7

ಕಬಡ್ಡಿ ಮಾಸ್ಟರ್ಸ್ ಟೂರ್ನಿ: ಭಾರತ, ಇರಾನ್‌ ಫೈನಲ್‌ಗೆ

Published:
Updated:

ದುಬೈ : ಭಾರತ ಮತ್ತು ಇರಾನ್ ತಂಡಗಳು ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಫೈನಲ್‌ನಲ್ಲಿ ಶನಿವಾರ ಸೆಣಸಲಿವೆ. ಇಲ್ಲಿನ ಅಲ್ ವಾಸಲ್ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 36–20ರಿಂದ ಮತ್ತು ಇರಾನ್‌ ತಂಡ ಪಾಕಿಸ್ತಾನವನ್ನು 40–21ರಿಂದ ಮಣಿಸಿತು.

ನಾಯಕ ಅಜಯ್‌ ಠಾಕೂರ್‌ ರೈಡಿಂಗ್‌ನಲ್ಲೂ ಗಿರೀಶ್ ಮಾರುತಿ ಎರ್ನಕ್‌ ಟ್ಯಾಕ್ಲಿಂಗ್‌ನಲ್ಲೂ ಮಿಂಚಿ ಭಾರತಕ್ಕೆ ಸುಲಭ ಜಯ ಗಳಿಸಿಕೊಟ್ಟರು. ಠಾಕೂರ್‌ 10 ಪಾಯಿಂಟ್ ಗಳಿಸಿದರೆ ಎರ್ನಕ್‌ ಎಂಟು ಪಾಯಿಂಟ್‌ ಬಗಲಿಗೆ ಹಾಕಿದರು. ಕೊರಿಯಾದ ಜಾಂಗ್ ಕುನ್ ಲೀ ಏಕಾಂಗಿ ಹೋರಾಟ ನಡೆಸಿ ಎಂಟು ಪಾಯಿಂಟ್‌ ಗಳಿಸಿದರು. ಆದರೆ ಇತರ ಆಟಗಾರರಿಂದ ಅವರಿಗೆ ಸಹಕಾರ ಸಿಗಲಿಲ್ಲ.

ಆರಂಭದಲ್ಲಿ 3–7ರ ಹಿನ್ನಡೆ ಅನುಭವಿಸಿದ್ದ ಭಾರತ ನಂತರ ಚೇತರಿಸಿಕೊಂಡಿತು. ಪ್ರದೀಪ್ ನರ್ವಾಲ್ ಬದಲಿಗೆ ಮೋನು ಗೋಯಟ್ ಅವರನ್ನು ಕಣಕ್ಕೆ ಇಳಿಸಿದ ಕೋಚ್ ಶ್ರೀನಿವಾಸ ರೆಡ್ಡಿ ಫಲ ಕಂಡರು. ಠಾಕೂರ್‌ಗೆ ಉತ್ತಮ ಸಹಕಾರ ನೀಡಿದ ಗೋಯಟ್‌ ತಂಡಕ್ಕೆ ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು. 8–8ರ ಸಮಬಲ ಸಾಧಿಸಿದ ನಂತರ ಹಿಂದಿರುಗಿ ನೋಡದ ಭಾರತ ಪ್ರಥಮಾರ್ಧದ ಮುಕ್ತಾಯಕ್ಕೆ 17–10ರಿಂದ ಮುನ್ನಡೆಯಿತು.

ವಿರಾಮದ ನಂತರ ಗಿರೀಶ್ ಎರ್ನಕ್‌ ಮಿಂಚಿನ ಆಟ ಆಡಿದರು. ಜಾಂಗ್ ಕುನ್ ಲೀ ಅವರನ್ನು ಏಕಾಂಗಿಯಾಗಿ ಹಿಡಿದು ಮಿಂಚಿದ ಅವರು ಎದುರಾಳಿಗಳನ್ನು ಆಲ್‌ ಔಟ್ ಮಾಡಿ ತಂಡದ ಮುನ್ನಡೆಯನ್ನು 24–11ಕ್ಕೆ ಏರಿಸಿದರು. ಅಂತಿಮ ನಿಮಿಷಗಳಲ್ಲಿ ಕೊರಿಯಾ ತಿರುಗೇಟು ನೀಡಿ ಪಾಯಿಂಟ್‌ಗಳನ್ನು ಕಲೆ ಹಾಕಿತು. ಆದರೂ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನಕ್ಕೆ ಆಘಾತ:
ಪಾಕಿಸ್ತಾನದ ಎದುರು ಮಹಮ್ಮದ್‌ ಮಗಸೊದ್ಲು ನೇತೃತ್ವದ ಇರಾನ್ ತಂಡದವರು ಭರ್ಜರಿ ಆಟ ಆಡಿದರು ಮೊದಲ ನಿಮಿಷದಲ್ಲೇ ಸೂಪರ್ ರೈಡ್ ಮಾಡಿ ಪಾಯಿಂಟ್‌ಗಳನ್ನು ಹೆಕ್ಕಿದ ನಬಿಭಕ್ಷ್‌ ಅವರು ಇರಾನ್‌ಗೆ ಮುನ್ನಡೆ ಗಳಿಸಿಕೊಟ್ಟರು. 19–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಇರಾನ್  ದ್ವಿತೀಯಾರ್ಧದಲ್ಲೂ ಭರ್ಜರಿ ಆಟವಾಡಿ 21 ಪಾಯಿಂಟ್‌ಗಳನ್ನು ಕಲೆ ಹಾಕಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !