ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳೆಯರ ಕಬಡ್ಡಿ ಟೂರ್ನಿ: ಸೆಮಿಫೈನಲ್‌ ಲೀಗ್‌ನಲ್ಲಿ ಎರಡು ಜಯ
Last Updated 24 ಡಿಸೆಂಬರ್ 2022, 4:33 IST
ಅಕ್ಷರ ಗಾತ್ರ

ಮಂಗಳೂರು: ಸಂಘಟಿತ ಆಟ ಪ್ರದರ್ಶಿಸಿದ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಕಬಡ್ಡಿ ಪಟುಗಳು ಚೆನ್ನೈನ ಎಎಂಇಟಿ ಆವರಣದಲ್ಲಿ ಮಿಂಚಿದರು. ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳೆಯರ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿವಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಗುರುವಾರ ಮುಕ್ತಾಯಗೊಂಡ ಟೂರ್ನಿಯ ಸೆಮಿಫೈನಲ್ ಲೀಗ್‌ನಲ್ಲಿ ಮಂಗಳೂರು ವಿವಿ ಎರಡು ಜಯ ಮತ್ತು ಒಂದು ಡ್ರಾದೊಂದಿಗೆ 5 ಪಾಯಿಂಟ್ ಕಲೆ ಹಾಕಿತು. ಈ ಮೂಲಕ ಸತತ ಎರಡನೇ ಬಾರಿ ಅಖಿಲ ಭಾರತ ಅಂತರ ವಿವಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು. ಕೊಯಮತ್ತೂರಿನ ಭಾರತಿಯಾರ್‌ ವಿವಿ ರನ್ನರ್ ಅಪ್ ಆದರೆ ಕಾರೈಕುಡಿಯ ಅಳಗಪ್ಪ ವಿವಿ ಮೂರನೇ ಸ್ಥಾನ ಗಳಿಸಿತು.

ಕಳೆದ ಬಾರಿ ಚಾಂಪಿಯನ್ ಆಗಿದ್ದರಿಂದ ಮಂಗಳೂರು ವಿವಿ ಕ್ವಾರ್ಟರ್ ಫೈನಲ್‌ಗೆ ನೇರ ಅರ್ಹತೆ ಪಡೆದುಕೊಂಡಿತ್ತು. ಎಂಟರ ಘಟ್ಟದ ಪಂದ್ಯದಲ್ಲಿ ತಂಡ ಬೆಂಗಳೂರು ವಿವಿ ವಿರುದ್ಧ 46–17ರಲ್ಲಿ ಜಯ ಸಾಧಿಸಿತು.

ಸೆಮಿಫೈನಲ್ ಲೀಗ್‌ ಪಂದ್ಯಗಳಲ್ಲಿ ಅಮೋಘ ರೇಡಿಂಗ್‌ ಮೂಲಕ ಅರ್ಚನಾ ಮತ್ತು ಆಲ್‌ರೌಂಡ್ ಆಟದ ಮೂಲಕ ಬೃಂದಾ ಮಿಂಚಿದರು. ಮೊದಲ ಪಂದ್ಯದಲ್ಲಿ ಅಳಗಪ್ಪ ವಿವಿಯನ್ನು 40–29ರಲ್ಲಿ ಮಣಿಸಿದ ತಂಡ ಎರಡನೇ ಪಂದ್ಯದಲ್ಲಿ ದಿಂಡಿಗಲ್‌ನ ಮದರ್ ಥೆರೆಸಾ ವಿವಿ ಜೊತೆ 26–26ರಲ್ಲಿ ಡ್ರಾ ಸಾಧಿಸಿತು. ಭಾರತಿಯಾರ್ ವಿವಿ ಎದುರಿನ ನಿರ್ಣಾಯಕ ಮೂರನೇ ಪಂದ್ಯ ಅತ್ಯಂತ ರೋಚಕವಾಗಿತ್ತು. ಮೊದಲಾರ್ಧ ಮುಗಿದಾಗ ಉಭಯ ತಂಡಗಳು 13–13 ಪಾಯಿಂಟ್‌ಗಳ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ ಪಟ್ಟು ಬಿಡದೆ ಆಡಿದ ಮಂಗಳೂರು ವಿವಿ ರೋಚಕವಾಗಿ ಪಂದ್ಯ ಗೆದ್ದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT