ಕೆಎಎ: ಮತ್ತೆ ಚುನಾವಣೆ; ಗೊಂದಲ

7

ಕೆಎಎ: ಮತ್ತೆ ಚುನಾವಣೆ; ಗೊಂದಲ

Published:
Updated:

ಬೆಂಗಳೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ (ಕೆಎಎ) ಮತ್ತೊಮ್ಮೆ ಚುನಾವಣೆಗೆ ಸಜ್ಜಾಗಿದೆ. ಅರ್ಹ ಮತದಾರರ ಪಟ್ಟಿಯನ್ನು ಸಂಸ್ಥೆಯ ನೋಟಿಸ್ ಬೋರ್ಡ್‌ನಲ್ಲಿ ಶುಕ್ರವಾರ ಪ್ರದರ್ಶಿಸಿದ್ದು ಬೆಂಗಳೂರು ಗ್ರಾಮಾಂತರ ಅಥ್ಲೆಟಿಕ್ ಸಂಸ್ಥೆಯ ಅಶ್ವಿನಿ ನಾಚಪ್ಪ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ 19ರಂದು ಚುನಾವಣೆ ನಡೆಸುವಂತೆ ಸೊಸೈಟಿಗಳ ನೋಂದಣಾಧಿಕಾರಿಗಳು ಕೆಎಎಗೆ ಸೂಚಿಸಿದ್ದು ಆರ್‌.ವೇಣುಗೋಪಾಲ್‌ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

ಒಟ್ಟು 58 ಮಂದಿ ಮತದಾರರ ಪಟ್ಟಿಯಲ್ಲಿ ಅಶ್ವಿನಿ ನಾಚಪ್ಪ ಅವರ ಹೆಸರು ಇಲ್ಲ. ಗ್ರಾಮಾಂತರ ಅಥ್ಲೆಟಿಕ್ ಸಂಸ್ಥೆಯ ಪ್ರತಿನಿಧಿಗಳಾಗಿ ಬಾಬು ಶೆಟ್ಟಿ ಮತ್ತು ಪಿ.ಮೊಹಮ್ಮದ್‌ ಇಲಿಯಾಸ್ ಅವರ ಹೆಸರನ್ನು ಸೇರಿಸಲಾಗಿದೆ. ಇದನ್ನು ವಿರೋಧಿಸಿರುವ ಅಶ್ವಿನಿ, ಕಾರ್ಯದರ್ಶಿ ಎ.ರಾಜವೇಲು ಅವರಿಗೆ ಪಟ್ಟಿ ಬಿಡುಗಡೆ ಮಾಡುವ ಹಕ್ಕು ಇಲ್ಲ ಎಂದು ಹೇಳಿದ್ದಾರೆ. 

‘ಕೆಎಎ ಜೊತೆ ಸಂಯೋಜನೆಗೊಂಡಿರುವ ಎಲ್ಲ ಸಂಸ್ಥೆಗಳ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರವಷ್ಟೇ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಈ ಕಾರ್ಯವನ್ನು ಚುನಾವಣಾಧಿಕಾರಿ ಮಾಡಬೇಕು. ಅವರು ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಅಶ್ವಿನಿ ದೂರಿದ್ದಾರೆ.

ಧಾರವಾಡ ಜಿಲ್ಲಾ ಘಟಕದ ಎಸ್‌.ಎಸ್‌.ತಾವಡೆ ಮತ್ತು ಹಾವೇರಿ ಜಿಲ್ಲಾ ಘಟಕದ ಬಸವರಾಜ ಕೂಡ ಪ್ರತಿಭಟನೆ ವ್ಯಕ್ತಪಡಿಸಿದ್ದು ಅಧಿಕೃತ ಪಟ್ಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

‘ಎಲ್ಲವನ್ನೂ ಕಾನೂನು ಪ್ರಕಾರ ಮಾಡಲಾಗಿದೆ. ಚುನಾವಣಾಧಿಕಾರಿ ಮೇಲೆ ಆರೋಪ ಹೊರಿಸುವುದರಲ್ಲಿ ಅರ್ಥವಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಬಾಬು ಶೆಟ್ಟಿ ಅವರ ಹೆಸರನ್ನು ಸೇರಿಸಲಾಗಿದೆ’ ಎಂದು ರಾಜವೇಲು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !