ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಹೊಸ ದಾಖಲೆ; ಫಿನ್ಲೆಂಡ್‌ ಸ್ಪರ್ಧೆಯಲ್ಲಿ ಬೆಳ್ಳಿ

Last Updated 15 ಜೂನ್ 2022, 5:49 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್‌ ಚೋಪ್ರಾ ಅವರು ಹೊಸದೊಂದು ದಾಖಲೆ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕದ ಸಾಧನೆಯ ಬಳಿಕ ಮತ್ತೆ ಸ್ಪರ್ಧೆಯ ಕಣಕ್ಕಿಳಿದಿರುವ ಅವರು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜಾವೆಲಿನ್‌ ಅನ್ನು 89.30 ಮೀಟರ್‌ ದೂರಕ್ಕೆ ಮುಟ್ಟಿಸಿದ್ದಾರೆ. ಈ ಮೂಲಕ ಅವರು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

24 ವರ್ಷ ವಯಸ್ಸಿನ ಅಥ್ಲೀಟ್‌ ನೀರಜ್‌ ಸುಮಾರು 10 ತಿಂಗಳ ಅಂತರದಲ್ಲಿ ಹಲವು ಕಡೆ ತರಬೇತಿ ಪಡೆದು ಸ್ಪರ್ಧೆಯ ಅಂಗಳಕ್ಕೆ ಮರಳಿದ್ದಾರೆ. ಅವರ ಜಾವೆಲಿನ್‌ ಈಗ 90 ಮೀಟರ್‌ ಗಡಿಯವರೆಗೂ ಸಾಗಿದ್ದು, ಫಿನ್ಲೆಂಡ್‌ನ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

2021ರ ಆಗಸ್ಟ್‌ 7ರಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ ನೀರಜ್‌, ಆಗ 87.58 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್‌ ಅನ್ನು 88.07 ಮೀಟರ್‌ಗೆ ಮುಟ್ಟಿಸುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ಫಿನ್ಲೆಂಡ್‌ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದ ನೀರಜ್‌ ಎರಡನೇ ಅವಕಾಶದಲ್ಲಿ 89.30 ಮೀಟರ್‌ಗೆ ತಲುಪಿಸಿದರು. ಅನಂತರದ ಮೂರು ಅವಕಾಶಗಳಲ್ಲಿ ವಿಫಲರಾದ ಅವರು ಆರನೇ ಮತ್ತು ಅಂತಿಮ ಪ್ರಯತ್ನದಲ್ಲಿ 85.85 ಮೀಟರ್ ದೂರಕ್ಕೆ ಎಸೆದರು.

ಫಿನ್ಲೆಂಡ್‌ನ 25 ವರ್ಷ ವಯಸ್ಸಿನ ಓಲಿವರ್‌ ಹೆಲಾಂಡರ್‌ ಎರಡನೇ ಅವಕಾಶದಲ್ಲಿ 89.83 ಮೀಟರ್‌ ದೂರಕ್ಕೆ ದಾಖಲಿಸಿದರು. ಅವರಿಗೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಒಲಿಯಿತು. ಅವರ ಹಿಂದಿನ ವೈಯಕ್ತಿಕ ದಾಖಲೆ 88.02 ಮೀಟರ್‌ ಆಗಿತ್ತು.

93.07 ಮೀಟರ್‌ ದೂರದ ವಿಶ್ವ ದಾಖಲೆಯನ್ನು ಹೊಂದಿರುವ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್‌, ಈ ಸ್ಪರ್ಧೆಯಲ್ಲಿ 86.60 ಮೀಟರ್‌ ದೂರದ ಮೂಲಕ ಮೂರನೇ ಸ್ಥಾನ ಪಡೆದರು.

ಸದ್ಯ ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯುತ್ತಿರುವ ನೀರಜ್‌ ಚೋಪ್ರಾ, ಟರ್ಕಿ ಮತ್ತು ಅಮೆರಿಕದಲ್ಲಿ ಕೆಲವು ತಿಂಗಳು ತರಬೇತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT