ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಫೈನಲ್‌ಗೆ ಅಜಯ್‌ ಜಯರಾಮ್‌

7

ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಫೈನಲ್‌ಗೆ ಅಜಯ್‌ ಜಯರಾಮ್‌

Published:
Updated:

ಹೊ ಚಿ ಮಿನ್‌ ಸಿಟಿ : ಭಾರತದ ಅಜಯ್‌ ಜಯರಾಮ್‌ ಅವರು ಇಲ್ಲಿ ನಡೆಯುತ್ತಿರುವ ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಋತುವಿನಲ್ಲಿ ಮೊದಲ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅಜಯ್‌, 21–14, 21–19ರಿಂದ ಜಪಾನ್‌ನ ಯು ಇಗರುಶಿ ಅವರನ್ನು ಮಣಿಸಿದರು.

34 ನಿಮಿಷಗಳ ಕಾಲ ನಡೆದ ಪಂದ್ಯದ ಆರಂಭದಿಂದಲೂ ಭಾರತದ ಆಟಗಾರ ಬಿರುಸಿನ ಆಟ ಆಡಿದರು. ಇದರೊಂದಿಗೆ ಎದುರಾಳಿಯ ಮೇಲೆ ಒತ್ತಡ ಹೆಚ್ಚಿಸಿದರು. ಮೊದಲ ಗೇಮ್‌ನ ವಿರಾಮಕ್ಕೂ ಮುನ್ನ ಅವರು 11–8ರಲ್ಲಿ ಮುನ್ನಡೆ ಸಾಧಿಸಿದ್ದರು. ವಿರಾಮದ ನಂತರ ಅವರ ಆಟವು ಮತ್ತಷ್ಟು ರಂಗೇರಿತು. ಅವರ ಆಕ್ರಮಣಕಾರಿ ಆಟದ ಮುಂದೆ ಎದುರಾಳಿಯ ಆಟವು ಮಂಕಾಯಿತು. ತಿರುಗೇಟು ನೀಡುವ ಭರದಲ್ಲಿ ಇಗರುಶಿ ಹಲವು ತಪ್ಪುಗಳನ್ನು ಎಸಗಿದರು. ಇದರಿಂದಾಗಿ ಅಜಯ್‌, ಗೇಮ್‌ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. 

ಆದರೆ, ಎರಡನೇ ಗೇಮ್‌ನಲ್ಲಿ ಇಗರುಶಿ ಅವರೂ ಆಕ್ರಮಣಕಾರಿ ಆಟಕ್ಕಿಳಿದರು. ಅವರು 4–1ರ ಮುನ್ನಡೆ ಹೊಂದಿದರು. ಮುಂದಿನ ಕೆಲಹೊತ್ತು ಉಭಯ ಆಟಗಾರರು ಸಮಬಲ ಸಾಧಿಸಿದರು. ವಿರಾಮಕ್ಕೂ ಮುನ್ನ 11–10ರಲ್ಲಿ ಅಜಯ್‌ ಮುನ್ನಡೆ ಗಳಿಸಿದ್ದರು.

ನಂತರದ ಅವಧಿಯಲ್ಲಿ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಅಜಯ್‌, ಪಂದ್ಯ ತಮ್ಮದಾಗಿಸಿಕೊಂಡರು. ಚುರುಕಾದ ಸ್ಮ್ಯಾಷ್‌, ಮನಮೋಹಕ ಡ್ರಾಪ್‌ ಹಾಗೂ ದೀರ್ಘ ರ‍್ಯಾಲಿಗಳ ಮೂಲಕ ಅವರು ಎದುರಾಳಿಯನ್ನು ಕಟ್ಟಿಹಾಕಿದರು.  

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಭಾರತದ ಮಿಥುನ್‌ ಮಂಜುನಾಥ್‌ ಅವರು 17–21, 21–19, 14–21ರಿಂದ ಇಂಡೊನೇಷ್ಯಾದ ಶೆಸರ್‌ ಹಿರೇನ್‌ ರುಸ್ತಾವಿಟೊ ವಿರುದ್ಧ ಸೋತರು. 59 ನಿಮಿಷಗಳ ಕಾಲ ನಡೆದ ಹೋರಾಟವು ಜಿದ್ದಾಜಿದ್ದಿನಿಂದ ಕೂಡಿತ್ತು. ಮಿಥುನ್‌, ಮೊದಲ ಗೇಮ್‌ನಲ್ಲಿ ನಿರಾಸೆ ಅನುಭವಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಪ್ರತ್ಯುತ್ತರ ನೀಡಿದರು. ಮೂರನೇ ಗೇಮ್‌ನಲ್ಲಿ ಹಲವು ತಪ್ಪುಗಳನ್ನು ಎಸಗಿ ಎದುರಾಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಅವರ ಈ ವೈಫಲ್ಯವನ್ನು ಬಳಸಿಕೊಂಡ ಶೆಸರ್‌, ಪಂದ್ಯ ಜಯಿಸಿದರು.  

ಹೀಗಾಗಿ, ಅಂತಿಮ ಹಣಾಹಣಿಯಲ್ಲಿ ಅಜಯ್‌ ಹಾಗೂ ಶೆಸರ್‌ ಹಿರೇನ್‌ ರುಸ್ತಾವಿಟೊ ಅವರು ಮುಖಾಮುಖಿಯಾಗಲಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !