ವಿಶ್ವ ದಾಖಲೆ ನಿರ್ಮಿಸಿದ ಮಹಿಳಾ ತಂಡ

7
ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಹೃದಯ್‌ ಹಜಾರಿಕಾ

ವಿಶ್ವ ದಾಖಲೆ ನಿರ್ಮಿಸಿದ ಮಹಿಳಾ ತಂಡ

Published:
Updated:
Deccan Herald

ಚಾಂಗ್ವಾನ್‌, ದಕ್ಷಿಣ ಕೊರಿಯಾ: ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಭಾರತದ ಶೂಟರ್‌ಗಳ ಪದಕಗಳ ಬೇಟೆ ಮುಂದುವರಿದಿದೆ.

ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಭಾರತ ತಂಡ ವಿಶ್ವ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದೆ. ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ವೈಯಕ್ತಿಕ ವಿಭಾಗದಲ್ಲಿ ಹೃದಯ್‌ ಹಜಾರಿಕಾ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.

ಶುಕ್ರವಾರ ನಡೆದ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ ಒಟ್ಟು 1880.7 ಸ್ಕೋರ್‌ ಸಂಗ್ರಹಿಸಿ ಮೊದಲ ಸ್ಥಾನ ಗಳಿಸಿತು.

ಎಲಾವೆನಿಲ್‌ ವಲಾರಿವನ್‌ (631 ಸ್ಕೋರ್‌), ಶ್ರೇಯಾ ಅಗರವಾಲ್‌ (628.5) ಮತ್ತು ಮಾನಿನಿ ಕೌಶಿಕ್‌ (621.2) ಅವರಿದ್ದ ತಂಡ ಅಮೋಘ ಸಾಮರ್ಥ್ಯ ತೋರಿತು.

ವೈಯಕ್ತಿಕ ವಿಭಾಗದಲ್ಲಿ ಎಲಾವೆನಿಲ್‌ ಬೆಳ್ಳಿಯ ಪದಕ ಗೆದ್ದರು. ಫೈನಲ್‌ನಲ್ಲಿ ಅವರು 249.8 ಸ್ಕೋರ್‌ ಸಂಗ್ರಹಿಸಿದರು. ಈ ವಿಭಾಗದ ಕಂಚಿನ ಪದಕ ಭಾರತದ ಶ್ರೇಯಾ (228.4) ಅವರ ಪಾಲಾಯಿತು. ಚೀನಾದ ಶಿ ಮೆಂಗ್ಯಾವೊ (250.5) ಚಿನ್ನದ ಪದಕ ಪಡೆದರು.

ಹಜಾರಿಕಾ ಮಿಂಚು: ಜೂನಿಯರ್‌ ಪುರುಷರ ವಿಭಾಗದಲ್ಲಿ ಹಜಾರಿಕಾ ಮಿಂಚಿದರು. ಅರ್ಹತಾ ಸುತ್ತಿನಲ್ಲಿ 627.3 ಸ್ಕೋರ್‌ ಗಳಿಸಿದ್ದ ಅವರು ಫೈನಲ್‌ನಲ್ಲೂ ಮೋಡಿ ಮಾಡಿದರು.

24 ಶಾಟ್‌ಗಳ ಫೈನಲ್‌ನಲ್ಲಿ ಹೃದಯ್‌ ಮತ್ತು ಇರಾನ್‌ನ ಮೊಹಮ್ಮದ್‌ ಅಮೀರ್‌ ನೆಕೌನಮ್‌ ಅವರು ತಲಾ 250.1 ಸ್ಕೋರ್‌ ಗಳಿಸಿದರು. ಹೀಗಾಗಿ ವಿಜೇತರನ್ನು ನಿರ್ಧರಿಸಲು ‘ಶೂಟ್‌ ಆಫ್‌’ ಮೊರೆ ಹೋಗಲಾಯಿತು. ಈ ಅವಕಾಶದಲ್ಲಿ 17 ವರ್ಷ ವಯಸ್ಸಿನ ಭಾರತದ ಶೂಟರ್‌ 10.3 ಸ್ಕೋರ್‌ ಗಳಿಸಿದರು. ನೆಕೌನಮ್‌ 10.2 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು.

ರಷ್ಯಾದ ಗ್ರೆಗೊರಿಯಾ ಶಮಕೋವ್ (228.6 ಸ್ಕೋರ್‌) ಕಂಚಿನ ಪದಕ ಜಯಿಸಿದರು.

ಪುರುಷರ ತಂಡ ವಿಭಾಗದಲ್ಲಿ ಭಾರತ (1872.3 ಸ್ಕೋರ್‌) ನಾಲ್ಕನೇ ಸ್ಥಾನ ಗಳಿಸಿತು.

ಹೃದಯ್‌, ದಿವ್ಯಾಂಶ್‌ ಪನ್ವಾರ್‌ ಮತ್ತು ಅರ್ಜುನ್‌ ಬಬುತಾ ಅವರು ತಂಡದಲ್ಲಿದ್ದರು.

ಸೀನಿಯರ್‌ ಪುರುಷರ 50 ಮೀಟರ್ಸ್‌ ರೈಫಲ್‌ ತ್ರಿ ಪೊಷಿಸನ್‌ ವಿಭಾಗದಲ್ಲಿ ಭಾರತ ನಿರಾಸೆ ಕಂಡಿತು.

ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಸಂಜೀವ್‌ ರಜಪೂತ್‌, ಫೈನಲ್‌ ಪ್ರವೇಶಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ 1158 ಸ್ಕೋರ್‌ ಕಲೆಹಾಕಿದ ಅವರು 58ನೇ ಸ್ಥಾನ ಗಳಿಸಿದರು.

ಅಖಿಲ್‌ ಶೆರಾನ್‌ (1167) ಮತ್ತು ಸ್ವಪ್ನಿಲ್‌ ಕುಶಾಲೆ (1161) ಅವರು ಕ್ರಮವಾಗಿ 44 ಮತ್ತು 55ನೇ ಸ್ಥಾನಗಳಲ್ಲಿ ಕಾಣಿಸಿಕೊಂಡರು.

ಇದೇ ವಿಭಾಗದ ತಂಡ ಸ್ಪರ್ಧೆಯಲ್ಲಿ ಭಾರತ (3503 ಸ್ಕೋರ್‌) 11ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್‌ ಫೈನಲ್‌ ಪ್ರವೇಶಿಸಿದರು. ಅವರು ಅರ್ಹತಾ ಸುತ್ತಿನಲ್ಲಿ 294 ಸ್ಕೋರ್‌ ಸಂಗ್ರಹಿಸಿದರು.

ಏಷ್ಯನ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ರಾಹಿ ಸರ್ನೋಬತ್‌ ಮತ್ತು ಕಂಚು ಗೆದ್ದಿದ್ದ ಹೀನಾ ಸಿಧು ಕ್ರಮವಾಗಿ 27 ಮತ್ತು 61ನೇ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !