ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಪಿಕೆಎಲ್‌: ಮುಂಬೈಗೆ ಮಣಿದ ಚೆನ್ನೈ ಚಾಲೆಂಜರ್ಸ್

ಮಿಂಚಿದ ಮಹೇಶ್‌, ಮಣಿವೀರ; ಅಂತಿಮ ಹಂತದಲ್ಲಿ ರೋಚಕ ಹಣಾಹಣಿ
Last Updated 25 ಮೇ 2019, 16:38 IST
ಅಕ್ಷರ ಗಾತ್ರ

ಮೈಸೂರು: ಕೊನೆಯ ಐದು ನಿಮಿಷಗಳಲ್ಲಿ ಮಿಂಚಿನ ಆಟವಾಡಿದ ಮುಂಬೈ ಚೆ ರಾಜೆ ತಂಡ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಐಐಪಿಕೆಎಲ್‌) ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ತಂಡ 32–28 ರಲ್ಲಿ ಚೆನ್ನೈ ಚಾಲೆಂಜರ್ಸ್‌ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಮುಂಬೈ ತಂಡ ಆರು ಪಾಯಿಂಟ್‌ಗಳೊಂದಿಗೆ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು.

ಪಂದ್ಯದ ಆರಂಭದಿಂದಲೇ ತುರುಸಿನ ಪೈಪೋಟಿ ಕಂಡುಬಂತು. ಪ್ರತಿಯೊಂದು ಪಾಯಿಂಟ್‌ ಗಿಟ್ಟಿಸಲು ಆಟಗಾರರು ಪ್ರಯಾಸಪಟ್ಟರು. ರೇಡಿಂಗ್‌ನಲ್ಲಿ ಯಾರಿಗೂ ಒಂದಕ್ಕಿಂತ ಹೆಚ್ಚು ಪಾಯಿಂಟ್‌ ಬರಲಿಲ್ಲ. ಮೊದಲ ಕ್ವಾರ್ಟರ್‌ ಕೊನೆಗೊಂಡಾಗ ಉಭಯ ತಂಡಗಳು 7–7 ರಲ್ಲಿ ಸಮಬಲ ಸಾಧಿಸಿದ್ದವು.

ಎರಡನೇ ಕ್ವಾರ್ಟರ್‌ನಲ್ಲಿ ಚೆನ್ನೈ ತಂಡ ಅಲ್ಪ ಮೇಲುಗೈ ಸಾಧಿಸಿತು. ಇಳಯರಾಜ ಅವರ ಉತ್ತಮ ರೇಡಿಂಗ್‌ ನೆರವಿನಿಂದ ವಿರಾಮದ ವೇಳೆಗೆ ಮೂರು ಪಾಯಿಂಟ್‌ಗಳ (15–12) ಮುನ್ನಡೆ ಪಡೆದುಕೊಂಡಿತು.

ಎರಡನೇ ಅವಧಿಯಲ್ಲಿ ಚೆನ್ನೈ ತಂಡ ಟ್ಯಾಕ್ಲಿಂಗ್‌ನಲ್ಲಿ ಚುರುಕುತನ ತೋರಿಸಿತು. ಮೂರನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಮುನ್ನಡೆಯನ್ನು 20–13 ಕ್ಕೆ ಹೆಚ್ಚಿಸಿಕೊಂಡಿತು.

ಪಟ್ಟುಬಿಡದೆ ಮರುಹೋರಾಟ ನಡೆಸಿದ ಮುಂಬೈ ಹಿನ್ನಡೆಯನ್ನು 19–21ಕ್ಕೆ ತಗ್ಗಿಸಿತು. ಮಹೇಶ್‌ ಮಗ್ದೂಮ್‌, ಮಣಿವೀರ ಕಾಂತ ಮತ್ತು ಅರುಳ್‌ ರೇಡಿಂಗ್‌ನಲ್ಲಿ ಮೇಲಿಂದ ಮೇಲೆ ಪಾಯಿಂಟ್‌ ಕಲೆಹಾಕಿದರು. ಪಂದ್ಯ ಕೊನೆಗೊಳ್ಳಲು ನಾಲ್ಕು ನಿಮಿಷಗಳಿರುವಾಗ ಎದುರಾಳಿ ತಂಡವನ್ನು ಆಲೌಟ್‌ ಮಾಡಿದ26–26 ರಲ್ಲಿ ಸಮಬಲ ಸಾಧಿಸಿತು. ಆ ಬಳಿಕ ಪೂರ್ಣ ಪ್ರಭುತ್ವ ಸಾಧಿಸಿ ಗೆಲುವು ಒಲಿಸಿಕೊಂಡಿತು.

ರಿನೋಸ್‌ ಪಂದ್ಯ ಸಮಬಲ:ಬೆಂಗಳೂರು ರಿನೋಸ್‌ ಮತ್ತು ಹರಿಯಾಣ ಹೀರೋಸ್‌ ನಡುವೆ ಶುಕ್ರವಾರ ರಾತ್ರಿ ನಡೆದ ಪಂದ್ಯ 36–36 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ ಉಭಯ ತಂಡಗಳು 19–19 ರಲ್ಲಿ ಸಮಬಲ ಸಾಧಿಸಿದ್ದವು.

ಬೆಂಗಳೂರು ತಂಡದ ಅರ್ಮುಗಂ ಅವರು ರೇಡಿಂಗ್‌ನಲ್ಲಿ 14 ಪಾಯಿಂಟ್‌ ಕಲೆಹಾಕಿದರೆ, ಹರಿಯಾಣ ತಂಡದ ಸಾಗರ್‌ ಸಿಂಗ್‌ ರೇಡಿಂಗ್‌ನಲ್ಲಿ 12 ಪಾಯಿಂಟ್‌ ಗಳಿಸಿದರು.

ಇಂದಿನ ಪಂದ್ಯಗಳು

ಪಾಂಡಿಚೇರಿ ಪ್ರಿಡೇಟರ್ಸ್– ಮುಂಬೈ ಚೆ ರಾಜೆ

ರಾತ್ರಿ 8ಕ್ಕೆ

ಬೆಂಗಳೂರು ರಿನೋಸ್–ತೆಲುಗು ಬುಲ್ಸ್

ರಾತ್ರಿ 9ಕ್ಕೆ

ಪುಣೆ ಪ್ರೈಡ್– ಚೆನ್ನೈ ಚಾಲೆಂಜರ್ಸ್

10ಕ್ಕೆ

ನೇರ ಪ್ರಸಾರ: ಡಿ ಸ್ಪೋರ್ಟ್ಸ್‌, ಡಿಡಿ ಸ್ಪೋರ್ಟ್ಸ್‌, ಎಂಟಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT