ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಯಲ್ಲಿ ಹರೀಶ್ ನಾಯ್ಕ ಮಿಂಚು

ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಗ್ರಾಮೀಣ ಪ್ರತಿಭೆ
Last Updated 29 ಅಕ್ಟೋಬರ್ 2019, 16:31 IST
ಅಕ್ಷರ ಗಾತ್ರ

ಭಟ್ಕಳ: ಶ್ರದ್ಧೆ ಮತ್ತು ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಮಿಂಚುತ್ತಿರುವ ಗ್ರಾಮೀಣ ಕ್ರೀಡಾಪ್ರತಿಭೆ ಹರೀಶ್ ನಾಯ್ಕ ಉತ್ತಮ ನಿದರ್ಶನರೆನಿಸಿದ್ದಾರೆ.

ತಾಲ್ಲೂಕಿನ ಸರ್ಪನಕಟ್ಟೆಯ ರೈತ ಕುಟುಂಬದವರಾದ ಶಂಕರ ನಾಯ್ಕ ಮತ್ತು ಪಾರ್ವತಿ ದಂಪತಿಯ ಪುತ್ರರಾದ ಹರೀಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗ್ರಾಮೀಣ ಭಾಗವಾದ ಸರ್ಪನಕಟ್ಟೆ ಮತ್ತು ಬೆಳಕೆ ಪ್ರೌಢಶಾಲೆಯಲ್ಲಿ ಪೂರೈಸಿದವರು. ಎಸ್ಎಸ್ಎಲ್‌ಸಿ ಕಲಿಯುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಕಬಡ್ಡಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಇವರಿಗೆ ಸರ್ಪನಕಟ್ಟೆ ಸ್ಪೋರ್ಟ್ಸ್‌ಕ್ಲಬ್ ಸದಸ್ಯತ್ವ ನೀಡಿ, ಕಬಡ್ಡಿಯಲ್ಲಿ ಹೆಚ್ಚಿನ ತರಬೇತಿಯನ್ನು ನೀಡಿತು.

ಹೀಗೆ ತರಬೇತಿ ಪಡೆದ ಹರೀಶ್ ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. 2014ರಲ್ಲಿ ಪಂಜಾಬ್‌ನಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದುಕೊಂಡರು. ಅಲ್ಲಿಂದ ಮುಂದಕ್ಕೆ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಹತ್ತಾರು ಕಬಡ್ಡಿ ಟೂರ್ನಿಯಲ್ಲಿ ಆಡಿದ ಅವರು ‘ಬೆಸ್ಟ್ ರೈಡರ್, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿ ಕೊಳ್ಳುವುದರೊಂದಿಗೆ ತಾವು ಆಡುತ್ತಿದ್ದ ತಂಡವನ್ನೂ ಗೆಲ್ಲಿಸುವಲ್ಲೂ ಚಾತುರ್ಯ ತೋರುತ್ತಿದ್ದರು.

ಪಿಯುಸಿ ಮತ್ತು ಪದವಿ ಶಿಕ್ಷಣಕ್ಕಾಗಿ ಧಾರವಾಡ ಮತ್ತು ಗದಗ ಜಿಲ್ಲೆಗೆ ತೆರಳಿದ ಹರೀಶ್, ಶಿಕ್ಷಣ ಪಡೆಯುತ್ತಿರುವಾಗಲೇ ಧಾರವಾಡದಲ್ಲಿ ಕಬಡ್ಡಿ ತರಬೇತುದಾರರಾಗಿದ್ದ ಈಶ್ವರ ಅಂಗಡಿ ಹಾಗೂ ಮೈಸೂರಿನ ಬಿ.ಸಿ.ರಮೇಶ್ ಅವರಲ್ಲಿ ಹೆಚ್ಚಿನ ತರಬೇತಿ ಪಡೆದು ವಿಭಾಗ ಹಾಗೂ ರಾಜ್ಯಮಟ್ಟದ ಟೂರ್ನಿಯಲ್ಲಿ ಆಡುವುದಕ್ಕೆ ಆರಂಭಿಸಿದರು.

ಇವರ ಆಟದ ವೈಖರಿ, ಎಲ್ಲರ ಗಮನ ಸೆಳೆದು ಪ್ರೊ ಕಬಡ್ಡಿಗೆ ಆಯ್ಕೆಯಾಗುವಂತಾಯಿತು. ಹಾಗೆ ಆಯ್ಕೆಯಾದ ಹರೀಶ್ ಪ್ರೊ ಕಬಡ್ಡಿಯಲ್ಲೂ ತಮ್ಮ ಚಾತುರ್ಯ ಮೆರೆದರು. 2017ರಲ್ಲಿ ತಮಿಳುನಾಡಿನಲ್ಲಿ ನಡೆದ ಸೀನಿಯರ್ಸ್ 'ಸೌತ್ ಝೋನ್ ನ್ಯಾಷನಲ್ ಲೆವೆಲ್' ಕಬಡ್ಡಿ ಟೂರ್ನಿಯಲ್ಲಿ ಇವರಿದ್ದ ತಂಡ ರನ್ನರ್ಸ್‌ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಮತ್ತೊಮ್ಮೆ 2017ರಲ್ಲಿ ಜೋಧ್‌ದಲ್ಲಿ ಮತ್ತು 2018ರಲ್ಲಿ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಹರೀಶ್ ತಮ್ಮ ಆಟದ ಚಾತುರ್ಯ ಪ್ರದರ್ಶಿಸಿದ್ದಾರೆ.

‘ಎಸ್ಎಸ್ಎಲ್‌ಸಿ ಓದುತ್ತಿರುವಾಗಲೇ ಕಬಡ್ಡಿ ಬಗ್ಗೆ ಆಸಕ್ತಿ ಬೆಳೆಸಿಕೊಂಡ ನಾನು ಅದರಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಸಂಕಲ್ಪ ತೊಟ್ಟಿದ್ದೆ. ನನಗೆ ತಂದೆ ಶಂಕರ್, ತಾಯಿ ಪಾರ್ವತಿ, ಚಿಕ್ಕಪ್ಪ ಹೀಗೆ ಕುಟುಂಬದವರೆಲ್ಲರೂ ಪ್ರೋತ್ಸಾಹ ನೀಡಿದ್ದರಿಂದಲೇ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಹರೀಶ್ ಹೇಳಿದರು.

‘ಕಬಡ್ಡಿ ಇಂದು ನನಗೆ ಒಳ್ಳೆಯ ಬದುಕಿನೊಂದಿಗೆ ಎಲ್ಲವನ್ನೂ ನೀಡಿದೆ. ಕೇಂದ್ರ ಸರ್ಕಾರದ ರೈಲ್ವೆಯಲ್ಲಿ ಕಳೆದ ಜನವರಿಯಲ್ಲಿ ಟಿಸಿ ಹುದ್ದೆಯೂ ದೊರಕಿದೆ. ಸದ್ಯ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಕಬಡ್ಡಿಯಲ್ಲಿ ಮತ್ತಷ್ಟು ಸಾಧನೆ ಮಾಡುವುದೇ ನನ್ನ ಗುರಿಯಾಗಿದೆ’ ಎಂದು ಹೇಳಿದ ಹರೀಶ್, ಕಠಿಣ ಪರಿಶ್ರಮ, ಶ್ರದ್ಧೆ, ಛಲ ಇದ್ದರೆ ಸಾಧನೆ ಎಂಬುದು ಕನಸಲ್ಲ ಎಂದರು.

‘ಕಬಡ್ಡಿ ಆಡುವ ಕ್ರೀಡಾಪಟುಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವೆಂದರೆ, ಕಬಡ್ಡಿ ಆಡುವಾಗ ಗಾಯವಾಗದಂತೆ, ತಮ್ಮನ್ನು ರಕ್ಷಿಸಿಕೊಂಡು ಆಡಬೇಕು. ಗಾಯಗೊಂಡರೆ ಅದು ಗುಣಮುಖ ಆಗುವುದಕ್ಕೆ ವರ್ಷಗಳೇ ಬೇಕಾಗುತ್ತದೆ’ ಎಂಬ ಸಲಹೆಯನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT