ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳದ ಕೋಣವೂ... ವೇಗದ ಓಟವೂ...

Last Updated 22 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕೋಣ, ಹಸು, ಯಾಕ್‌ ಎಲ್ಲವೂ ಮೂಲತಃ ಕಾಡುಪ್ರಾಣಿಗಳು. ಅಟ್ಟಿಸಿಕೊಂಡು ಬರುವ ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುವಂತೆ ಅವುಗಳ ದೇಹದಾರ್ಢ್ಯವಿದೆ.

ಉಡುಪಿಯಿಂದ ಕಾಸರಗೋಡಿನ ತನಕದ ತುಳುನಾಡಿನಲ್ಲಿ ಈಗ ಕಂಬಳದ್ದೇಅಬ್ಬರ. ಅಲ್ಲಿನ ಗತ್ತು, ಗೈರತ್ತು, ಸ್ಪರ್ಧೆ, ಸಿದ್ಧತೆಗಳದ್ದು ಬೇರೆಯೇ ಲೋಕ. ದಷ್ಟಪುಷ್ಟ ಕೋಣಗಳು, ಓಡಿಸುವವರ ಮೈಕಟ್ಟು, ಕೋಣವನ್ನು ಕರೆತರುವ ಕೊಂಬು–ಕಹಳೆಯ ಅಬ್ಬರ, ವಿಮಾನ ನಿಲ್ದಾಣಗಳಿಂದ ನೇರವಾಗಿ ಐಷಾರಾಮಿ ಕಾರುಗಳ ಮೂಲಕ ಕಂಬಳಕ್ಕೆ ಬಂದಿಳಿಯುವ ಕೋಣಗಳ ಮಾಲೀಕರು, ಹೆಗಲಿಗೆ ಶಾಲು, ತಲೆಗೆ ಮುಂಡಾಸು, ಕೈಯಲ್ಲೊಂದು ಬಾರುಕೋಲು ಹಿಡಿದ ಆಯೋಜಕರು!

ಯಾವ ಕಂಬಳವನ್ನೂ ಬಿಡದೆ ಊರೂರು ಸುತ್ತಿ ವೀಕ್ಷಿಸುವ ವಯೋವೃದ್ಧರ ಬೀಡಾ– ಬೀಡಿ ಚರ್ಚೆ, ಯುವಕರ ಹುಮ್ಮಸ್ಸು–ಕನಸು, ಜಾತ್ರೆ–ಉರೂಸ್– ಸಾಂತ್‌ಮಾರಿಯ ನಿನಾದ ಹೊಮ್ಮಿಸುವ ಪೀಪಿ, ಬಲೂನ್‌ಗಳ ಬದಿಯಲ್ಲೇ ಚರುಂಬುರಿ, ಪೆಲತ್ತರಿ, ಪುಳಿಂಕೋಟೆ ತಿನ್ನುತ್ತಾ ಕಂಬಳ ವೀಕ್ಷಿಸುವ ಸಹಸ್ರಾರು ಜನರ ಸಂಭ್ರಮ ನೋಡಿದರೆ, ‘ಉಸೇನ್‌ ಬೋಲ್ಟ್‌’ ಕೂಡ ಆಶ್ಚರ್ಯಪಡುವುದು ನಿಶ್ಚಿತ.

ಇಂತಹ ಕೃಷಿ ಪರಂಪರೆಯ ‘ಕಂಬಳ’ದ ಕೇಂದ್ರ ಬಿಂದುವೇ ಜೋಡಿ ಕೋಣಗಳು. ಅವು ಓಡಿದರೆ ಮಾತ್ರ ದಾಖಲೆ, ಸೋಲು–ಗೆಲುವು, ಸಂಭ್ರಮ. ‘ಅಸಹಕಾರ’ ತೋರಿದರೆ ನಿರಾಶೆ. ಅವುಗಳನ್ನು ಸಾಕುವುದೂ ಒಂದು ಸಾಹಸವೇ. ಅದೊಂದು ನಂಬಿಕೆ, ನಲ್ಮೆ, ಭಾವುಕತೆ ಹಾಗೂ ಪ್ರತಿಷ್ಠೆಯೂ ಹೌದು.

ಕರಾವಳಿಯಲ್ಲೊಂದು ಮಾತಿದೆ– ‘ಯಜಮಾನನ ಬಳಿ ಬೆನ್ಜ್‌ ಕಾರು ಇರಬಹುದು, ಆದರೆ ಕಂಬಳದ ಕೋಣ ಸಾಕಲು ಸಾಧ್ಯವೇ?’ ಎನ್ನುವುದೇ ಆ ಮಾತು. ಪ್ರತಿವರ್ಷ ಕರಾವಳಿಯ ಉಭಯ ಜಿಲ್ಲೆಗಳಲ್ಲಿ 22 ಪ್ರತಿಷ್ಠಿತ ಕಂಬಳಗಳು ನಡೆಯುತ್ತವೆ. ವರ್ಷದಲ್ಲಿ 3–4 ತಿಂಗಳು ಮಾತ್ರ ಕಂಬಳದ ಸೀಸನ್‌.ನವೆಂಬರ್ ಅಂತ್ಯದಿಂದ ಮಾರ್ಚ್– ಏಪ್ರಿಲ್‌ವರೆಗೆ. ಈ ಕಂಬಳಗಳಲ್ಲಿ ಸ್ಪರ್ಧೆಗೆ ಇಳಿಸಲು ಸಾಕುವ ಒಂದು ಜೋಡಿ ಕೋಣದ ನಿರ್ವಹಣೆಗೆ ವರ್ಷಕ್ಕೆ ಬರೋಬ್ಬರಿ ₹ 10 ಲಕ್ಷ ಖರ್ಚಾಗುತ್ತದೆ. ಕರಾವಳಿಯಲ್ಲಿ ಸುಮಾರು 250 ಜೋಡಿ ಕೋಣಗಳನ್ನು ಸಾಕುವ ಮನೆತನಗಳಿವೆ. ಇವುಗಳಲ್ಲಿ ಗುತ್ತು ಮನೆತನಗಳ ಕಾರುಬಾರು ಹೆಚ್ಚು.

‌ಈ ಜೋಡಿ ಕೋಣಗಳೂ ಸುಮಾರು ₹5 ರಿಂದ ₹50 ಲಕ್ಷ ತನಕ ಬೆಲೆ ಬಾಳುತ್ತವೆ. ಅವುಗಳನ್ನು ಸಾಕುವುದರ ಬಗ್ಗೆಯೂ ಆಡುಮಾತೊಂದಿದೆ. ‘ಮಿತ್ತ್ ದೀಂಡ ಕಕ್ಕೆ ಕೊನೋವು, ತಿರ್ತ್‌ ದೀಂಡ ಪಿಜಿನ್ ಕೊನೊವು’ (ಮೇಲಿಟ್ಟರೆ ಕಾಗೆ ಕೊಂಡೊಯ್ದೀತು, ಕೆಳಗಿಟ್ಟರೆ ಇರುವೆ ಕೊಂಡೊಯ್ಯಬಹುದು) ಅಂದರೆ, ಮಗುವಿನಂತೆ ಜತನದಿಂದ ಕೋಣಗಳನ್ನು ಸಾಕಬೇಕು. ಅದಕ್ಕೂ ಎಷ್ಟೊಂದು ಸಿಬ್ಬಂದಿ. ಸಾಕುವವ, ಓಟಗಾರ, ಕರೆಯಲ್ಲಿ ಬಿಡುವವರು, ಕೊಂಡೊಯ್ಯುವವರು, ಕರೆದೊಯ್ಯಲು ಮಿನಿಲಾರಿ– ಹೀಗೆ ಪ್ರತಿ ಕಂಬಳಕ್ಕೆ ಕನಿಷ್ಠ ₹ 25 ಸಾವಿರ ಖರ್ಚು ಇದೆ. ಅಲ್ಲಿಯೂ, ‘ಬೊಂಬೈವಾಲಾ’ರ (ಮುಂಬೈಗೆ ಹೋಗಿ ಯಶಸ್ಸು ಕಂಡ ಉದ್ಯಮಪತಿ) ಆಡಂಬರವೇ ಬೇರೆ, ಸಾಮಾನ್ಯರ ಕೈಗೆಟುಕದ್ದು.

ಕಂಬಳದಲ್ಲಿ ಸರಾಸರಿ 3 ವರ್ಷದಿಂದ 15 ವರ್ಷ ವಯಸ್ಸಿನ ಕೋಣಗಳು ಓಡುತ್ತವೆ. ಈಗಲೂ ಓಡುತ್ತಿರುವ 19 ವರ್ಷ ವಯಸ್ಸಿನ ಕೆಲವು ಹಿರಿಯ ಕೋಣಗಳೂ ಇವೆ.

‘ಕಂಬಳಕ್ಕಾಗಿ ಸಾಕುವವರು, ಕೃತಕ ಗರ್ಭಧಾರಣೆಯಲ್ಲಿ ಜನಿಸಿದ ಕರುಗಳನ್ನು ಖರೀದಿಸಲು ಇಷ್ಟಪಡುವುದಿಲ್ಲ. ಬೆಳಗಾವಿ, ಹಾಸನ ಮತ್ತಿತರ ಭಾಗದಲ್ಲಿ ದನ ಮೇಯಿಸುವವರು ಸಾಕುವ, ಪ್ರಕೃತಿ ಸಹಜ ಪ್ರಕ್ರಿಯೆಯಲ್ಲಿ ಹುಟ್ಟಿದ ಎಮ್ಮೆಯ ಕರುವನ್ನು ತಂದು ಸಾಕುತ್ತಾರೆ. ಆ ಕರುವಿನ ಕಣ್ಣು, ಹಣೆ, ಕಾಲಿನ ಉದ್ದ, ನೀಳಕೇಶದಂತ ಬಾಲ, ನೋಟ, ನಡಿಗೆಯ ಪಥ, ಛಂಗನೆ ಓಡುವ ಸಾಮರ್ಥ್ಯ, ಮೈ, ಬಣ್ಣ ಮತ್ತಿತರ ಅಂಶಗಳನ್ನು ಗಮನಿಸುತ್ತಾರೆ’ ಎನ್ನುವುದು ಲೋಕೇಶ್ ಸಾಲಿಯಾನ್ ಗಂಡೂರಿ ಅವರ ಅನುಭವದ ಮಾತು.

ಮೂರು ವರ್ಷ ಮೇಲ್ಪಟ್ಟ ಕೋಣವನ್ನು ಖರೀದಿಸುವಾಗ ಕಳ (ಕಂಬಳ ಮಾದರಿ ಟ್ರ್ಯಾಕ್) ಹಾಗೂ ‘ಗದ್ದೆಯಲ್ಲಿ ಹೂಡಿ’ ಪರೀಕ್ಷೆಗೆ ಒಳಪಡಿಸುತ್ತಾರೆ. ಇವೆಲ್ಲ ಕಿರಿಯ ವಿಭಾಗದ ಕೋಣಗಳಾದರೆ, ಎಂಟು ಹಲ್ಲುಗಳು ಇದ್ದರೆ ಹಿರಿಯ ವಿಭಾಗಕ್ಕೆ ಸೇರುತ್ತವೆ.

ಈ ಕೋಣವನ್ನು ಕಂಬಳಕ್ಕೆ ಹೊರಡಿಸುವುದೂ ಒಂದು ವಿಧಿಬದ್ಧ ಸಂಭ್ರಮ. ಕರುವಿಗೆ ಕುರ್ದಿ ನೀರು (ಅರಿಸಿನ, ಸುಣ್ಣ ಬೆರೆಸಿದ ಪವಿತ್ರ ಜಲ) ಪ್ರೋಕ್ಷಣೆ, ಆರತಿ ಮಾಡುತ್ತಾರೆ. ಹಟ್ಟಿ, ಮನೆ ಹಾಗೂ ದೈವಸ್ಥಾನದ ಮುಂದೆ ಪೂಜೆ ಮಾಡಿಸಿ, ಪ್ರಾರ್ಥಿಸಿಯೇ ಮುಂದೆ ಹೆಜ್ಜೆ ಇಡುತ್ತಾರೆ. ಇದು ಪ್ರತಿ ಕಂಬಳಕ್ಕೆ ಹೊರಡುವಾಗಲೂ ಇರುತ್ತದೆ. ದೇವರ ಗದ್ದೆಯ ಕಂಬಳವಾದರೆ ಯಜಮಾನ, ಓಟಗಾರ, ಸಹಚರರೂ ವ್ರತಾಚರಣೆಯಲ್ಲಿ ಇರುವುದುಂಟು.

ಆರೈಕೆ–ಆಹಾರ

ಈ ಕೋಣಗಳ ಆರೈಕೆಯೂ ‘ಸ್ಟಾರ್’ ಮಾದರಿಯಲ್ಲೇ ಇರುತ್ತವೆ. ಋತುಮಾನಕ್ಕೆ ಅನುಗುಣವಾಗಿ ಆಹಾರ ಹಾಗೂ ಆರೈಕೆ. ಕಂಬಳದ ಅವಧಿಯಲ್ಲಿ (ನವೆಂಬರ್– ಏಪ್ರಿಲ್) ಬಿಸಿ ಆಹಾರ ಹಾಗೂ ದೈಹಿಕ ಕಸರತ್ತು. ಮಳೆಗಾಲದಲ್ಲಿ ತಂಪಾದ ಆಹಾರ ಹಾಗೂ ವಿಶ್ರಾಂತಿ ನೀಡುತ್ತಾರೆ.

ಆರೈಕೆಗಾಗಿ ಒಂದಿಬ್ಬರು ಕೆಲಸಗಾರರೂ ಕಾಯಂ. ನಸುಕಿನಲ್ಲೇ ಅವುಗಳಿಗೆ ಬೈಹುಲ್ಲು ಹಾಕಿ ನೀರು ನೀಡಿ, ಬಳಿಕ ಎಳೆ ಬಿಸಿಲಿಗಾಗಿ ಹೊರಗೆ ತಂದು ಕಟ್ಟುತ್ತಾರೆ. ಆ ಬಳಿಕ ಮೊಳಕೆ ಬಂದ ಅಥವಾ ಸಾಮಾನ್ಯ ಹುರುಳಿಯನ್ನು ಬೇಯಿಸಿ ನೀಡುತ್ತಾರೆ. ಕಂಬಳದ ಅವಧಿಯಲ್ಲಿ ಅದಕ್ಕೆ ಕ್ಯಾರೆಟ್, ಧಾನ್ಯಗಳು ಇತ್ಯಾದಿ ಪೌಷ್ಟಿಕಾಂಶಗಳನ್ನು ಬೆರೆಸುತ್ತಾರೆ. ದೇಹದ ಉಷ್ಣಾಂಶ ಕಾಪಾಡಲು ಸ್ವಲ್ಪ ಎಳ್ಳೆಣ್ಣೆ ನೀಡುವುದೂ ಇದೆ. ಬಳಿಕ ಅವುಗಳನ್ನು ಸ್ನಾನ ಮಾಡಿಸಿ ವಾಪಸ್ ಕೊಟ್ಟಿಗೆಗೆ ತಂದು ಕಟ್ಟುತ್ತಾರೆ. ಅದೂ ಉಗುರು ಬಿಸಿ ನೀರಿನ ಸ್ನಾನ.

ಅಷ್ಟರೊಳಗೆ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿರುತ್ತಾರೆ. ಕೊಟ್ಟಿಗೆಗೆ ಕೆಲವರು ಫ್ಯಾನ್ ಅಳವಡಿಸಿದರೆ, ಕೆಲವೆಡೆ ಕೋಣಗಳ ಸ್ನಾನಕ್ಕಾಗಿಯೇ ಈಜುಕೊಳಗಳನ್ನೂ ನಿರ್ಮಿಸಿದ್ದಾರೆ. ಈಗೀಗ ಭಾರಿ ಬೇಸಿಗೆಯಲ್ಲಿ ಕೂಲರ್ ಇಡುವವರೂ ಇದ್ದಾರೆ.

ಹೀಗೆ ಪ್ರತಿನಿತ್ಯ ಎರಡು ಹೊತ್ತು ಹೊಟ್ಟೆ ತುಂಬಾ ಬೇಯಿಸಿದ ಹುರುಳಿ. ಜತೆಗೆ ಬೈಹುಲ್ಲು, ಧಾರಾಳ ನೀರು ನೀಡುತ್ತಾರೆ. ಕೆಲವೊಮ್ಮೆ ತೌಡು ಮಿಶ್ರಿತ ಭೋಜನವೂ ಇರುತ್ತದೆ. ಇನ್ನು ಬೇಸಿಗೆಯಲ್ಲಿ ಕಲ್ಲಂಗಡಿ, ಕುಂಬಳಕಾಯಿ ಮತ್ತಿತರ ತಂಪು ಹಣ್ಣುಗಳನ್ನೂ ನೀಡುತ್ತಾರೆ. ಬೊಜ್ಜು ಬರಬಾರದು ಎಂದು ಎಣ್ಣೆ, ಗಿಡಮೂಲಿಕೆ ಔಷಧಿಗಳನ್ನು ನೀಡುತ್ತಾರೆ.

ಪ್ರತಿದಿನ ಸ್ನಾನದ ಬಳಿಕ ತೆಂಗಿನ ಎಣ್ಣೆಯಿಂದ ಕೋಣಕ್ಕೆ ಮಸಾಜ್‌ ನಡೆಯುತ್ತದೆ. ಚರ್ಮದ ಕಾಂತಿ ಕಾಯ್ದುಕೊಳ್ಳುವುದು ಇದರ ಉದ್ದೇಶ. ಆಗಲೇ, ದೇಹಕ್ಕೆ ವ್ಯಾಯಾಮ ಮಾಡಿಸುತ್ತಾರೆ. ಕಂಬಳ ಇರಲಿ, ಬಿಡಲಿ; ಇದು ವರ್ಷಪೂರ್ತಿ ನಡೆಯುತ್ತದೆ. ಅಲ್ಲದೆ, ಈ ಕಂಬಳ ಕೋಣಗಳಿಗೆ ಶೀತ, ಹುಳು ಇತ್ಯಾದಿ ಬಾಧೆಗಳಿಗೆ ನೀಡುವ ನಾಟಿ ಔಷಧಿಗಳೂ ಪ್ರತ್ಯೇಕವಾಗಿವೆ. ಹಿಂದೆ ನಾಟಿ ತಜ್ಞರಿದ್ದರೆ, ಈಗ ಪಶು ವೈದ್ಯರ ತಪಾಸಣೆಯೂ ಇದೆ.

ಕಂಬಳದಲ್ಲಿ ಕೋಣಗಳ ಓಟದ ಅಭ್ಯಾಸಕ್ಕಾಗಿಯೇ ಮನೆ ಪಕ್ಕದ ಗದ್ದೆಯಲ್ಲಿ ಕಳವೊಂದನ್ನು (ಕೆಸರಿನ ಟ್ರ್ಯಾಕ್) ನಿರ್ಮಿಸಿರುತ್ತಾರೆ. ಅಲ್ಲಿ ಅವುಗಳನ್ನು ಓಡಿಸುವ ಮೂಲಕ ತರಬೇತಿ ನೀಡಲಾಗುತ್ತದೆ.

ವಿಭಾಗಗಳು

ಜೋಡು ಕರೆ (ಜೋಡಿ ಟ್ರ್ಯಾಕ್‌)ನಲ್ಲಿ ಕಂಬಳ ಸ್ಪರ್ಧೆ ನಡೆಯುತ್ತದೆ. ಸಾಮಾನ್ಯವಾಗಿ ಈ ಕರೆಯು 120ರಿಂದ 150 ಮೀಟರ್‌ ತನಕ ಉದ್ದವಿರುತ್ತದೆ. ಈ ಪೈಕಿ ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ, ಕನೆ ಹಲಗೆ ಎಂಬ ಆರು ವಿಭಾಗಗಳಿವೆ.

ಈ ಜೋಡುಕರೆಗಳಿಗೆ ಕೋಟಿ- ಚೆನ್ನಯ, ಕಾಂತಾ ಬಾರೆ- ಬೂದಾ ಬಾರೆ, ಸೂರ್ಯ- ಚಂದ್ರ, ಲವ- ಕುಶ, ರಾಮ–ಲಕ್ಷ್ಮಣ, ಜಯ-ವಿಜಯ, ವಿಜಯ-ವಿಕ್ರಮ ಮತ್ತಿತರ ಹೆಸರುಗಳಿವೆ. ಪುರುಷರು ಮಾತ್ರವಲ್ಲ, ಸೂರಿಂಜೆ ದುಲ್ಹಾರಿ ಎಸ್. ಭಂಡಾರಿ, ಕಂಕನಾಡಿ ಕಮಲಾ ಜೆ. ರಾಮಪ್ಪ ಹೀಗೆ ಕಂಬಳದ ಕೋಣಗಳನ್ನು ಹೊಂದಿದ ಮಹಿಳೆಯರೂ ಇದ್ದಾರೆ.

‘ಕೋಣದ ಓಟದ ವೇಗದ ಮೇಲೆಯೇ ಕಂಬಳದ ಫಲಿತಾಂಶ ನಿಂತಿದೆ. ಅಂತಿಮ ಗೆರೆಯ ಮೇಲೆ ಮೊದಲು ಕಾಲಿಟ್ಟ ಕೋಣದ ಜೋಡಿಗೆ ಚಿನ್ನ. ಅದನ್ನು ನಿರ್ಧರಿಸುವುದೇ ದೊಡ್ಡ ಸವಾಲು. ಸೆಕೆಂಡ್‌ಗಳಲ್ಲಿ ‘ಫಿನಿಷಿಂಗ್‌’ ಆಗುವುದಿದೆ. ಹೀಗಾಗಿ, ಕಂಬಳದ ತೀರ್ಪುಗಾರಿಕೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಕಂಬಳ ಅಕಾಡೆಮಿಯ ಶ್ರೀಧರ ಆಚಾರ್.

‘ಸಾಕಷ್ಟು ವರ್ಷಗಳ ಹಿಂದೆ ಮಾರ್ಕಿಂಗ್, ಹಗ್ಗಗಳು ಇದ್ದರೆ, ಬಳಿಕ ವಿಡಿಯೊ, ಕ್ಯಾಮೆರಾ, ಸಿ.ಸಿ.ಟಿವಿಗಳು ಬಂದಿವೆ. ಸದ್ಯ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಬೀಮ್‌ ಅಳವಡಿಸಲಾಗುತ್ತದೆ. ಆ ಬಳಿಕವೇ ಓಟದ ಅವಧಿಯ ದಾಖಲೆಗಳ ಕುರಿತು ಈಗಿನ ಚರ್ಚೆಗಳು ಶುರುವಾಗಿರುವುದು. ಕಾರ್ಕಳದ ಸ್ಕೈ ಎಂಬ ಸಂಸ್ಥೆ ಇದನ್ನು ಹೆಚ್ಚಾಗಿ ನಿರ್ವಹಿಸಿದೆ’ ಎನ್ನುತ್ತಾರೆ ಸಮಿತಿಯ ಸುರೇಶ್ ಪೂಜಾರಿ.

ಸಾಂಪ್ರದಾಯಿಕ ಕಂಬಳಕ್ಕೆ ಈಗ ಅಕಾಡೆಮಿಕ್ ಸ್ಪರ್ಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಮೂಡುಬಿದಿರೆಯ ಗುಣಪಾಲ ಕಡಂಬ ಹಾಗೂ ಬಳಗದ ಸತತ ಪರಿಶ್ರಮವು ಶ್ಲಾಘನೀಯ. ಇಲ್ಲಿ ಜಾತಿ–ಧರ್ಮಗಳನ್ನು ಲೆಕ್ಕಿಸದೆ ಎಲ್ಲರಿಗೂ ತರಬೇತಿ ನೀಡುತ್ತಾರೆ. ಅಲ್ಲದೇ, ಸಾಧ್ಯವಾದಷ್ಟು ತಂತ್ರಜ್ಞಾನದ ಅಳವಡಿಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ನಿಯಮಾವಳಿಗಳನ್ನು ಅಳವಡಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಓಟದಲ್ಲಿ ಪ್ರಾಣಿಗಳೇ ಮುಂದು!

‘ಕೋಣಗಳು ಸಹಜವಾಗಿಯೇ ವಿಶ್ವ ಚಾಂಪಿಯನ್‌ ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತವೆ. ಅವುಗಳ ದೇಹ ರಚನೆ, ಮಾಂಸಖಂಡಗಳು, ಎಂಡ್ಯೂರೆನ್ಸ್, ಕ್ಯಾಲೊರಿಗಳೆಲ್ಲವೂ ಇದಕ್ಕೆ ಪೂರಕವಾಗಿವೆ’ ಎನ್ನುತ್ತಾರೆ ಉಪ ಅರಣ್ಯಾಧಿಕಾರಿ ಗಿರೀಶ್‌ ಎಚ್.

‘ಕಾಡುಕೋಣ, ಕಂಬಳದ ಕೋಣ, ಎಮ್ಮೆ–ಕೋಣ, ಯಾಕ್, ದನಗಳೆಲ್ಲವೂ ಮೂಲತಃ ಕಾಡುಪ್ರಾಣಿಗಳು. ಇವು ಬೋವಿನೆ (Bovinae) ಎಂಬ ಜೈವಿಕ ಕುಟುಂಬಕ್ಕೆ ಸೇರಿವೆ. ಕಾಡಿನಲ್ಲಿ ಮಾಂಸಾಹಾರಿ ಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಅವು ಓಡುತ್ತವೆ. ಕಾಲಕ್ರಮೇಣ ಕೆಲವನ್ನು ಮನುಷ್ಯ ಸಾಕುಪ್ರಾಣಿಗಳಾಗಿ ಮಾಡಿಕೊಂಡಿದ್ದಾನೆ’ ಎಂದರು.

‘ಸಾಕುಪ್ರಾಣಿಗಳಾದ ಕಾರಣ ಓಟವನ್ನು ನಿರ್ಲಕ್ಷಿಸಿರಬಹುದು. ಆದರೆ, ಜೈವಿಕ ಸಾಮರ್ಥ್ಯ ಹಾಗೂ ಲಕ್ಷಣಗಳು ದೇಹದಲ್ಲಿ ಸುಪ್ತವಾಗಿವೆ. ಆ ಬೋವಿನೆ ಜಾತಿ ಕುಟುಂಬದ ಕೋಣಕ್ಕೆ ಓಟದ ತರಬೇತಿ ನೀಡಿದಾಗ, ಸಾಮರ್ಥ್ಯ ಪುನರುಜ್ಜೀವನಗೊಳ್ಳುತ್ತದೆ. ಸತತ ಪೋಷಣೆ ಸಿಕ್ಕಿದ ಪರಿಣಾಮ, ಬಲಶಾಲಿಗಳಾಗುತ್ತವೆ’ ಎಂಬುದು ಅವರ ವಿವರಣೆ.

‘ಚಿರತೆ, ಹುಲಿ, ಕೋಣ ಮಾತ್ರವಲ್ಲ, ಸಮತಟ್ಟಾದ ಪ್ರದೇಶದಲ್ಲಿ ಆನೆಗಳೂ ಮನುಷ್ಯನಗಿಂತ ವೇಗವಾಗಿ ಓಡುತ್ತವೆ. ಹೀಗಾಗಿ, ಪ್ರಾಣಿಗಳ ಜೊತೆಗಿನ ಓಟ ಮತ್ತು ಟ್ರ್ಯಾಕ್ ಮೇಲಿನ ಓಟವನ್ನು ಹೋಲಿಕೆ ಮಾಡುವುದು ಸರಿಯಲ್ಲ’ ಎನ್ನುತ್ತಾರೆ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ.

ಕಂಬಳದ ಒಂದು ದೃಶ್ಯ

ಪ್ರಾಣಿಗಳ ಪೈಕಿ ಚಿರತೆ ವೇಗವಾಗಿ ಓಡಿದರೆ, ಸಾಕು ಪ್ರಾಣಿಗಳ ಪೈಕಿ ನಾಯಿ (ಗ್ರೇಹೌಂಡ್ ತಳಿ)ಯನ್ನು ಗುರುತಿಸಲಾಗುತ್ತದೆ.

ಕಂಬಳದ ಓಟಗಾರರು

ಕಂಬಳದ ಕೋಣ ಓಡಿಸುವ ಓಟಗಾರರದ್ದೇ ವಿಶಿಷ್ಟ ‘ಪೆವಿಲಿಯನ್’. ಅವರಿಗೆ ಒಂದು ಋತುವಿನ ಕಂಬಳಕ್ಕೆ ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಾಗಿರುತ್ತದೆ. ಬೇಡಿಕೆಯ ಓಟಗಾರರಿಗೆ ₹ 3ರಿಂದ ₹ 4 ಲಕ್ಷದ ತನಕದ ಸಂಭಾವನೆ ಇದೆ. ಪ್ರತಿ ಕಂಬಳ ಹಾಗೂ ಗೆಲುವಿಗೆ ಇಂತಿಷ್ಟು ‘ಗೌರವ ಮೊತ್ತ’ವೂ ಇದೆ.

‘ಅವರು ಕೃಷಿಕರಾಗಿದ್ದು, ಗದ್ದೆಯ ಕೃಷಿ ಕೆಲಸಗಳಲ್ಲಿ ಪರಿಣತರಾದರೆ ಮಾತ್ರ ಕೋಣ ಓಡಿಸಲು ಸಾಧ್ಯವಾಗುತ್ತದೆ. ಹಾಗಾಗಿ ನಿರಂತರ ಕಸರತ್ತು, ಆಹಾರ ಶಿಸ್ತುಬೇಕಾಗುತ್ತದೆ. ಹೆಚ್ಚಾಗಿ ವಾಲಿಬಾಲ್ ಆಡುವ ಮೂಲಕ ದೈಹಿಕ ಕ್ಷಮತೆ ಕಾಯ್ದುಕೊಳ್ಳುತ್ತಾರೆ’ ಎನ್ನುತ್ತಾರೆ ಓಟಗಾರ ಉಜಿರೆಯ ದೇರಣ್ಣ ಹಾಗೂ ಆಳದಂಗಡಿಯ ಸತೀಶ.

‘ಅಥ್ಲೀಟ್ ಟ್ರ್ಯಾಕ್‌ನಲ್ಲಿ ಓಡುವಾಗ, ಆತನ ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಂಡು ಓಡಬೇಕು. ಆದರೆ, ಕಂಬಳದಲ್ಲಿ ಕೋಣಗಳ ಎಳೆತ ಸಿಗಬಹುದು ಅಥವಾ ಅಡ್ಡಿಯೂ ಆಗಬಹುದು. ಹೀಗಾಗಿ, ಕಂಬಳದ ಕರೆಯ ಓಟ ಹಾಗೂ ಟ್ರ್ಯಾಕ್‌ ಓಟವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಓಟ–ಆಟಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ’ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ.

ಕಂಬಳಕ್ಕೂ ಕಿರಿಕಿರಿ

‘ಕಂಬಳದಲ್ಲಿ ಕೋಣವನ್ನು ಹಿಂಸಿಸುತ್ತಾರೆ’ ಎಂಬ ಆಕ್ಷೇಪ ಕೇಳಿಬಂದಿತ್ತು. ಹೀಗಾಗಿ, 2016ರ ಮಾರ್ಚ್‌ನಲ್ಲಿ ಉಪ್ಪಿನಂಗಡಿಯ ಕಂಬಳದ ಬಳಿಕ, ಮತ್ತೆ ಮೂಡುಬಿದಿರೆಯಲ್ಲಿ 2017ರ ನವೆಂಬರ್‌ನಲ್ಲಿ ಕಂಬಳ ನಡೆದಿತ್ತು. ಈ ನಡುವೆ ಸುಮಾರು 20 ತಿಂಗಳು ನಿಷೇಧದ ತೆರವಿಗೆ ನಡೆದ ಹೋರಾಟದಲ್ಲಿ ಕಂಬಳವು ಇನ್ನಷ್ಟು ಗಟ್ಟಿಗೊಂಡಿತ್ತು. ಕಂಬಳ ಜಾಗೃತಿಯೊಂದು ಕರಾವಳಿಯ ಅಸ್ಮಿತೆಯನ್ನೂ ಕೆದಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT