ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್‌ ಥ್ರೋ ಛಲಗಾತಿ ರಮ್ಯಾ

Last Updated 23 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಳಗಿನ ಮಾಗಿ ಚಳಿಯನ್ನು ಲೆಕ್ಕಿಸದೇ ಆ ಯುವತಿ ಓಡಿ ಬಂದು ಜಾವೆಲಿನ್‌ ಎಸೆದರು. ಅದು ಸುಮಾರು 31 ಮೀಟರ್‌ ದೂರದವರೆಗೆ ಹೋಗಿ ಬಿದ್ದಿತು. ತರಬೇತುದಾರರ ಮುಖ ನೋಡಿದ ಅವರು, ಮತ್ತೊಂದು ಪ್ರಯತ್ನಕ್ಕೆ ಮುಂದಾದರು. ಎರಡನೇ ಪ್ರಯತ್ನಕ್ಕೆ 32 ಮೀಟರ್‌ ತಲುಪಿತು. ಬಲಗೈನಲ್ಲಿ ಜಾವೆಲಿನ್‌ ಹಿಡಿದು ಓಡುತ್ತಿದ್ದ ಆ ಯುವತಿಯ ಎಡ ಅಂಗೈ ಊನವಾಗಿದೆ.

ಬೆಳಿಗ್ಗೆ ಹಾಗೂ ಸಂಜೆ ತಲಾ ಎರಡು ಗಂಟೆಗಳಂತೆ ದಿನಕ್ಕೆ ನಾಲ್ಕು ಗಂಟೆಗೂ ಹೆಚ್ಚು ಸಮಯ ಜಾವೆಲಿನ್‌ ಥ್ರೋ ಅಭ್ಯಾಸ ಮಾಡುವ ಮೂಲಕ ದುಬೈನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧರಾಗುತ್ತಿದ್ದಾರೆ ಮೈಸೂರಿನ ರಮ್ಯಾ ಷಣ್ಮುಗಂ.

ಕಳೆದ ಅಕ್ಟೋಬರ್‌ನಲ್ಲಿ ಜಕಾರ್ತದಲ್ಲಿ ನಡೆದ 18ನೇ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಜಾವೆಲಿನ್‌ ಥ್ರೋನಲ್ಲಿ (ಎಫ್‌ 46 ಮಹಿಳಾ ವಿಭಾಗ) ಬೆಳ್ಳಿ ಪದಕ ಗೆದ್ದ ರಮ್ಯಾ 2020ರಲ್ಲಿ ನಡೆಯುವ ಪ್ಯಾರಾ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯುವ ಹಂಬಲದಲ್ಲಿದ್ದಾರೆ.

ಮೈಸೂರಿನ ಡೆಕತ್ಲಾನ್ ಸ್ಟೋರ್‌ನಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ರಮ್ಯಾ ಅವರು, ಮೂಲತಃ ತಮಿಳುನಾಡಿನ ಸತ್ಯಮಂಗಲಂನವರು. ಇವರಿಗೆ ಹುಟ್ಟಿನಿಂದಲೇ ಎಡ ಅಂಗೈ ಊನವಾಗಿದೆ. ತಂದೆ ಷಣ್ಮುಗಂ ಕೃಷಿಕರು. ತಾಯಿ ಸುಬ್ಬುಲಕ್ಷ್ಮಿ. ರಮ್ಯಾ ಎರಡನೇ ಮಗಳು.

ಪಿಯುಸಿವರೆಗೆ ಸತ್ಯಮಂಗಲಂನಲ್ಲಿ ಓದಿದ ಇವರು, ಮಹಿಳೆಯರಿಗೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕಷ್ಟ ಎಂದು ಹೇಳುತ್ತಿದ್ದವರ ಬಾಯಿ ಮುಚ್ಚಿಸುವ ಸಲುವಾಗಿ ಅದೇ ಕೋರ್ಸ್‌ ಆಯ್ಕೆಮಾಡಿಕೊಂಡು ಯಶಸ್ವಿಯಾಗಿ ಪೂರೈಸಿದರು. ನಂತರ ಪಾರ್ಟ್‌ ಟೈಮ್‌ ಕೆಲಸಕ್ಕಾಗಿ ಡೆಕತ್ಲಾನ್‌ ಕ್ರೀಡಾ ಸಲಕರಣೆಗಳ ಮಳಿಗೆ ಸೇರಿಕೊಂಡರು. ಒಂದು ವರ್ಷ ಕೆಲಸ ಮಾಡಿದ ನಂತರ ಮೈಸೂರಿಗೆ ವರ್ಗವಾಯಿತು. ಪ್ರಾಥಮಿಕ ಶಾಲೆ ಹಂತದಿಂದಲೇ ಕ್ರೀಡೆಯೆಲ್ಲಿ ಇದ್ದ ಆಸಕ್ತಿಯನ್ನು ಹೇಳಿಕೊಂಡಿದ್ದಾರೆ.

‘ಏಳನೇ ತರಗತಿಯಲ್ಲಿದ್ದಾಗ ಶಾಟ್‌ಪಟ್ ಹಾಗೂ ಡಿಸ್ಕಸ್‌ ಥ್ರೋನಲ್ಲಿ ಆಸಕ್ತಿಯಿತ್ತು. 2009ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೆಟಗರಿಯವರಿಗೆ ಅವಕಾಶ ಕಡಿಮೆ ಇದ್ದುದರಿಂದ ಜಾವೆಲಿನ್‌ ಕಲಿಯುವ ಆಸೆಯಾಯಿತು. 2017ರಲ್ಲಿ ಜಾವೆಲಿನ್ ಅಭ್ಯಾಸಕ್ಕೆ ಮುಂದಾದೆ. ಶಾಟ್‌ಪಟ್‌, ಡಿಸ್ಕಸ್‌ ಥ್ರೋ ಆಟಗಳ ತಂತ್ರಗಳೇ ಬೇರೆ ಜಾವೆಲಿನ್‌ನ ತಂತ್ರವೇ ಬೇರೆ. ಆರಂಭದಲ್ಲಿ ಕಷ್ಟವಾಯಿತು. ಜಾವೆಲಿನ್‌ಅನ್ನು ಓಡಿ ಬಂದು ಎಸೆಯಬೇಕು. ತರಬೇತುದಾರ ಮೋಹನ್‌ ಕುಮಾರ್‌ ಕೆಲ ತಂತ್ರಗಳನ್ನು ಹೇಳಿಕೊಟ್ಟರು. ಗ್ರ್ಯಾನ್‌ಪ್ರೀ ಆಡಿದ ನಂತರ ಸುಲಭವಾಯಿತು. ಎಂಟು ಗಂಟೆ ಡೆಕತ್ಲಾನ್‌ನಲ್ಲಿ ಕೆಲಸ ಮಾಡುತ್ತೇನೆ, ಬೆಳಿಗ್ಗೆ ಹಾಗೂ ಸಂಜೆ ಅಭ್ಯಾಸ ಮಾಡುತ್ತೇನೆ’ ಎಂದು ಹೇಳುತ್ತಾರೆ ರಮ್ಯಾ.

ಜಕಾರ್ತದಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್ಲರಿಗೂ ಆರು ಛಾನ್ಸ್‌ಗಳಿದ್ದವು. ಮೊದಲ ಮೂರು ಬಾರಿ ಎಸೆದವರಲ್ಲಿ ಅತ್ಯುತ್ತಮ 10 ಮಂದಿಯನ್ನು ಆಯ್ಕೆ ಮಾಡುತ್ತಾರೆ. ನಾಲ್ಕು ಪ್ರಯತ್ನಗಳವರೆಗೆ 24ನೇ ಸ್ಥಾನದಲ್ಲಿದ್ದೆ. ಐದನೇ ಪ್ರಯತ್ನದಲ್ಲಿ 31.52 ಮೀಟರ್‌ ಎಸೆದು ಎರಡನೇ ಸ್ಥಾನಕ್ಕೆ ಬಂದೆ. ಕಜಕಸ್ತಾನದ ಪ್ರತಿಸ್ಪರ್ಧಿ 34.05 ಮೀಟರ್‌ ದೂರ ಎಸೆದು ಮೊದಲ ಸ್ಥಾನ ಗಳಿಸಿದರು ಎಂದು ಮೊದಲ ಏಷ್ಯನ್ ಗೇಮ್ಸ್‌ ಅನುಭವ ಹೇಳಿಕೊಂಡರು.

2018ರಲ್ಲಿ ಏಪ್ರಿಲ್‌ನಲ್ಲಿ ದುಬೈನಲ್ಲಿ ವರ್ಲ್ಡ್‌ ಗ್ರ್ಯಾನ್‌ ಪ್ರೀ ಟೂರ್ನಿಯಲ್ಲಿ ಆಡಿದೆ. ಆಗ ಜಾವೆಲಿನ್‌ನಲ್ಲಿ ಕಂಚಿನ ಪದಕ ಜಯಿಸಿದೆ ಹಾಗೂ ಡಿಸ್ಕಸ್‌ ಥ್ರೋನಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡೆ. ಅಲ್ಲಿ ಉತ್ತಮ ರ‍್ಯಾಂಕಿಂಗ್‌ ಸಿಕ್ಕಿತು, ಅದು ನಾಲ್ಕನೇ ಸ್ಥಾನ. ಅದರಿಂದಾಗಿ ಏಷ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್‌ಗೆ ಅವಕಾಶ ಸಿಕ್ಕಿತು. ಬೆಳ್ಳಿ ಜಯಿಸಲು ಸಾಧ್ಯವಾಯಿತು. ಏಷ್ಯನ್‌ ಗೇಮ್ಸ್‌ನಲ್ಲಿ ನಮ್ಮ ಕ್ಯಾಟಗರಿಯವರಿಗೆ (ಎಫ್‌ 46) ಷಾಟ್‌ಪಟ್‌ ಹಾಗೂ ಡಿಸ್ಕಸ್‌ ಥ್ರೋ ಸ್ಪರ್ಧೆಗಳು ಇರಲಿಲ್ಲ. ಹಾಗಾಗಿ ಜಾವೆಲಿನ್‌ ಹಿಡಿಯಲು ನಿರ್ಧರಿಸಿದೆ ಎನ್ನುತ್ತಾರೆ ರಮ್ಯಾ.

2019ರಲ್ಲಿ ಜುಲೈನಲ್ಲಿ ದುಬೈನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರು ಸಹ ಅಲ್ಲಿಗೆ ಬರುತ್ತಾರೆ. ಇದರಲ್ಲಿ ಒಳ್ಳೆಯ ರ‍್ಯಾಂಕ್‌ ಸಿಕ್ಕರೆ 2020ರಲ್ಲಿ ನಡೆಯುವ ಪ್ಯಾರಾ ಒಲಿಪಿಂಕ್ಸ್‌ಗೆ ಅವಕಾಶ ಸಿಗುವ ಸಾಧ್ಯತೆಯಿರುತ್ತದೆ. ಸರ್ಕಾರದಿಂದ ಬೆಂಬಲ ಸಿಗುತ್ತಿದೆ. ಇನ್ನಷ್ಟು ಬೆಂಬಲ ಸಿಕ್ಕರೆ ಅನುಕೂಲವಾಗುತ್ತದೆ ಎಂದು ಹೇಳುವಾಗ ಅವರ ಮುಖದಲ್ಲಿನ ನಗು ಮಾಯವಾಗಿತ್ತು.

ಜಾವೆಲಿನ್‌ಗೆ ₹ 13 ಸಾವಿರ

ಏಷ್ಯನ್‌ ಪ್ಯಾರಾ ಗೇಮ್ಸ್‌ ಅಭ್ಯಾಸಕ್ಕೆ ₹13 ಸಾವಿರ ಕೊಟ್ಟು ಜಾವೆಲಿನ್‌ ಖರೀದಿಸಬೇಕಾಯಿತು. ಅಷ್ಟು ಹಣವನ್ನು ಸೇರಿಸುವುದು ಕಷ್ಟವಾಯಿತು. ಜಕಾರ್ತದಲ್ಲಿ ಸ್ಪರ್ಧೆಗೆ ಕೊಟ್ಟದ್ದು ₹13 ಸಾವಿರಕ್ಕೂ ಹೆಚ್ಚಿನ ಮೊತ್ತದ್ದಾಗಿತ್ತು. ಅದುವರೆಗೂ ಅಷ್ಟು ದುಬಾರಿಯ ಜಾವೆಲಿನ್‌ ನೋಡಿರಲಿಲ್ಲ ಎಂದು ಆಶ್ಚರ್ಯಚಕಿತರಾದರು ರಮ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT