ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಪ್‌ರೋಪ್‌ ಪ್ರತಿಭೆ ಪ್ರೇರಣಾ

ಸ್ಕಿಪಿಂಗ್ ಪ್ರತಿಭೆ ಪ್ರೇರಣಾ
Last Updated 17 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಸ್ಕಿಪ್ಪಿಂಗ್‌ ಬಹುತೇಕ ಹುಡುಗಿಯರ ನೆಚ್ಚಿನ ಆಟ. ಆಡುವವರಿಗೆ ಖುಷಿಯನ್ನೂ, ಕಸುವನ್ನೂ ನೀಡುವ ಸ್ಕಿಪ್ಪಿಂಗ್‌ ಫಿಟ್‌ನೆಸ್‌ ಕಾಯ್ದುಕೊಳ್ಳಲೂ ಸಹಕಾರಿ. ತನಗೆ ಹವ್ಯಾಸವಾಗಿದ್ದ ಸ್ಕಿಪ್ಪಿಂಗ್‌ ಕಲೆಯನ್ನೇ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಮೆಟ್ಟಿಲು ಮಾಡಿಕೊಂಡ ಬಾಲಕಿ ಪ್ರೇರಣಾ ಟಿ.ಎನ್. ಸದ್ಯ ಬೆಂಗಳೂರಿನ ವ್ಯಾಸ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಈಕೆ, ಜಂಪ್‌ರೋಪಿಂಗ್‌ನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.

ಜಂಪ್‌ ರೋಪಿಂಗ್‌ ಅನ್ನು ಕ್ರೀಡೆ ಮಾತ್ರವಲ್ಲದೆ, ಮನರಂಜನೆ ರೂಪದಲ್ಲಿ ಬಳಸುವ ಕಲೆಯೂ ಈ ಬಾಲಕಿಗೆ ಸಿದ್ಧಿಸಿದೆ. ಸ್ಕಿಪ್ಪಿಂಗ್‌ ವೈರ್‌ ಹಿಡಿದು ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡುತ್ತಿದ್ದರೆ, ನೋಡುವವರು ಮೂಗಿನ ಮೇಲೆ ಬೆರಳಿಡುತ್ತಾರೆ.

‘ತಂದೆ ವರ್ಗಾವಣೆಯಾದಂತೆ ನಾನು ವಿವಿಧಡೆಗಳಲ್ಲಿ ಓದಬೇಕಾಯಿತು. ಹೊಸಪೇಟೆಯ ಡಿಎವಿ ಪಬ್ಲಿಕ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಗ ಜಂಪ್ ರೋಪ್ ಕಲಿಸಲು ಹೈದರಾಬಾದ್‌ನಿಂದ ತರಬೇತಿ ನೀಡುವವರೊಬ್ಬರು ಬಂದಿದ್ದರು. ನಾನೂ ತರಬೇತಿಗೆ ಸೇರಿದೆ. ಇದರಲ್ಲಿಯೇ ಆಸಕ್ತಿ ಮೂಡಿತು. ಸ್ಕಿಪ್ಪಿಂಗ್‌ನಲ್ಲಿ ಹಿಡಿತ ಸಿಕ್ಕಿತು. ನಂತರ ವಿವಿಧ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡೆ. ಮೊದಲು ಹೊಸಪೇಟೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದೆ. ನಂತರ ಕೊಪ್ಪಳದ ಅನಂತಸಾಗರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪ್ರೇರಣಾ.

‘ನಾನು ಜಂಪ್‌ರೋಪ್‌ ಕಲಿಯಲು ಕಾರಣ ಡಿಎವಿ ಶಾಲೆಯ ರಫೀಕ್ ಸರ್‌. ಅವರು ನನ್ನಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ್ದರು. ನಾನು ಬೇರೆಲ್ಲಾ ಕ್ರೀಡೆ ಚಟುವಟಿಕೆಯಲ್ಲಿ ಸದಾ ಮುಂದಿದ್ದೆ. ಹಾಗಾಗಿ ಜಂಪ್ ರೋಪ್ ಕಲಿಯುವಂತೆ ಪ್ರೋತ್ಸಾಹ ನೀಡಿದ್ದರು. ಈಗ ರಫೀಕ್ ಸರ್ ಮೊಬೈಲ್‌ನಲ್ಲಿ ವಿಡಿಯೊ ಕಳುಹಿಸುತ್ತಾರೆ. ಅದನ್ನೇ ನೋಡಿ ಪ್ರಾಕ್ಟೀಸ್‌ ಮಾಡುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ಸದ್ಯ, ವಿಡಿಯೊ ನೋಡಿಕೊಂಡೆ ಜಂಪ್‌ ರೋಪಿಂಗ್‌ ಅಭ್ಯಾಸ ಮಾಡುತ್ತಿರುವ ಪ್ರೇರಣಾ, ಓಟದ ಸ್ಪರ್ಧೆಗಳಲ್ಲಿ ಸೋತ ಉದಾಹರಣೆ ಇಲ್ಲ. ಇದಕ್ಕೆ ಕಾರಣ, ಸ್ಕಿಪ್ಪಿಂಗ್‌ನಲ್ಲಿ ಅವರಿಗೆ ಅಯಾಚಿತವಾಗಿ ದೊರೆಯುತ್ತಿರುವ ಫಿಟ್‌ನೆಸ್‌.

‘ಫಿಟ್‌ನೆಸ್‌ಗೆ ಜಂಪ್‌ರೋಪ್ ತುಂಬಾನೇ ಸಹಾಯ ಮಾಡುತ್ತದೆ’ ಎನ್ನುವ ಪ್ರೇರಣಾ, ಜಂಕ್‌ಫುಡ್‌ಗಳಿಂದ ಸದಾ ದೂರ. ಎತ್ತರ ಹಾಗೂ ಸಪೂರದ ದೇಹ ಆಕೆಗೆ ಬಳುವಳಿಯಾಗಿ ಬಂದಿದೆ. ಯಾವುದೇ ಕ್ರೀಡೆಯಾಗಲಿ ಮೊದಲು ಆರೋಗ್ಯ ಚೆನ್ನಾಗಿರಬೇಕು, ದೇಹ ಫಿಟ್ ಆಗಿರಬೇಕು ಎಂಬುದು ಇವಳ ಅನುಭವದ ಮಾತು.

‘ನಮ್ಮ ಮಗಳ ಹಳೆಯ ಶಾಲೆಯಲ್ಲಿ ಅವಳ ಜೊತೆ ಇದ್ದ ಬ್ಯಾಚ್‌ನವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿ
ಸಲು ದಕ್ಷಿಣ ಕೊರಿಯಾಗೆ ಹೋಗುತ್ತಿದ್ದಾರೆ. ಆದರೆ ನಮ್ಮ ಮಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಾರಣ ಅವಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಎರಡು ವರ್ಷಗಳು ಕಳೆದಿವೆ. ಹಾಗೆಂದು ನಾವು ಸುಮ್ಮನೆ ಕೂರುವುದಿಲ್ಲ. ಅವಳಿಗೆ ಮುಂದೆ ಹೇಗಾದರೂ ಜಂಪ್ ರೋಪಿಂಗ್ ಟ್ರೈನಿಂಗ್ ಕೊಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತೆ ಮಾಡುತ್ತೇವೆ’ ಎನ್ನುತ್ತಾರೆ ಅವರ ತಾಯಿ ಜಯಮಾಲಾ.

ಮಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಲು ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರಿಸುವ ಪ್ರೇರಣಾ ಪಾಲಕರಿಗೆ ಅವಳನ್ನು ಅಥ್ಲೀಟ್‌ ಹಾಗೂ ಜಂಪ್‌ ರೋಪಿಂಗ್‌ ಚಾಂಪಿಯನ್‌ ಆಗಿ ನೋಡುವ ಹಂಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT