ಶುಕ್ರವಾರ, ನವೆಂಬರ್ 22, 2019
22 °C

ಆಟಗಾರರಲ್ಲಿ ಬದ್ಧತೆ ಕೊರತೆ ಇದೆ, ಇದೂ ಹಿನ್ನಡೆಗೆ ಕಾರಣ: ಸುಕೇಶ್‌ ಹೆಗ್ಡೆ

Published:
Updated:

ಶಾಲಾ ದಿನಗಳಲ್ಲಿ ಹರ್ಡಲ್ಸ್‌, ಶಾಟ್‌ಪಟ್‌ ಮತ್ತು ಹೈಜಂಪ್‌ನಲ್ಲಿ ಮೋಡಿ ಮಾಡುತ್ತಿದ್ದ ಆ ಹುಡುಗ ಮುಂದೊಂದು ದಿನ ದೊಡ್ಡ ಅಥ್ಲೀಟ್‌ ಆಗುತ್ತಾನೆ ಎಂದು ಬಹಳ ಮಂದಿ ಭಾವಿಸಿದ್ದರು. ಆದರೆ ಆತ ಪ್ರಜ್ವಲಿಸಿದ್ದು ಕಬಡ್ಡಿಯಲ್ಲಿ.

ಪ್ರೌಢಶಾಲಾ ಹಂತದಲ್ಲಿ ಕಬಡ್ಡಿಯತ್ತ ಆಕರ್ಷಿತರಾಗಿ ಈಗ ಅದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿರುವ ಉಡು‍ಪಿ ಜಿಲ್ಲೆಯ ಪ್ರತಿಭೆ ಸುಕೇಶ್‌ ಹೆಗ್ಡೆ.

‘ರನ್ನಿಂಗ್‌ ಹ್ಯಾಂಡ್‌ ಟಚ್‌’ ಮೂಲಕ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಬಲ್ಲ ಚಾಣಾಕ್ಷ ಆಟಗಾರ ಸುಕೇಶ್‌, ‍ಪ್ರೊ ಕಬಡ್ಡಿಯಲ್ಲಿ ಅಮೋಘ ಸಾಮರ್ಥ್ಯ ತೋರಿ ಎಲ್ಲರ ಮನೆಮಾತಾಗಿದ್ದಾರೆ. ಲೀಗ್‌ನಲ್ಲಿ 100 ಪಂದ್ಯಗಳನ್ನು ಆಡಿದ ಸಾಧನೆಯನ್ನೂ ಮಾಡಿದ್ದಾರೆ.

2016ರಲ್ಲಿ ತವರಿನಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆದ್ದಾಗ ಸುಕೇಶ್‌ ತಂಡದಲ್ಲಿದ್ದರು. ಈ ಸಲ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್‌ ವಾರಿಯರ್ಸ್‌ ಚಾಂಪಿಯನ್‌ ಆಗುವಲ್ಲಿ ನಿರ್ಣಾಯಕ ‍ಪಾತ್ರ ವಹಿಸಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಪಿಕೆಎಲ್‌ನಲ್ಲಿ ಪ್ರಶಸ್ತಿ ಗೆದ್ದ ತಂಡವೊಂದರ ಭಾಗವಾಗಿದ್ದೀರಿ. ಹೇಗನಿಸುತ್ತಿದೆ?

ಹಿಂದಿನ ಆರು ಆವೃತ್ತಿಗಳಲ್ಲಿ ಒಟ್ಟು ಮೂರು ತಂಡಗಳ ಪರ ಆಡಿದ್ದೆ. ಹೀಗಿದ್ದರೂ ಪ್ರಶಸ್ತಿಯ ಕನಸು ಸಾಕಾರಗೊಂಡಿರಲಿಲ್ಲ. ಈ ಬಾರಿ ಬೆಂಗಾಲ್‌ ವಾರಿಯರ್ಸ್‌ ತಂಡ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತ್ತು. ತಂಡದ ಜೊತೆಗೆ ನನ್ನ ಪ್ರಶಸ್ತಿಯ ಆಸೆಯೂ ಈಡೇರಿದೆ. ಹೀಗಾಗಿ ಅತೀವ ಖುಷಿಯಾಗಿದೆ.

*ಬೆಂಗಾಲ್‌ ವಾರಿಯರ್ಸ್‌ ಈ ಬಾರಿ ಪ್ರಶಸ್ತಿ ಜಯಿಸುವ ವಿಶ್ವಾಸವಿತ್ತೇ?

ಖಂಡಿತವಾಗಿಯೂ ಇರಲಿಲ್ಲ. ಯು ಮುಂಬಾ, ತಮಿಳ್‌ ತಲೈವಾಸ್‌ ಮತ್ತು ದಬಂಗ್‌ ಡೆಲ್ಲಿ ತಂಡಗಳು ಪ್ರಶಸ್ತಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದವು. ಫೈನಲ್‌ ಪ್ರವೇಶಿಸುವುದು ನಮ್ಮ ಗುರಿಯಾಗಿತ್ತು. ನಮ್ಮ ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರಿದ್ದರು. ಕನ್ನಡಿಗ ಬಿ.ಸಿ.ರಮೇಶ್‌ ಅವರ ಮಾರ್ಗದರ್ಶನವೂ ಇತ್ತು. ಸೋಲು ಗೆಲುವುಗಳ ಬಗ್ಗೆ  ತಲೆಕೆಡಿಸಿಕೊಳ್ಳದೆ ಎಲ್ಲಾ ಪಂದ್ಯಗಳಲ್ಲೂ ಯೋಜನೆಗೆ ಅನುಗುಣವಾಗಿ ಆಡುವತ್ತ ಚಿತ್ತ ಹರಿಸಿದ್ದೆವು. ಹೀಗಾಗಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು.

*ಈ ಬಾರಿಯ ಲೀಗ್‌ನ ಆರಂಭದ ಕೆಲ ಪಂದ್ಯಗಳಲ್ಲಿ ನಿಮ್ಮನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು. ಇದರಿಂದ ಬೇಸರವಾಗಿತ್ತೇ?

ತಂಡದಲ್ಲಿ ಹೆಚ್ಚು ಮಂದಿ ಯುವ ರೇಡರ್‌ಗಳು ಇದ್ದರು. ಹೀಗಾಗಿ ನನಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸರವೇನೂ ಆಗಿರಲಿಲ್ಲ. ಮಣಿಂದರ್‌ ಸಿಂಗ್ ಗಾಯಗೊಂಡಿದ್ದರಿಂದ ಆಡುವ ಬಳಗದಲ್ಲಿ ಸ್ಥಾನ ಲಭಿಸಿತು. ಇದನ್ನು ಸದುಪಯೋಗಪಡಿಸಿಕೊಂಡೆ. ತಂಡದ ಗೆಲುವಿಗಾಗಿ ಶ್ರಮಿಸಿದ ತೃಪ್ತಿ ಇದೆ.

*ಪಿಕೆಎಲ್‌ ಶುರುವಾದ ನಂತರ ನಿಮ್ಮ ಬದುಕಿನಲ್ಲಾಗಿರುವ ಬದಲಾವಣೆಗಳೇನು?

ಸಾಕಷ್ಟು ಬದಲಾವಣೆಗಳಾಗಿವೆ. ಆರ್ಥಿಕವಾಗಿ ಸಬಲರಾಗಿದ್ದೇವೆ. ತಾರಾ ವರ್ಚಸ್ಸು ಸಿಕ್ಕಿದೆ. ಹೋದಲೆಲ್ಲಾ ಜನ ಗುರುತಿಸುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಮತ್ತು ಹಸ್ತಾಕ್ಷರ ಪಡೆಯಲು ಮುಗಿ ಬೀಳುತ್ತಾರೆ. ಇದನ್ನೆಲ್ಲಾ ನೋಡಿದಾಗ ತುಂಬಾ ಆನಂದವಾಗುತ್ತದೆ.

*ಕಬಡ್ಡಿಯತ್ತ ಆಕರ್ಷಿತರಾಗಿದ್ದು ಹೇಗೆ?

ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚು ತೊಡಗಿಕೊಂಡಿದ್ದೆ. ಸ್ನೇಹಿತರ ಜೊತೆ ಆಗಾಗ ಕಬಡ್ಡಿಯನ್ನೂ ಆಡುತ್ತಿದ್ದೆ. ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ಕೋಚ್‌ ಕರುಣಾಕರ ಶೆಟ್ಟಿ ಅವರು ನನ್ನೊಳಗಿನ ಕಬಡ್ಡಿ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸಾಣೆ ಹಿಡಿದರು. ಕಾಲೇಜು ದಿನಗಳಲ್ಲಿ ಸೀನಿಯರ್‌ಗಳ ಆಟವನ್ನು ನೋಡಿ ಹೊಸ ಹೊಸ ಕೌಶಲಗಳನ್ನು ಕಲಿತೆ. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲೂ ಆಡಿದ್ದೆ. ಪ್ರೊ ಕಬಡ್ಡಿ ಶುರುವಾದ ಬಳಿಕ ಬದುಕು ಬದಲಾಯಿತು. ಈ ಲೀಗ್‌ನಲ್ಲಿ ಉತ್ತಮ ಆಟ ಆಡಿದ್ದರಿಂದ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವೂ ಲಭ್ಯವಾಯಿತು.

*ಕಬಡ್ಡಿಯಲ್ಲಿ ಭಾರತದ ಪ್ರಾಬಲ್ಯ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ಈ ಬಗ್ಗೆ ನೀವೇನು ಹೇಳುತ್ತೀರಿ?

ಹಾಗೇನೂ ಇಲ್ಲ. ನಮ್ಮವರು ಎಲ್ಲಾ ಟೂರ್ನಿಗಳಲ್ಲೂ ಚೆನ್ನಾಗಿಯೇ ಆಡುತ್ತಿದ್ದಾರೆ. ನಮ್ಮಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ತಂಡದ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಕೆಲವೊಮ್ಮೆ ವಿಫಲರಾಗಿದ್ದೇವೆ. ಹೀಗಾಗಿ ಕೆಲ ಟೂರ್ನಿಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ. ಇದರ ಆಧಾರದಲ್ಲೇ ನಮ್ಮ ಪ್ರಾಬಲ್ಯ ಕಡಿಮೆಯಾಗಿದೆ ಎಂದು ವಿಶ್ಲೇಷಿಸುವುದು ಸರಿಯಲ್ಲ.

*ಭಾರತ ತಂಡದಲ್ಲಿ ಕನ್ನಡಿಗರೇ ಇಲ್ಲವಲ್ಲ?

ನಮ್ಮಲ್ಲಿ ಕಬಡ್ಡಿ ಅಕಾಡೆಮಿಗಳು ಹಾಗೂ ಕ್ಲಬ್‌ಗಳು ಕಡಿಮೆ ಇವೆ. ಹೀಗಾಗಿ ಪ್ರತಿಭಾನ್ವೇಷಣೆ ಕುಂಠಿತಗೊಂಡಿದೆ. ಈಗಿನ ಆಟಗಾರರಲ್ಲಿ ಬದ್ಧತೆಯ ಕೊರತೆಯೂ ಇದೆ. ಇದು ಕೂಡಾ ಹಿನ್ನಡೆಗೆ ಕಾರಣ. ಶಾಲಾ ಹಂತದಿಂದಲೇ ಮಕ್ಕಳಲ್ಲಿ ಕಬಡ್ಡಿ ಬಗ್ಗೆ ಒಲವು ಬೆಳೆಸುವ ಕೆಲಸ ಆಗಬೇಕು. ಆಗ ಪರಿಸ್ಥಿತಿ ಸುಧಾರಿಸುತ್ತದೆ.

*ಪ್ರೊ ಕಬಡ್ಡಿಯಲ್ಲಿ ‘ಶತಕ’ ಪೂರೈಸಿದ್ದೀರಿ. ಇದರ ಬಗ್ಗೆ ಏನಂತೀರಿ?

ಕಬಡ್ಡಿಯು ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆ. ಹೀಗಾಗಿ ಪದೇ ಪದೇ ಗಾಯದ ಸಮಸ್ಯೆ ಕಾಡುತ್ತಲೇ ಇರುತ್ತದೆ. ಇದರ ನಡುವೆಯೂ ಪಿಕೆಎಲ್‌ನಲ್ಲಿ 100 ಪಂದ್ಯಗಳನ್ನು ಆಡಿರುವುದು ಖುಷಿಯ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡಬೇಕು. ಹೀಗಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಿದ್ದೇನೆ.

*ಪಿಕೆಎಲ್‌ ಐದನೇ ಆವೃತ್ತಿಯಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಮುನ್ನಡೆಸಿದ್ದಿರಿ. ಆ ಅನುಭವ ಹೇಗಿತ್ತು.

ತಂಡದಲ್ಲಿ ಹಿರಿಯ ಆಟಗಾರರು ಇಲ್ಲದ ಕಾರಣ ನನಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಅದೊಂದು ವಿಶಿಷ್ಠ ಅನುಭವ. ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದರು. ಎಲ್ಲರೂ ನನ್ನ ಅಣತಿಯಂತೆ ನಡೆದುಕೊಳ್ಳುತ್ತಿದ್ದರು. ಯೋಜನೆಗೆ ಅನುಗುಣವಾಗಿ ಆಡಿದರು. ಹೀಗಾಗಿ ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ ಪ್ರವೇಶಿಸಲು ಸಾಧ್ಯವಾಗಿತ್ತು. ನಾಯಕತ್ವದ ಜೊತೆಗೆ ವೈಯಕ್ತಿಕ ಪ್ರದರ್ಶನದತ್ತಲೂ ಗಮನ ಹರಿಸುವ ಸವಾಲೂ ಇತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸುವುದನ್ನು ಕಲಿಯಲು ಇದು ಸಹಕಾರಿಯಾಯಿತು.

*‘ರನ್ನಿಂಗ್‌ ಹ್ಯಾಂಡ್‌ ಟಚ್‌’ನಲ್ಲಿ ನೀವು ಪರಿಣತಿ ಹೊಂದಿದ್ದು ಹೇಗೆ?

ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಶಿಬಿರಗಳಲ್ಲಿ ಹಿರಿಯ ಆಟಗಾರರು ಆಡುವುದನ್ನು ಹತ್ತಿರದಿಂದ ನೋಡುತ್ತಿದ್ದೆ. ಹಾಗೆ ನೋಡುತ್ತಲೇ ಆ ಕೌಶಲವನ್ನು ಕಲಿತು ಅದನ್ನು ಮೈಗೂಡಿಸಿಕೊಂಡೆ. ಇದು ನನಗೆ ವರವಾಗಿ ಪರಿಣಮಿಸಿದೆ.

*ಮತ್ತೆ ಭಾರತ ತಂಡಕ್ಕೆ ಮರಳುವ ವಿಶ್ವಾಸ ಇದೆಯೇ?

ಈಗ ಸಾಕಷ್ಟು ಮಂದಿ ಯುವಕರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಅವರ ಜೊತೆ ಪೈಪೋಟಿ ನಡೆಸಿ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ. ಹಾಗಂತ ಕೈಕಟ್ಟಿ ಕೂತಿಲ್ಲ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಹಾಗೂ ರಾಷ್ಟ್ರೀಯ ಶಿಬಿರದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರುವತ್ತ ಚಿತ್ತ ಹರಿಸಿದ್ದೇನೆ.

 

ಪ್ರತಿಕ್ರಿಯಿಸಿ (+)