ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಅಂಕಣಕ್ಕೆ ಮರಳುವ ತವಕದಲ್ಲಿ ಮಿಥಿನ್‌

Last Updated 29 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆ ಹಲವು ಕಬಡ್ಡಿ ಆಟಗಾರರಿಗೆ ತವರು. ಐದು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಲೀಗ್‌ ಆರಂಭವಾದ ಮೇಲೆ ಕಬಡ್ಡಿ ಆಟಗಾರರಿಗೆ ಸಾಮರ್ಥ್ಯ ತೋರಲು ವೇದಿಕೆಯೊಂದು ದೊರೆತಂತಾಗಿದೆ. ಹೀಗೆ ಕರಾವಳಿಯಿಂದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದಲ್ಲಿ ಆಡಿದವರು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಮಿಥಿನ್‌ ಕುಮಾರ್‌.

ಈ ಪದವಿ ವಿದ್ಯಾರ್ಥಿ ಬೆಂಗಾಲ್‌ ವಾರಿಯರ್ಸ್‌ ಪರ ಈ ವರ್ಷವೂ ಆಡಬೇಕಿತ್ತು. ಆದರೆ ಲೀಗ್‌ನಲ್ಲಿ ಆಡುವ ಸಂದರ್ಭದಲ್ಲಿ ಎಡಗೈಗೆ ಆದ ಗಾಯದ ಕಾರಣ ರೈಡರ್‌ ಪಾತ್ರ ವಹಿಸುವ ಮಿಥಿನ್‌ಗೆ ವಿಶ್ರಾಂತಿ ನೀಡಲಾಗಿದೆ. ಪೂರ್ಣ ಚೇತರಿಸಿಕೊಂಡು ಮತ್ತೆ ಲೀಗ್‌ಗೆ ಮರಳುವ ಭರವಸೆಯಲ್ಲಿ ಅವರು ಇದ್ದಾರೆ.

ಕಬಡ್ಡಿ ಕನಸು

ಕಡಬ ತಾಲ್ಲೂಕು ಐತ್ತೂರು ಗ್ರಾಮದ ಚಿಕ್ಕಂದಿನಿಂದಲೂ ಮಿಥಿನ್‌ಗೆ ಕಬಡ್ಡಿ ಇಷ್ಟ. ಮುಂದೆ ಈ ಆಟದಲ್ಲಿ ಹೆಸರು ಮಾಡುವ ಕನಸನ್ನೂ ಹೊತ್ತಿದ್ದರು.ಪುತ್ತೂರಿನಲ್ಲಿ ಐದು ವರ್ಷ ಹಿಂದೆ (2014) ಓಪನ್ ಟೂರ್ನಿಯೊಂದರಲ್ಲಿ ಆಡುವ ವೇಳೆ ಬಲಗೈ ಮುರಿದುಹೋಯಿತು.ಮೂಳೆಗೆ ರಾಡ್‌ ಸೇರಿಸಿದ್ದ ವೈದ್ಯರು, ‘ಇನ್ನು ನೀನು ಕಬಡ್ಡಿ ಆಡುವುದನ್ನು ಬಿಟ್ಟು ಬಿಡು’ ಎಂದಿದ್ದರು. ಮನೆಯಲ್ಲೂ ಅದೇ ಮಾತು. ಜಗ್ಗದ ಮಿಥಿನ್ ಕೈನೋವಿನಲ್ಲಿಯೇ ಒಂದು ವರ್ಷ ಕಳೆದಿದ್ದ.

ರಾಡ್‌ ತೆಗೆದು ಕೈನೋವು ಮಾಗುತ್ತಿದ್ದಂತೆ ಅಂಗಳಕ್ಕೆ ಇಳಿಯಲು ಈತ ಸಜ್ಜಾದ. ಪ್ರೋತ್ಸಾಹದ ಕೊರತೆ ಜೊತೆ ದೈಹಿಕವಾಗಿ ಸದೃಢನಾಗಬೇಕಾದ ಸವಾಲೂ ಇತ್ತು. ವೈದ್ಯರು ನೀಡಿದ ಎಚ್ಚರಿಕೆಯೂ ಮನಸ್ಸಿನಲ್ಲಿತ್ತು.

ಭಾರ ಎತ್ತುವಂತಿಲ್ಲ. ಆಡುವಾಗ ಕೈ ಎಳೆದಾಡಿದರೆ ಮತ್ತೆ ಅದೇ ಸ್ಥಿತಿಗೆ ಮರಳಬಹುದು ಎಂಬ ಅಳುಕು. ಹೀಗಾಗಿ ಕೆಲವು ತಿಂಗಳು ಭಾರ ಎತ್ತದೆ ಕೆಲ ಫಿಟ್‌ನೆಸ್‌‌ ಕಡೆ ಗಮನಕೊಟ್ಟರು.

ಫಲ ಕೊಟ್ಟ ಧೈರ್ಯ

ಫಿಟ್‌ ಆಗಿ ಅಂಗಳಕ್ಕೆ ಕಾಲಿಟ್ಟ ಅವರಿಗೆ ಕೋಚ್‌ ನೀಡಿದ ಸಲಹೆ– ‘ನಿನ್ನ ಮೇಲೆ ನಿನಗೆ ನಂಬಿಕೆ ಇದ್ದರೆ ಆಟ ಮುಂದುವರೆಸು’ ಎಂದು. ಮತ್ತೆ ಆರಂಭವಾದ ಈ ಪಯಣದಲ್ಲಿ ಅವರಿಗೆ ಜೊತೆಯಾದವರು ಕೋಚ್‌ಗಳಾದ ಕೃಷ್ಣಾನಂದ ರಾವ್ ಮುಂಡಾಜೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್‌ ಮತ್ತು ಸಂದೇಶ್‌ ಪೂಂಜ ಅವರು.

2017ರಲ್ಲಿ ಜೂನಿಯರ್‌ ರಾಷ್ಟ್ರೀಯ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆದ ಅವರು ಉತ್ತಮ ಪ್ರದರ್ಶನದಿಂದ ಗಮನಸೆಳೆದರು. ಇಲ್ಲಿನ ಪ್ರದರ್ಶನದಿಂದ ಮಿಥಿನ್‌ಗೆ ಪ್ರೊ ಕಬಡ್ಡಿ ಆಯ್ಕೆಯ ಕ್ಯಾಂಪ್‌ ಬಾಗಿಲು ತೆರೆಯಿತು.

3,500 ಆಟಗಾರರಿದ್ದ ಕ್ಯಾಂಪ್‌ನಿಂದ 29 ಆಟಗಾರರು ಮಾತ್ರ ಆಯ್ಕೆಯಾಗಿದ್ದರು. ಅದರಲ್ಲಿ ಮಿಥಿನ್‌ ಒಬ್ಬರು. ಅಲ್ಲಿಂದ ಮುಂಬೈನಲ್ಲಿ ತರಬೇತಿ ಪಡೆದರು. ಹೀಗೆ ಅವಕಾಶ ದೊರಕಿದ್ದು, ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಓದುವಾಗ. 2018ರ ಪ್ರೊ ಕಬಡ್ಡಿಟೂರ್ನಿಯಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದಪರ ಆಡಲು ಅವಕಾಶ ಪಡೆದರು.

2018ರ ಜೂನ್‌ನಲ್ಲಿ ನಡೆದ ಹರಾಜು ವೇಳೆ ಅವರನ್ನು ಬೆಂಗಾಲ್‌ ವಾರಿಯರ್ಸ್‌ ಖರೀದಿಸಿತ್ತು. ಆ ಆರನೇ ಆವೃತ್ತಿಯಲ್ಲಿ ಅವರು ಮೂರು ಪಂದ್ಯಗಳನ್ನು ಆಡುವ ಅವಕಾಶವನ್ನೂ ಗಳಿಸಿದರು. ಒಟ್ಟು 10 ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಕೆಲವು ವರ್ಷ ಹಿಂದೆ ಬಲಗೈ ನೋವಿನಿಂದ ಬಳಲಿದ್ದ ಮಿಥಿನ್‌ ಅದೇ ಕೈಯನ್ನು ಆಭಿಮಾನಿಗಳತ್ತ ಬೀಸಿಕೋರ್ಟ್‌ಗೆ ಇಳಿದಿದ್ದರು.

ಎಡಗೈ ಗಾಯದಿಂದ ಒಂದು ವರ್ಷ ವಿರಾಮ ಪಡೆದಿರುವ ಈ ಆಟಗಾರ ಮತ್ತೆ ಅಂಗಳಕ್ಕೆ ಇಳಿಯುವ ವಿಶ್ವಾಸ ಹೊಂದಿದ್ದಾರೆ. ಕರಾವಳಿಯ ಯುವ ಆಟಗಾರರಿಗೆ ಸ್ಫೂರ್ತಿಯಾಗಿ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT