ಮಂಗಳವಾರ, ಸೆಪ್ಟೆಂಬರ್ 22, 2020
26 °C
ಜೂನಿಯರ್‌ ಟೇಬಲ್‌ ಟೆನಿಸ್‌ ಆಟಗಾರ್ತಿಯ ಪರದಾಟ

ಲಾಕ್‌ಡೌನ್‌: ಆರ್ಥಿಕ ಸಂಕಷ್ಟದಲ್ಲಿ ಸ್ವಸ್ತಿಕಾ ಕುಟುಂಬ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ವಿಶ್ವ ಜೂನಿಯರ್‌ ಟೇಬಲ್‌ ಟೆನಿಸ್‌ನ ಐದನೇ ಕ್ರಮಾಂಕದ ‌ ಆಟಗಾರ್ತಿ, ಭಾರತದ ಸ್ವಸ್ತಿಕಾ ಘೋಷ್‌ ಅವರು ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್‌ಡೌನ್‌ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಮುಂಬೈನಲ್ಲಿ ಅವರ ಕುಟುಂಬವು ಮನೆ ಬಾಡಿಗೆ ಕಟ್ಟಲೂ ಹೆಣಗಾಡುತ್ತಿದ್ದು, ತಮ್ಮ ತವರು  ಕೋಲ್ಕತ್ತಕ್ಕೆ ಮರಳಲು ಯೋಚಿಸುತ್ತಿದೆ. 

ತಂದೆ ಸಂದೀಪ್‌ ಅವರು ಸ್ವಸ್ತಿಕಾ ಅವರ ತರಬೇತುದಾರ ಹಾಗೂ ಕೋಚ್‌ ಕೂಡ ಹೌದು. ನಾಲ್ಕು ತಿಂಗಳುಗಳ ಕಾಲ ಕೆಲಸವಿಲ್ಲದೆ ಅಲೆದಾಡುತ್ತಿರುವ ಸಂದೀಪ್, ನವೀ ಮುಂಬೈನಲ್ಲಿರುವ ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ.

ಸಂದೀಪ್ ಅವರು ಮುಂಬೈನ ನೆರೂಲ್‌ನ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಟೇಬಲ್ ಟೆನಿಸ್ ತರಬೇತುದಾರರಾಗಿದ್ದರು. ಆದರೆ ಲಾಕ್‌ಡೌನ್ ಆದಾಗಿನಿಂದ ಅವರಿಗೆ ಕೆಲಸವಿಲ್ಲ. ತಮ್ಮ ಎಲ್ಲಾ ಉಳಿತಾಯದ ಹಣವನ್ನು ಜೀವನ ನಿರ್ವಹಣೆಗೆ ಖರ್ಚು ಮಾಡಬೇಕಿದೆ.

‘ಸ್ವಸ್ತಿಕಾ ನಿತ್ಯ ಆರು ಗಂಟೆಗಳ ತರಬೇತಿ ನಡೆಸುತ್ತಾರೆ. ಇದಕ್ಕಾಗಿ ಅವರಿಗೆ ಸೇವಿಸಲು ₹ 1200 ಮೌಲ್ಯದ ಪೂರಕ ಆಹಾರ ಬೇಕು. ಈಗ ಎಲ್ಲವೂ ನಿಂತುಹೋಗಿದೆ. ಇದೇ ರೀತಿ ಲಾಕ್‌ಡೌನ್‌ ಮುಂದುವರಿದರೆ ನಾವು ಬಂಗಾಳಕ್ಕೆ ತೆರಳಬೇಕಾಗುತ್ತದೆ‘ ಎಂದು 1992ರಿಂದ ಮುಂಬೈನಲ್ಲೇ ನೆಲೆಸಿರುವ ಲೆವೆಲ್‌ 2 ತರಬೇತುದಾರ ಸಂದೀಪ್‌ ಹೇಳುತ್ತಾರೆ.

‘ಭವಿಷ್ಯ ನಿಧಿ ಉಳಿತಾಯದಿಂದ ಬಂದ ₹ 60,000 ನನ್ನ ಬಳಿ ಇತ್ತು. ಈಗ ಅದೂ ಖರ್ಚಾಗಿದೆ. ಸಂಬಂಧಿಗಳಿಂದ ಒಂದಷ್ಟು ಸಾಲ ಪಡೆದಿರುವೆ. ಈಗ ಸ್ವಸ್ತಿಕಾಳ ತರಬೇತಿಗೂ ನಮ್ಮ ಬಳಿ ಹಣವಿಲ್ಲ. ಸದ್ಯ ನಮ್ಮ ತವರು ಕೋಲ್ಕತ್ತದ ಅಂದುಲ್‌ಗೆ ತೆರಳಲು ಯೋಚಿಸುತ್ತಿದ್ದೇವೆ. ಕನಿಷ್ಠ ಅಲ್ಲಿ ನಮಗೆ ಇರಲು ಆಶ್ರಯವಾದರೂ ಇದೆ‘ ಎನ್ನುತ್ತಾರೆ ಸಂದೀಪ್‌.

2013ರಲ್ಲಿ ಒಂಬತ್ತು ವರ್ಷದವರಿದ್ದಾಗಲೇ ಕೆಡೆಟ್‌ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಸ್ವಸ್ತಿಕಾ, ಕಳೆದ ಎರಡು ವರ್ಷಗಳಲ್ಲಿ ಆಟದಲ್ಲಿ ಶೀಘ್ರ ಪ್ರಗತಿ ಕಂಡಿದ್ದಾರೆ. 2018ರ ಜನವರಿಯಲ್ಲಿ ವಿಶ್ವ ಜೂನಿಯರ್‌ ಕ್ರಮಾಂಕದಲ್ಲಿ 278ನೇ ಸ್ಥಾನದಲ್ಲಿದ್ದ ಅವರು ಈ ವರ್ಷದ ಎಪ್ರಿಲ್‌ನಲ್ಲಿ ಜೀವನಶ್ರೇಷ್ಠ ಐದನೇ ಸ್ಥಾನಕ್ಕೇರಿದ್ದಾರೆ.

ಸ್ವಸ್ತಿಕಾ ಅವರು ಪ್ರಸ್ತುತ ಭಾರತದ ಜೂನಿಯರ್‌ ಅಗ್ರ ಕ್ರಮಾಂಕವನ್ನು ರಾಷ್ಟ್ರೀಯ ಚಾಂಪಿಯನ್‌ ದಿಯಾ ಚಿತಾಲೆ ಅವರೊಂದಿಗೆ ಹಂಚಿಕೊಂಡಿದ್ದಾರೆ. ಗೋಲ್ಡನ್‌ ಹಾಗೂ ಪ್ರೀಮಿಯರ್‌ ಸಿರೀಸ್‌ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಕಾರಣ ಸ್ವಸ್ತಿಕಾ ಅವರು ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದರು. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಎಂಟು ಕಂಚಿನ ಪದಕಗಳು ಅವರಿಗೆ ಒಲಿದಿವೆ.

ಹಣಕಾಸಿನ ನೆರವು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದು, ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಂದೀಪ್‌ ಹೇಳಿದ್ದಾರೆ.

ಎಲ್ಲ ಸಮಸ್ಯೆಗಳು ಬಗೆಹರಿದರೆ, ಸ್ವಸ್ತಿಕಾ ಅವರು ಪೋರ್ಚುಗಲ್‌ನಲ್ಲಿ ನವೆಂಬರ್‌ 29ರಿಂದ ಡಿಸೆಂಬರ್‌ 6ರವರೆಗೆ ನಡೆಯುವ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು