ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮನ್‌ಪ್ರೀತ್ ಬಳಗಕ್ಕೆ ನಿರಾಸೆ- ಫೈನಲ್‌ಗೆ ಜಪಾನ್

ಮೂರನೇ ಸ್ಥಾನಕ್ಕಾಗಿ ಭಾರತ–ಪಾಕ್ ಹಣಾಹಣಿ
Last Updated 21 ಡಿಸೆಂಬರ್ 2021, 15:54 IST
ಅಕ್ಷರ ಗಾತ್ರ

ಢಾಕಾ: ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಆಘಾತ ಅನುಭವಿಸಿತು.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಜಪಾನ್ ತಂಡವು 5–3ರಿಂದ ಮನಪ್ರೀತ್ ಸಿಂಗ್ ಬಳಗವನ್ನು ಸೋಲಿಸಿತು. ರೌಂಡ್ ರಾಬಿನ್ ಲೀಗ್‌ನಲ್ಲಿ ಭಾರತ ತಂಡವು 6–0ಯಿಂದ ಜಪಾನ್ ವಿರುದ್ಧ ಜಯಭೇರಿ ಬಾರಿಸಿತ್ತು. ಆದರೆ, ಸೆಮಿಫೈನಲ್‌ನಲ್ಲಿ ನಿಖರ ತಂತ್ರಗಳೊಂದಿಗೆ ಕಣಕ್ಕಿಳಿದ ಜಪಾನಿಯರು ಭಾರತ ತಂಡದ ವಿರುದ್ಧ ಮುಯ್ಯಿ ತೀರಿಸಿಕೊಂಡರು.

ಜಪಾನಿನ ಶೋಟಾ ಯಮಾಡಾ ಮೊದಲ ನಿಮಿಷದಲ್ಲಿಯೇ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದರು. ಎರಡನೇ ನಿಮಿಷದಲ್ಲಿ ರೈಕಿ ಫುಜಿಶಿಮಾ ಫೀಲ್ಡ್ ಗೋಲು ಗಳಿಸುವ ಮೂಲಕ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಮೂಡಿಸಿದರು.

ಭರ್ಜರಿ ಆರಂಭದ ಆತ್ಮವಿಶ್ವಾಸದಲ್ಲಿ ತೇಲಿದ ತಂಡದ ಯೊಶಿಕಿ ಕಿರೀಷ್ತಾ (14ನೇ ನಿ), ಕೊಸೀ ಕವಾಬೆ (35ನಿ) ಮತ್ತು ರೊಮಾ ಊಕಾ (41ನಿ) ಗೋಲು ಗಳಿಸಿದರು.

ಜಪಾನ್ ತಂಡವು 3–0 ಮುನ್ನಡೆಯಲ್ಲಿದ್ದಾಗ ಭಾರತವು ತಿರುಗೇಟು ನೀಡುವತ್ತ ಹೆಜ್ಜೆ ಇಟ್ಟಿತ್ತು. ಅದರ ಫಲವಾಗಿ 17ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಗೋಲು ಹೊಡೆದರು. ಆದರೆ, ನಂತರದ ಆಟದಲ್ಲಿ ಜಪಾನ್ ರಕ್ಷಣಾ ಪಡೆಯು ಅಮೋಘ ಕೌಶಲ ಮೆರೆಯಿತು.

ಇದರಿಂದಾಗಿ ಭಾರತಕ್ಕೆ ಎರಡನೇ ಗೋಲು ಗಳಿಸುವ ಅವಕಾಶ ಸಿಕ್ಕಿದ್ದು 43ನೇ ನಿಮಿಷದಲ್ಲಿ. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಕೈಚಳಕದಿಂದ ಗೋಲು ಒಲಿಯಿತು. 58ನೇ ನಿಮಿಷದಲ್ಲಿ ಮೂರನೇ ಗೋಲು ಭಾರತದ ಖಾತೆ ಸೇರಲು ಹಾರ್ದಿಕ್ ಸಿಂಗ್ ಕಾರಣರಾದರು. ಆದರೆ, ಜಪಾನ್‌ ಬಹಳಷ್ಟು ಮುನ್ನಡೆ ಸಾಧಿಸಿಯಾಗಿತ್ತು.

ಭಾರತ ಮತ್ತು ಜಪಾನ್ ತಂಡಗಳು ಒಟ್ಟಾರೆ 18 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 16 ಸಲ ಭಾರತ ಗೆದ್ದಿದೆ. ಒಂದು ಬಾರಿ ಜಪಾನ್ ಜಯಿಸಿದ್ದು, ಇನ್ನೊಂದು ಪಂದ್ಯದಲ್ಲಿ ಡ್ರಾ ಆಗಿತ್ತು. ಈ ಟೂರ್ನಿಯ ಲೀಗ್‌ನಲ್ಲಿಯೂ ಭಾರತ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿತ್ತು.

ಬುಧವಾರ ನಡೆಯಲಿರುವ ಮೂರನೇ ಸ್ಥಾನದ ಪಂದ್ಯದಲ್ಲಿ ಭಾರತವು ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಆಡಲಿದೆ. ಫೈನಲ್‌ನಲ್ಲಿ ಜಪಾನ್ ತಂಡವು ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ಎರಡನೇ ಸೆಮಿಫೈನಲ್‌ನಲ್ಲಿ ಕೊರಿಯಾ ತಂಡವು 6–5ರಿಂದ ಪಾಕಿಸ್ತಾನ ಎದುರು ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT