ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳಾರಫೀಕ್‌ ‘ಸಿದ್ದೇಶ್ವರ ಕೇಸರಿ’

ಆತಿಥೇಯರ ಎದುರು ನಡೆಯದ ರಷ್ಯಾ ಸ್ಪರ್ಧಿಗಳ ಆಟ
Last Updated 21 ಅಕ್ಟೋಬರ್ 2018, 19:28 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಸಿದ್ದೇಶ್ವರ ದಸರಾ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಆಹ್ವಾನಿತ ಜಂಗಿ ಕುಸ್ತಿಯಲ್ಲಿ ಮಹಾರಾಷ್ಟ್ರದ ಹೆಸರಾಂತ ಪೈಲ್ವಾನ್‌ ಬಾಳಾರಫೀಕ್‌ ಶೇಖ್‌ ‘ಸಿದ್ದೇಶ್ವರ ಕೇಸರಿ’ ಪ್ರಶಸ್ತಿಗೆ ಭಾಜನರಾದರು.

ಮಾಸ್ಕೊದಲ್ಲಿ ನಡೆದ ಟೂರ್ನಿಯಲ್ಲಿ ರಷ್ಯಾದ ಓಮರ್‌ ಓಮಾರೋವ್ಹ್‌ ಚಾಂಪಿಯನ್‌ ಆಗಿದ್ದರು. ಆದ್ದರಿಂದ ವಿದೇಶಿ ಕುಸ್ತಿ ಪಟುವಿನ ಕರಾಮತ್ತು ನೋಡಲು ಸ್ಥಳೀಯ ಅಭಿಮಾನಿಗಳು ಕುತೂಹಲದಿಂದ ಕಾದಿದ್ದರು. ಆದರೆ, ಬಾಳಾರಫೀಕ್‌ ಏಳೆಂಟು ಸೆಕೆಂಡ್‌ಗಳಲ್ಲಿ ಓಮಾರೋವ್ಹ್‌ ಅವರನ್ನು ಚಿತ್‌ ಮಾಡುವ ಮೂಲಕ ಸಂಭ್ರಮ ಹೆಚ್ಚಿಸಿದರು.

ಎರಡನೇ ಕುಸ್ತಿ ಪಂದ್ಯದಲ್ಲಿ ರಷ್ಯಾದ ತೆಮಿರಲಾನ್ ಬೊಸ್ತಾನೋವ್ಹ್‌ ಎದುರು 12 ನಿಮಿಷ ಹೋರಾಡಿ ಕೊಲ್ಹಾಪುರದ ಯೋಗೇಶ ಬೊಂಬಾಳೆ ‘ಮಹಾನ್ ಭಾರತ ಕೇಸರಿ’ ಗೌರವ ಪಡೆದರು.

ಮೂರನೇ ಕುಸ್ತಿಯ ‘ಭಾರತ ಕೇಸರಿ’ ಪೈಪೋಟಿಯಲ್ಲಿ ದೆಹಲಿಯ ಸನ್ನಿ ಜಾನ್ ಮತ್ತು ಸಂತೋಷ್‌ ಸುತಾರ ನಡುವೆ 7 ನಿಮಿಷಕ್ಕೂ ಹೆಚ್ಚು ಕಾಲ ರೋಚಕ ಹೋರಾಟ ನಡೆದಿತ್ತು. ಒಂದು ಹಂತದಲ್ಲಿ ಸಂತೋಷ ಎಡ ಮೊಣಕಾಲು ಉಳುಕಿದ ಕಾರಣ ಸನ್ನಿಜಾನ್‌ ಅವರನ್ನು ವಿಜೇತರೆಂದು ಘೋಷಿಸಲಾಯಿತು.

ಇನ್ನಷ್ಟು ಪಂದ್ಯಗಳಲ್ಲಿ ಬೆಳಗಾವಿಯ ಬಸು ಚಿಮಡ, ಮಹಾರಾಷ್ಟ್ರದ ಪೈಲ್ವಾನ್‌ರಾದ ನವನಾಥ ಇಂಗಳೆ, ಸಿಕಂದರ್ ಶೇಖ್‌, ದತ್ತಾ ನರಳೆ, ಇಂದ್ರಜೀತ್ ಮಗದುಮ್ ವಿಜೇತರಾದರು. ದಾವಣಗೇರಿಯ ಪೈಲ್ವಾನ್‌ ಕಾರ್ತಿಕ ಕಾಟೆ ಹರಿಯಾಣದ ಉಮೇಶ ಮಥುರಾ ಎದುರು ಸೋಲು ಕಂಡರು.

ಬೇಡಕಿಹಾಳ ಕುಸ್ತಿ ಪಂದ್ಯಕ್ಕೆ ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದ್ದು, ಪ್ರಸಕ್ತ ವರ್ಷದಿಂದ ‘ಸಿದ್ದೇಶ್ವರ ಕೇಸರಿ’ ಪ್ರಶಸ್ತಿಯನ್ನು ಮೊದಲ ಕ್ರಮಾಂಕದ ಕುಸ್ತಿ ವಿಜೇತರಿಗೆ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT