ಸೋಮವಾರ, ಸೆಪ್ಟೆಂಬರ್ 23, 2019
24 °C
ಭಾರತದ ಓಟಗಾರರಾದ ಜಿನ್ಸನ್ ಜಾನ್ಸನ್, ಗೋಪಿ ತೋಣಕ್ಕಲ್ ಮನದಾಳ

ಒಲಿಂಪಿಕ್ಸ್ ಗುರಿ; ಕಠಿಣ ತಯಾರಿ

Published:
Updated:
Prajavani

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಭಾರಿ ಅಭ್ಯಾಸ ನಡೆಯುತ್ತಿದೆ ಎಂದು ಭಾರತದ ಓಟಗಾರರಾದ ಜಿನ್ಸನ್ ಜಾನ್ಸನ್ ಮತ್ತು ಗೋಪಿ ತೋಣಕ್ಕಲ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದಿರಾನಗರದಲ್ಲಿರುವ ಕ್ರೀಡಾ ಉಡುಪು ಮಾರಾಟ ಮಳಿಗೆ ಎಸಿಕ್ಸ್‌ನಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮ ಭರವಸೆ ಮೂಡಿಸಿದೆ ಎಂದರು.

ಸೋಲ್‌ನಲ್ಲಿ ನಡೆದಿದ್ದ ಮ್ಯಾರಥಾನ್‍ನಲ್ಲಿ 2 ತಾಸು 13 ನಿಮಿಷ ಮತ್ತು 39 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುವ ಗೋಪಿ, ಭಾರತದ ಅತಿವೇಗದ ಮ್ಯಾರಥಾನ್‌ ಓಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದರು.

ಶಿವನಾಥ್ ಸಿಂಗ್‍ (2 ತಾಸು12 ನಿಮಿಷ) ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಮುಂದಿನ ತಿಂಗಳ ಅಂತ್ಯದಲ್ಲಿ ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಈ ದಾಖಲೆಯನ್ನು ಹಿಂದಿಕ್ಕುವ ಗುರಿ ಹೊಂದಿರುವುದಾಗಿ ತೋಣಕ್ಕಲ್ ತಿಳಿಸಿದರು.

800 ಮೀಟರ್ಸ್ ಮತ್ತು 1500 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಜಿನ್ಸನ್ ಜಾನ್ಸನ್ ಮುಂದಿನ ತಿಂಗಳ ಆರಂಭದಲ್ಲಿ ನಡೆಯಲಿರುವ ಯುರೋಪಿಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಂತರ ಅಮೆರಿಕದ ಕೊಲೊರಾಡೋದಲ್ಲಿ ತರಬೇತಿ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.

‘ಮೊದಲ ಬಾರಿ ವಿದೇಶದಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದೇನೆ. ಪರಿಪೂರ್ಣ ಸಾಮರ್ಥ್ಯವನ್ನು ತೋರಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಪ್ರಯತ್ನಿಸುತ್ತೇನೆ’ ಎಂದು ಜಿನ್ಸನ್ ವಿವರಿಸಿದರು.

‘ದೋಹಾದಲ್ಲಿ ಮ್ಯಾರಥಾನ್‌ ರಾತ್ರಿವೇಳೆ ನಡೆಯಲಿದೆ. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತಿದ್ದೇನೆ. ದೇಶದಲ್ಲಿ ನಾನು ಎರಡನೇ ಅತಿ ವೇಗದ ಓಟಗಾರ ಆಗಿರುವುದು ನಿಜ. ಆದರೆ ವಿಶ್ವ ಮಟ್ಟದಲ್ಲಿ ಇದು ಏನೇನೂ ಅಲ್ಲ ಎಂಬ ಅರಿವು ಇದೆ. ಆದ್ದರಿಂದ ಇನ್ನಷ್ಟು ವೇಗವಾಗಿ ಗುರಿ ಮುಟ್ಟುವುದು ಮತ್ತು ರಾಷ್ಟ್ರೀಯ ದಾಖಲೆ ಮುರಿಯುವುದು ನನ್ನ ಮೊದಲ ಆದ್ಯತೆ’ ಎಂದು ಗೋಪಿ ಹೇಳಿದರು.

ಈ ಇಬ್ಬರು ಆಟಗಾರರನ್ನು ಎಸಿಕ್ಸ್ ಪ್ರಾಯೋಜಿಸುತ್ತಿದ್ದು ವಿಶ್ವಮಟ್ಟದಲ್ಲಿ ಇವರು ಇನ್ನಷ್ಟು ಸಾಧನೆ ಮಾಡುವ ಭರವಸೆ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಜತ್ ಖುರಾನಾ ತಿಳಿಸಿದರು.

Post Comments (+)