ಬುಧವಾರ, ಡಿಸೆಂಬರ್ 11, 2019
27 °C

ಜೂನಿಯರ್‌ ಬ್ಯಾಡ್ಮಿಂಟನ್ ಟೂರ್ನಿ: ರೋಹನ್‌ ಗುರುಬಾನಿ ಅದಿತಿ ಭಟ್‌ಗೆ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ಅಮೋಘ ಆಟದ ಮೂಲಕ ಗಮನ ಸೆಳೆದಿದ್ದ ಕರ್ನಾಟಕದ ಜನನಿ ಅನಂತಕುಮಾರ್ ಅವರ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು. ಇಲ್ಲಿನ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಅಂಗಣದಲ್ಲಿ ಭಾನುವಾರ ಮುಕ್ತಾ ಯಗೊಂಡ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅವರು ಸೋತರು.

17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಉತ್ತರಾಖಂಡದ ಅದಿತಿ ಭಟ್‌ 21–14, 21–18ರಲ್ಲಿ ಜನನಿ ವಿರುದ್ಧ ಗೆದ್ದರು.

ವೈಲ್ಡ್ ಕಾರ್ಡ್‌ ಮೂಲಕ ಪ್ರವೇಶ ಪಡೆದಿದ್ದ ಜನನಿ ಪ್ರಮುಖ ಆಟಗಾರ್ತಿಯರನ್ನು ಸೋಲಿಸಿ ಗಮನ ಸೆಳೆದಿದ್ದರು. ಫೈನಲ್ ಪಂದ್ಯದ ನಂತರ ಮಾತನಾಡಿದ ಅವರು ‘ನಾನು ಇನ್ನಷ್ಟು ತಾಳ್ಮೆಯಿಂದ ಆಡಬೇಕಾಗಿತ್ತು. ಎದುರಾಳು ಉತ್ತಮ ರ‍್ಯಾಲಿಗಳನ್ನು ಆಡಿದರು. ನಾನು ಅವರ ಪೇಸ್‌ಗೆ ತಕ್ಕಂತೆ ಆಡಲು ಪ್ರಯತ್ನಿಸಿದೆ. ಅದುವೇ ಮುಳುವಾಯಿತು’ ಎಂದರು.

ಮೊದಲ ಗೇಮ್‌ನಲ್ಲಿ ಹಿನ್ನಡೆ ಅನು ಭವಿಸಿದ ಜನನಿ ಎರಡನೇ ಗೇಮ್‌ನ ಆರಂಭದಲ್ಲಿ ತಿರುಗೇಟು ನೀಡಿದರು. ಹೀಗಾಗಿ 17–10ರ ಮುನ್ನಡೆ ಸಾಧಿಸಿದರು. ನಂತರ ಅದಿತಿ ಲಯ ಕಂಡುಕೊಂಡರು.

ರೋಹನ್ ಗುರುಬಾನಿಗೆ ಪ್ರಶಸ್ತಿ: 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರದ ರೋಹನ್ ಗುರುಬಾನಿ ಪ್ರಶಸ್ತಿ ಗೆದ್ದರು. ಫೈನಲ್ ಪಂದ್ಯದಲ್ಲಿ ಅವರು ರಾಜಸ್ಥಾನದ ಶುಭಂ ಪಟೇಲ್ ಎದುರು 21–12, 27–25ರಿಂದ ಗೆದ್ದರು.

ವಿದರ್ಭ ಕ್ರಿಕೆಟ್ ತಂಡದ ವೇಗಿ ರಜನೀಶ್ ಗುರುಬಾನಿ ಅವರ ಸೋದರ ಸಂಬಂಧಿಯಾದ ರೋಹನ್‌ ಲಖನೌದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಹೊತ್ತಿರುವುದಾಗಿ ತಿಳಿಸಿದರು.

15 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರ ಪುತ್ರ ಸಾಯಿ ವಿಷ್ಣು ಪ್ರಶಸ್ತಿ ಗೆದ್ದರು. ಪುದುಚೇರಿಯ ಸಾಯಿ ಸತ್ಯ ಸರ್ವೇಶ್‌ ಎದುರಿನ ಪಂದ್ಯದಲ್ಲಿ ವಿಷ್ಣು 21–14, 21–19ರಿಂದ ಗೆದ್ದರು. ಬಾಲಕಿಯರ ವಿಭಾಗದಲ್ಲಿ ಗುಜರಾತ್‌ನ ತಸ್ನಿಮ್ ಮಿರ್‌ 21–14, 21–12ರಿಂದ ರಾಜಸ್ಥಾನದ ಸಾಕ್ಷಿ ಎದುರು ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು