ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಬೆಂಗಳೂರು ತಂಡಕ್ಕೆ ಜಯ

Last Updated 17 ಮೇ 2019, 19:38 IST
ಅಕ್ಷರ ಗಾತ್ರ

ಪುಣೆ: ಬೆಂಗಳೂರು ರೈನೋಸ್‌ ತಂಡ ಇಲ್ಲಿ ನಡೆಯುತ್ತಿರುವ ಇಂಡೊ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಹರಿಯಾಣ ಹೀರೋಸ್‌ ವಿರುದ್ಧ ಗೆದ್ದಿತು.

ಬಾಳೆವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಅರ್ಮುಗಂ ಅವರ ಮಿಂಚಿನ ಆಟದಿಂದ ರೈನೋಸ್‌ ತಂಡ 47-41 ಅಂಕಗಳಿಂದ ಹೀರೋಸ್‌ ಪಡೆಯ ಹೆಡೆಮುರಿ ಕಟ್ಟಿತು.

ಪಂದ್ಯದಲ್ಲಿ ರೈನೋಸ್‌ ತಂಡದ ಪರ ಆಲ್‌ರೌಂಡ್‌ ಆಟವಾಡಿದ ವಿಪಿನ್‌ ಕುಮಾರ್‌ (8) ಪಂದ್ಯ ಶ್ರೇಷ್ಠ ಗೌರವ ಪಡೆದರೆ, ಭರ್ಜರಿ ರೇಡ್‌ಗಳೊಂದಿಗೆ ಹೀರೋಸ್‌ ತಂಡದ ಭದ್ರ ಕೋಟೆಗೆ ಕನ್ನಹಾಕಿದ ಅರ್ಮುಗಂ 14 ಅಂಕಗಳನ್ನು ಗಳಿಸಿ ಪಂದ್ಯದ ರೇಡರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರೈನೋಸ್‌ಗೆ ಡಿಫೆನ್ಸ್‌ನಲ್ಲಿ ಆಸರೆಯಾದ ಜಿ. ಅಂಬೇಶ್ವರನ್‌ (6) ಶ್ರೇಷ್ಠ ಡಿಫೆಂಡರ್‌ ಟ್ರೋಫಿಗೆ ಭಾಜನರಾದರು. ಅವರಿಗೆ ಮನೋಜ್‌ (5) ಉತ್ತಮ ಸಾಥ್‌ ನೀಡಿದರು.

ಹೀರೋಸ್‌ ಪರ ವಿಕಾಸ್‌ ಖಾತ್ರಿ (6) ಮತ್ತು ಜಗದೀಪ್‌ ನರ್ವಾಲ್‌ (4) ಗಮನ ಸೆಳೆದರು.

ಈ ಗೆಲುವಿನೊಂದಿಗೆ ಬೆಂಗಳೂರು ತಂಡ 'ಎ' ಝೋನ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡರೆ, ಹೀರೋಸ್‌ ತಂಡ 4ನೇ ಹಾಗೂ ಕೊನೆಯ ಸ್ಥಾನದಲ್ಲಿದೆ.

ಪಂದ್ಯದ ಆರಂಭದಿಂದಲೂ ಸಮಬಲದ ಹೋರಾಟ ಮೂಡಿ ಬಂದಿತು.

ಮೊದಲ ಕ್ವಾರ್ಟರ್‌ನ ಹತ್ತು ನಿಮಿಷಗಳ ಆಟದಲ್ಲಿ ಇತ್ತಂಡಗಳು ತಲಾ 11 ಅಂಕಗಳನ್ನು ಹಂಚಿಕೊಂಡವು. ರೈನೋಸ್‌ ತಂಡ, 2ನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟವಾಡಲಾರಂಭಿಸಿತು.

ಸ್ಟಾರ್ ರೇಡರ್‌ ಆರ್ಮುಗಂ ಮತ್ತು ವಿಪಿನ್‌ ಮಲಿಕ್‌ ಅವರ ಮಿಂಚಿನ ದಾಳಿಗಳೊಂದಿಗೆ ಮೇಲುಗೈ ಪಡೆದ ರೈನೋಸ್‌ 13-7 ಅಂಕಗಳಿಂದ ಪ್ರಾಬಲ್ಯ ಮೆರೆದು 24-18 ಅಂಕಗಳ ಮುನ್ನಡೆ ಗಳಿಸಿತು.

ದ್ವಿತೀಯಾರ್ಧದಲ್ಲಿ ರೈನೋಸ್‌ ಪ್ರಾಬಲ್ಯ: ಎರಡನೇ ಕ್ವಾರ್ಟರ್‌ನಲ್ಲಿ ಸಿಕ್ಕ ಉತ್ತಮ ಮುನ್ನಡೆಯ ಲಾಭ ಪಡೆದು ಎದುರಾಳಿಯ ಮೇಲೆ ಒತ್ತಡ ಹಾಕಿದ ಬೆಂಗಳೂರು ರೈನೋಸ್‌ ತಂಡ, ಮೂರನೇ ಕ್ವಾರ್ಟರ್‌ನಲ್ಲೂ 13-7 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿ 37-25ಕ್ಕೆ ಮುನ್ನಡೆಯನ್ನು ವಿಸ್ತರಿಸಿತು. ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ ರೈನೋಸ್‌ ತಂಡ ಎಚ್ಚರಿಕೆಯ ಆಟವಾಡಿ ಮುನ್ನಡೆ ಕಾಯ್ದುಕೊಳ್ಳಲು ಪ್ರಯತ್ನಿಸಿದರೆ,

ಸೋಲಿನ ಅಂತರ ತಗ್ಗಿಸುವ ಪ್ರಯತ್ನ ನಡೆಸಿದ ಹೀರೋಸ್‌ ಸತತ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೂ ಏಟಿಗೆ ಎದುರೇಟು ನೀಡುತ್ತಲೇ ಮುನ್ನಡೆ ಕಾಯ್ದುಕೊಂಡ ಬೆಂಗಳೂರು ತಂಡ ಗೆಲುವು ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT