ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ನಾಡಲ್ಲಿ ಕಬಡ್ಡಿ... ಕಬಡ್ಡಿ....

Last Updated 27 ಮೇ 2019, 19:30 IST
ಅಕ್ಷರ ಗಾತ್ರ

ಮೈಸೂರು:ನಾಡಕುಸ್ತಿಗೆ ಹೆಸರು ಪಡೆದಿರುವ ಸಾಂಸ್ಕೃತಿಕ ನಗರಿಯಲ್ಲಿ ಈಗ ಕಬಡ್ಡಿ ಕಲರವ. ರಾತ್ರಿಯಾಗುತ್ತಿದ್ದಂತೆಯೇ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ... ಕಬಡ್ಡಿ... ಎಂಬ ಸದ್ದು ಮಾರ್ದನಿಸುತ್ತದೆ.

ನ್ಯೂ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾ ವತಿಯಿಂದ ಆಯೋಜನೆಯಾಗಿರುವ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನ (ಐಐಪಿಕೆಎಲ್‌) ಪಂದ್ಯಗಳು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಕಬಡ್ಡಿ ಪ್ರೇಮಿಗಳ ಮನಗೆದ್ದಿದೆ.

ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ನಡೆಯುತ್ತಿರುವ ಈ ಲೀಗ್‌ನಲ್ಲಿ ಎಂಟು ತಂಡಗಳು ಪೈಪೋಟಿ ನಡೆಸುತ್ತಿವೆ. ಲೀಗ್‌ನ ಮೊದಲ ಹಂತದ ಪಂದ್ಯಗಳು ಪುಣೆಯಲ್ಲಿ ನಡೆದಿದ್ದವು. ಇದೀಗ ಎರಡನೇ ಲೆಗ್‌ನ ಪಂದ್ಯಗಳು ಮೈಸೂರಿನಲ್ಲಿ ನಡೆಯುತ್ತಿವೆ. ಮೇ 24ರಿಂದ ಆರಂಭವಾಗಿರುವ ಟೂರ್ನಿ 29ರ ವರೆಗೆ ಮುಂದುವರಿಯಲಿದೆ.

ಮೈಸೂರಿನಲ್ಲಿ ದೊಡ್ಡ ಮಟ್ಟಿನ ಕಬಡ್ಡಿ ಟೂರ್ನಿಯೊಂದು ನಡೆಯುತ್ತಿರುವುದು ಇದೇ ಮೊದಲು. ಪುಣೆ ಫ್ರೈಡ್‌, ಪಾಂಡಿಚೇರಿ ಪ್ರಿಡೇಟರ್ಸ್, ಬೆಂಗಳೂರು ರಿನೋಸ್‌, ಹರಿಯಾಣ ಹೀರೋಸ್, ದಿಲೇರ್‌ ದಿಲ್ಲಿ. ಚೆನ್ನೈ ಚಾಲೆಂಜರ್ಸ್, ಮುಂಬೈ ಚೆ ರಾಜೆ, ತೆಲುಗು ಬುಲ್ಸ್ ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸುತ್ತಿವೆ.

ಐಐಪಿಕೆಎಲ್‌ಗೆ ಕಡಿಮೆ ಅವಧಿಯಲ್ಲೇ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಮೈಸೂರಿನಲ್ಲಿ ಕಬಡ್ಡಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮುಂದಿನ ದಿನಗಳಲ್ಲಿ ಈ ಲೀಗ್‌ ಇನ್ನಷ್ಟು ಎತ್ತರಕ್ಕೇರಲಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ವಿ.ಪ್ರಸಾದ್‌ ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪ್ರೊ.ಕಬಡ್ಡಿ ಟೂರ್ನಿಯ ಪಂದ್ಯಗಳನ್ನು ಟಿ.ವಿಯಲ್ಲಿ ವೀಕ್ಷಿಸಿದ್ದೇನೆ. ಐಐಪಿಕೆಎಲ್‌ ಪಂದ್ಯಗಳು ಮೈಸೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಇಲ್ಲಿನ ಆಟದ ಗುಣಮಟ್ಟ ಪ್ರೊ.ಕಬಡ್ಡಿ ಲೀಗ್‌ಗೆ ಸರಿಸಾಟಿಯಾಗದು. ಆದರೂ ಅಂತರರಾಷ್ಟ್ರೀಯ ಗುಣಮಟ್ಟದ ಟೂರ್ನಿಯ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗಿರುವುದು ರೋಚಕ ಅನುಭವ ನೀಡಿದೆ’ ಎಂಬುದು ಕಬಡ್ಡಿ ಅಭಿಮಾನಿ ಸಂತೋಷ್‌ ಅವರ ಹೇಳಿಕೆ.

ಸಂತೋಷ್‌ ಅವರು ಗೆಳೆಯರ ಜತೆ ಟೂರ್ನಿಯ ಎಲ್ಲ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಪ್ರತಿದಿನ ಪಂದ್ಯಗಳಿಗೆ ಮುನ್ನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೋಡುಗರ ಮನಸೂರೆಗೊಂಡಿದೆ.

ಪ್ರವಾಸಿ ತಾಣಗಳಿಗೆ ಭೇಟಿ: ಎಂಟು ತಂಡಗಳ 120ಕ್ಕೂ ಅಧಿಕ ಆಟಗಾರರು ಅಲ್ಲದೆ ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳು ಒಳಗೊಂಡಂತೆ 200ಕ್ಕೂ ಅಧಿಕ ಮಂದಿ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ಈ ಬಾರಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ವಿವಿಧ ತಂಡಗಳಲ್ಲಿ ಉತ್ತರ ಭಾರತದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಟಗಾರರಲ್ಲಿ ಬಹುತೇಕ ಮಂದಿ ಇದೇ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ಆಟಗಾರರು ಬಿಡುವಿನ ಅವಧಿಯಲ್ಲಿ ನಗರದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ.

‘ಮೈಸೂರು ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ್ದೇವೆ. ಬಿಡುವು ಸಿಕ್ಕರೆ ಚಾಮುಂಡಿಬೆಟ್ಟಕ್ಕೆ ಹೋಗಬೇಕು. ಮೈಸೂರು ಸುಂದರ ಹಾಗೂ ಸ್ವಚ್ಛ ನಗರಿ. ಇಲ್ಲಿಂದ ಮಧುರ ನೆನಪುಗಳನ್ನು ಕಟ್ಟಿಕೊಂಡು ತೆರಳುತ್ತೇವೆ’ ಎಂಬುದು ಹರಿಯಾಣ ಹೀರೋಸ್ ತಂಡದ ಆಟಗಾರ ಸಾಗರ್‌ ಸಿಂಗ್‌ ಅವರ ಮಾತು.

ಒಟ್ಟಿನಲ್ಲಿ ಐಐಪಿಕೆಎಲ್‌ ಟೂರ್ನಿ ನಗರದ ಕಬಡ್ಡಿ ಪ್ರೇಮಿಗಳ ಜತೆಗೆ ಆಟಗಾರರಿಗೂ ಸುಂದರ ನೆನಪುಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT