ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೇಗೌಡರಿಗೆ ಟಿಕೆಟ್‌: ಪಕ್ಷದಲ್ಲಿಯೇ ಅಪಸ್ವರ

ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅನುಪಮಾ ಅಸಮಾಧಾನ
Last Updated 9 ಏಪ್ರಿಲ್ 2018, 9:20 IST
ಅಕ್ಷರ ಗಾತ್ರ

ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಮಂಜೇಗೌಡ (ಬಾಗೂರು ಮಂಜೇಗೌಡ) ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಂಬಂಧ ಪಕ್ಷದಲ್ಲಿಯೇ ಅಪಸ್ವರ ಎದ್ದಿದೆ.ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಎಸ್‌.ಜಿ.ಅನುಪಮಾ ಮತ್ತು ಕಾರ್ಯಕರ್ತರಿಂದ ಆಕ್ರೋಶ ಎದುರಿಸುವ ಸ್ಥಿತಿ ಬಂದಿದೆ.

ಎರಡು ವಿಧಾನಸಭೆ ಚುನಾವಣೆಯಲ್ಲಿ ರೇವಣ್ಣ ವಿರುದ್ಧ ಪರಾಜಿತಗೊಂಡಿರುವ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿ ಅವರ ಸೊಸೆ ಎಸ್‌.ಜಿ.ಅನುಪಮಾ, ಈ ಬಾರಿಯೂ ಪ್ರಬಲ ಟಿಕೆಟ್‌ ಆಕಾಂಕ್ಷಿ.

‘ಈ ಬಾರಿ ತಮಗೆ ಟಿಕೆಟ್‌ ನೀಡಬೇಕು, ಇಲ್ಲದಿದ್ದರೇ ಸಕ್ರಿಯ ಕಾರ್ಯಕರ್ತರಿಗೆ ನೀಡಬೇಕು’ ಎಂದು ಪಕ್ಷದ ಹೈಕಮಾಂಡ್‌ ಮುಂದೆ ಅವರು ಬೇಡಿಕೆ ಇಟ್ಟಿದ್ದಾರೆ.

ಆದರೆ ಅವರನ್ನು ವಿಶ್ವಾಸಕ್ಕೆ ಪಡೆಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರನೆ ಮಂಜೇಗೌಡರನ್ನು ಅಭ್ಯರ್ಥಿ ಯಾಗಿ ಮಾಡಲು ನಿರ್ಧರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಈಗಾಗಲೇ ಮಂಜೇಗೌಡರು ತಮ್ಮ ರಾಜೀನಾಮೆ ಪತ್ರವನ್ನು ಆರ್‌ಟಿಒ ಆಯುಕ್ತರಿಗೆ ನೀಡಿ, ಕ್ಷೇತ್ರಾದ್ಯಂತ ಪ್ರಚಾರ ಆರಂಭಿಸಿ, ಸಭೆಗಳನ್ನು ನಡೆಸುತ್ತಿದ್ದಾರೆ.

ಈಚೆಗೆ ಸಿದ್ದರಾಮಯ್ಯ ಅವರು ಮಂಜೇಗೌಡರೊಂದಿಗೆ ಮಾತನಾಡಿದ ಆಡಿಯೋ ವೈರಲ್‌ ಆದ ನಂತರ ಅನುಪಮಾ ತಮ್ಮ ಆಪ್ತರೊಂದಿಗೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ನಡುವೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮಗೆ ಟಿಕೆಟ್‌ ನೀಡಬೇಕು ಎಂದು ಮನವಿ ಮಾಡಿರುವ ಅನುಪಮಾ, ಒಂದು ವೇಳೆ ‘ಬಿ’ ಫಾರಂ ನೀಡದಿದ್ದರೆ ಬಂಡಾಯ ವಾಗಿ ಕಣಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ ಸಿ.ಎಂ, ‘ಈ ಬಾರಿ ಮಂಜೇಗೌಡರಿಗೆ ಅವಕಾಶ ಕೊಡಿ. ಮುಂದಿನ ಅವಧಿಯಲ್ಲಿ ವಿಧಾನ ಪರಿಷತ್‌ ಗೆ ಆಯ್ಕೆ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಅವರು, ‘ಈ ಸಂಬಂಧ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ’ ಹೇಳಿ ಬಂದಿದ್ದಾರೆ.

‘ಎರಡು ಬಾರಿ ಸೋಲು ಹಾಗೂ ಮಹಿಳೆ ಎನ್ನುವ ಕಾರಣಕ್ಕೆ ನನ್ನ ತಾಯಿಗೆ ಟಿಕೆಟ್ ನಿರಾಕರಿಸುವುದಾದರೆ ನನಗೆ ನೀಡಲಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್‌ ಪಟೇಲ್‌ ಮನವಿ ಮಾಡಿದ್ದಾರೆ.

‘ಮಂಜೇಗೌಡರು ಟಿಕೆಟ್‌ ಸಿಕ್ಕಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ತಾಲ್ಲೂಕು ಮುಖಂಡರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಈ ವಿಷಯ ಗೊತ್ತಿಲ್ಲ. ಅನುಪಮಾಗೆ ಟಿಕೆಟ್‌ ನೀಡಬೇಕು’ ಎಂದು ಹೊಳೆನರಸೀಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಮುಖಂಡ ಮುಜಾಹಿದ್‌ ಆಗ್ರಹಿಸಿದ್ದಾರೆ.

ರಾಜಕೀಯ ಅಖಾಡಕ್ಕಿಳಿದರುವ ಅನುಪಮಾ ಅವರಿಗೆ ತಮ್ಮ ಮಾವ ಜಿ.ಪುಟ್ಟಸ್ವಾಮಿಗೌಡ ಅವರ ನಾಮಬಲದ ಶ್ರೀರಕ್ಷೆಯೂ ಇದೆ. ಇದೇ ಕಾರಣಕ್ಕಾಗಿ 2013ರ ಚುನಾವಣೆಯಲ್ಲಿ ಎಚ್‌.ಡಿ.ರೇವಣ್ಣ (92,713 ಮತ) ವಿರುದ್ಧ 62655 ಮತಗಳಿಸಿದ್ದರು.

ಇನ್ನು ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಪರದಾಡುತ್ತಿದೆ. ಈಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಮ್ಮರಗಿ ರವಿ ಸಂಭಾವ್ಯ ಅಭ್ಯರ್ಥಿಯಾಗಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ.

ದೇಶಕ್ಕೆ ಪ್ರಧಾನಿ ಮತ್ತು ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿ ನೀಡಿದ ಜಿಲ್ಲೆ ಇದು. ಈ ಕಾರಣದಿಂದಾಗಿ ಇಲ್ಲಿ ಯಾವುದೇ ಚುನಾವಣೆ ನಡೆದರೂ ಜೆಡಿಎಸ್‌ಗೆ ಪ್ರತಿಷ್ಠೆಯೇ ಆಗಿರುತ್ತದೆ.

ಕ್ಷೇತ್ರದ ವ್ಯಾಪ್ತಿ

ಹೊಳೆನರಸೀಪುರ ತಾಲ್ಲೂಕಿನ ಕಸಬಾ, ಹಳೇಕೋಟೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿನಹಳ್ಳಿ, ಹಾಸನ ತಾಲ್ಲೂಕಿನ ದುದ್ದ ಹಾಗೂ ಶಾಂತಿಗ್ರಾಮ ಹೋಬಳಿಗಳು.

ಬಾಡೂಟ ಆಯೋಜನೆ

ಸಿದ್ದರಾಮಯ್ಯ ಸೂಚನೆಯಂತೆ ಕ್ಷೇತ್ರ ಪ್ರವೇಶಿಸಿರುವ ಬಾಗೂರು ಮಂಜೇಗೌಡರು ಬಾಡೂಟ ಆಯೋಜನೆ ಮೂಲಕ ಜನರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ಜಾತ್ರೆ, ಸಭೆ ಆಯೋಜಿಸಿ ಕ್ಷೇತ್ರದ ಜನರಿಗೆ ಬಾಡೂಟ ಹಾಕಿಸಿದ್ದಾರೆ.‘ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮಂಜೇಗೌಡರ ರಾಜೀನಾಮೆ ಅಂಗೀಕರಿಸಬಾರದು’ ಎಂದು ರೇವಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅಂಗೀಕಾರವಾಗದ ರಾಜೀನಾಮೆ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಅವರು ಸರ್ಕಾರಿ ಹುದ್ದೆಗೆ ನೀಡಿದ ರಾಜೀನಾಮೆ ಅಂಗೀಕಾರವಾಗಿಲ್ಲ.ಅಕ್ರಮ ಆಸ್ತಿ ಸಂಪಾದನೆ, ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಂಜೇಗೌಡರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆ ಲೋಕಾಯುಕ್ತದಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕರಿಸದಂತೆ ಕಾನೂನು ಇಲಾಖೆ ಸಲಹೆ ನೀಡಿದೆ. ಹಾಗಾಗಿ ರೇವಣ್ಣ ವಿರುದ್ಧ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಂಜೇಗೌಡರನ್ನು ಕಣಕ್ಕಿಳಿಸಿ, ಗೌಡರ ಕುಟುಂಬಕ್ಕೆ ಸೆಡ್ಡು ಹೊಡೆಯುವ ಸಿದ್ದರಾಮಯ್ಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ನಾಲ್ಕು ಬಾರಿ ರೇವಣ್ಣಗೆ ಜಯ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು 1962ರಿಂದ 1985ರವರೆಗೆ ಸತತ ಆರು ಬಾರಿ ಹೊಳೆನರಸೀಪುರ ಕ್ಷೇತ್ರದಿಂದ ಆಯ್ಕೆಯಾಗಿ ದ್ದರು. 1989ರಲ್ಲಿ ಪರಾಭವ ಗೊಂಡಿದ್ದರು.1994ರಲ್ಲಿ ರಾಮನಗರ ದಿಂದ ದೇವೇಗೌಡರು ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ರೇವಣ್ಣ ಸ್ಪರ್ಧಿಸಿ ಗೆದ್ದಿದ್ದರು. ಅವರ ಗೆಲುವಿನ ಓಟ 2003, 2008, 2013ರಲ್ಲೂ ಮುಂದುವರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT