ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ, ಇಸ್ಲಾಂ ಏಕನಿಷ್ಠೆಯ ಧರ್ಮ

ರಮ್ಜಾನ್ ಮಾಸದ ಅಂಗವಾಗಿ ಕಾರ್ಯಕ್ರಮ; ತೋಂಟದ ಶ್ರೀ ಅಭಿಮತ
Last Updated 15 ಜೂನ್ 2018, 12:10 IST
ಅಕ್ಷರ ಗಾತ್ರ

ಗದಗ: ‘ಸರ್ವಧರ್ಮಗಳಿಗೂ ಪ್ರಾಶಸ್ತ್ಯ ನೀಡುವುದರ ಜತೆಗೆ ಎಲ್ಲರಿಗೂ ಸಮಪಾಲು, ಸಮಬಾಳು ತತ್ವ ಅಳವಡಿಸಿಕೊಂಡಿರುವ ಏಕೈಕ ದೇಶ ಭಾರತ. ಬೇರೆಲ್ಲೂ ಕಾಣದ ವರ್ಣರಹಿತ ಏಕತೆಯನ್ನು ಇಲ್ಲಿ ಕಾಣಬಹುದು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ರಮ್ಜಾನ್‌ ಮಾಸದ ಕುರಿತು ಮಾತನಾಡಿದರು.

‘ರಮ್ಜಾನ್‌ ಶ್ರೇಷ್ಠ ಮಾಸವಾಗಿದ್ದು, ಇಸ್ಲಾಂ ಧರ್ಮದ ಬಹು ಮಹತ್ವದ ಘಟ್ಟವಾಗಿದೆ. 10, 11ನೇ ಶತಮಾನಗಳಲ್ಲಿ ಶೈವ, ವೈಷ್ಣವ, ಇಸ್ಲಾಂ ಪರಂಪರೆಗಳು ಪ್ರಾರಂಭವಾದವು. ಭಾರತೀಯ ಇತಿಹಾಸದಲ್ಲಿ ಇಸ್ಲಾಂ ಧರ್ಮವು ತನ್ನದೇ ಆದ ಐತಿಹಾಸಿಕ ಸ್ಥಾನ ಪಡೆದುಕೊಂಡಿದೆ’ ಎಂದರು.

‘ದೇವರು ಒಬ್ಬನೇ ಅವನೇ ಅಲ್ಲಾ ಎಂಬುದು ಈ ಧರ್ಮದ ಮೂಲತತ್ವವಾಗಿದೆ. ಝಕಾತ್ ಎಂಬದು ಈ ಧರ್ಮೀಯರ ವಿಶಿಷ್ಟ ಆಚರಣೆಯಾಗಿದ್ದು, ಇದರ ಅರ್ಥ ಆದಾಯದ ಕಾಲು ಭಾಗವನ್ನು ಬಡವರಿಗೆ ದಾನ ಮಾಡುವುದು. ಇಸ್ಲಾಂ ಹಾಗೂ ಲಿಂಗಾಯತ ಧರ್ಮಗಳು ಏಕನಿಷ್ಠೆಯಿಂದ ಕೂಡಿವೆ’ ಎಂದು ಸ್ವಾಮೀಜಿ ಹೇಳಿದರು.

ಸಾಹಿತಿ ಎ.ಎಸ್ ಮಕಾನದಾರ ರಮ್ಜಾನ್‌ ಮಾಸದ ಮಹತ್ವ ಕುರಿತು ಉಪನ್ಯಾಸ ನೀಡಿದರು.

‘ದೇಹವಿಲ್ಲದ, ರೂಪವಿಲ್ಲದ ದೇವರು ಅಲ್ಲಾ, ಇಸ್ಲಾಂ ಎಂದರೆ ಶರಣಾಗತಿ. ಅಲ್ಲಾಹುವಿಗೆ ವಿನಯದಿಂದ ನಡೆದುಕೊಳ್ಳುವವನೇ ಮುಸ್ಲಿಂ. ರಮ್ಜಾನ್‌ ಮಾನವ, ಕುಟುಂಬ ಸಂಬಂಧಗಳನ್ನು ಬೆಸೆಯುವ, ಅರಿಷಡ್ವರ್ಗಗಳನ್ನು ನಿಯಂತ್ರಿಸುವ, ವ್ಯಕ್ತಿತ್ವವನ್ನು ರೂಪಿಸುವ ಮಾಸ. ಈ ತಿಂಗಳಲ್ಲಿ ಝಕಾತ್ ಮಾಡುವುದರ ಮೂಲಕ ಮನುಷ್ಯನ ವಿಕಾಸದ ಹಾದಿ ವೃದ್ಧಿಯಾಗುತ್ತದೆ’ ಎಂದರು.

ಅರುಣ ಕುಲಕರ್ಣಿ ‘ಗುಡಿಸಲಿನಿಂದ ಗುಡಿಯವರೆಗೆ’ ಪುಸ್ತಕ ಪರಿಚಯ ಮಾಡಿದರು. ರಾಜಶ್ರೀ ಅರುಣ ಕುಲಕರ್ಣಿ ವಚನ ಸಂಗೀತ ನಡೆಸಿ ಕೊಟ್ಟರು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಸಂಗೀತ ಕಾರ್ಯಕ್ರಮ ನೀಡಿದರು. ಪ್ರಿಯಾಂಕ ಬಿಟ್ಟೂರ ವಚನ ಚಿಂತನ, ಪೂಜಾ ಭಜಿ ಧರ್ಮಗ್ರಂಥ ಪಠಣ ನೆರವೇರಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಜಿ.ಪಿ ಕಟ್ಟಿಮನಿ ನಿರೂಪಿಸಿದರು.

ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ಪ್ರೊ. ಎಸ್.ಯು ಸಜ್ಜನಶೆಟ್ರ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ, ವಿವೇಕಾನಂದಗೌಡ ಪಾಟೀಲ, ರತ್ನಕ್ಕ ಪಾಟೀಲ ಮತ್ತು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT