಹೇಳಿಕೊಂಡಿದ್ದರಂತೆ. ನಮಗೆ ಸ್ಪಷ್ಟತೆ ಇದ್ದರೆ ಆತ್ಮವಿಶ್ವಾಸ ಇರುತ್ತದೆ ಎಂದು ಸದ್ಗುರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT