ತವರಿನ ಹುಡುಗರಿಗೆ ಸಿಗದ ಆರ್‌ಸಿಬಿ

ಬುಧವಾರ, ಏಪ್ರಿಲ್ 24, 2019
23 °C

ತವರಿನ ಹುಡುಗರಿಗೆ ಸಿಗದ ಆರ್‌ಸಿಬಿ

Published:
Updated:

‘ಹ ರಾಜು ಪ್ರಕ್ರಿಯೆಯಲ್ಲಿರುವ ಸ್ಪರ್ಧಾತ್ಮಕ ಅಂಶಗಳಿಂದಾಗಿ ಕರ್ನಾಟಕದ ಕೆಲವು ಆಟಗಾರರನ್ನು ನಮ್ಮ ತಂಡಕ್ಕೆ ಖರೀದಿಸಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ನಾವು ಕೃಷ್ಣಪ್ಪ ಗೌತಮ್ ಮತ್ತು ಮಯಂಕ್ ಅಗರವಾಲ್ ಅವರಿಗಾಗಿ ಪ್ರಯತ್ನಿಸಿದ್ದೆವು. ಸ್ಥಳೀಯರಿಗೆ ಆದ್ಯತೆ ನೀಡುವ ಪ್ರಯತ್ನ ನಮ್ಮದಾಗಿತ್ತು’–

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಅವರ ಮಾತುಗಳು ಇವು.

ಭಾರತದ ಕ್ರಿಕೆಟ್‌ ಕ್ಷೇತ್ರದ ‘ಶಕ್ತಿಕೇಂದ್ರ’ವಾಗಿ ಬೆಳೆದಿರುವ ಬೆಂಗಳೂರಿನ ಕ್ರಿಕೆಟಿಗರಿಗೆ ಇಲ್ಲಿಯ ಆರ್‌ಸಿಬಿ ತಂಡದಲ್ಲಿ ಯಾಕೆ ಸ್ಥಾನ ಸಿಗುತ್ತಿಲ್ಲ ಎನ್ನುವ ಪ್ರಶ್ನೆಗೆ ಅವರು ಕೊಟ್ಟ  ಉತ್ತರ ಇದು. ಮೂರು ತಿಂಗಳ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಗೆ ಸಿಕ್ಕಿದ್ದು ಕೇವಲ ದೇವದತ್ ಪಡಿಕ್ಕಲ್ ಒಬ್ಬರೇ ಎಂದರೆ ಅಚ್ಚರಿಯೇ ಸರಿ.  2018ರ  ಆವೃತ್ತಿಯಲ್ಲಿ ಬೆಂಚ್ ಕಾದಿದ್ದ ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಅವರತ್ತ ಈ ಬಾರಿ ತಂಡವು ತಿರುಗಿಯೂ ನೋಡಲಿಲ್ಲ. 2016–17ರಲ್ಲಿ ತಂಡದಲ್ಲಿದ್ದ ಕೆ.ಎಲ್. ರಾಹುಲ್, ಸ್ಟುವರ್ಟ್‌ ಬಿನ್ನಿಯನ್ನು 2018ರಲ್ಲಿ ಉಳಿಸಿಕೊಳ್ಳುವ ಪ್ರಯತ್ನವೂ ನಡೆಯಲಿಲ್ಲ.

ಆದರೆ, ಕರ್ನಾಟಕದ ಹನ್ನೊಂದು ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಮಿಂಚುತ್ತಿದ್ದಾರೆ. ಇದು ರಾಜ್ಯ ಕ್ರಿಕೆಟ್‌ನ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಎಲ್ಲಕ್ಕಿಂತ ವಿಶೇಷವೆಂದರೆ, ಹೋದ ವರ್ಷ ಮಿಂಚಿದ್ದ ಕನ್ನಡಿಗ ಆಟಗಾರರನ್ನು ಆಯಾ ತಂಡಗಳು ಹರಾಜಿಗೆ ಒಡ್ಡದೇ ‘ರಿಟೇನ್’ ಮಾಡಿಕೊಂಡವು.

ಹೋದ ವರ್ಷ; ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಪ್ರಸಿದ್ಧಕೃಷ್ಣ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ರಾಬಿನ್ ಉತ್ತಪ್ಪ ಅವರು ತಾವು ಪ್ರತಿನಿಧಿಸುವ ಫ್ರ್ಯಾಂಚೈಸ್‌ಗಳಿಗೆ ಅಮೂಲ್ಯ ಗೆಲುವು ಒದಗಿಸಿಕೊಟ್ಟ ಉದಾಹರಣೆಗಳು ಇವೆ. ಅವುಗಳನ್ನು ನೋಡಿದ ಹಲವು ಕ್ರಿಕೆಟ್‌ಪ್ರೇಮಿಗಳು ಕಿಂಗ್ಸ್‌ ಇಲೆವನ್ ಪಂಜಾಬ್, ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್‌ ಬಳಗಗಳನ್ನೇ ತಮ್ಮ ನೆಚ್ಚಿನ ತಂಡಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಫೇಸ್‌ಬುಕ್, ವಾಟ್ಸ್ಯಾಪ್‌ ಡಿ.ಪಿಗಳಲ್ಲಿ ಹಾಕಿಕೊಂಡಿದ್ದರು.

ಆದರೂ ಬೆಂಗಳೂರಿನ ರಾಯಲ್ ಚಾಲೆಂಜರ್ಸ್‌ ತಂಡವನ್ನು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ಗಾಗಿ ಹುರಿದುಂಬಿಸಿದ್ದರು. ಆದರೆ, ಈ ವರ್ಷ ಒಂದೆರಡು ಕನ್ನಡದ ಹುಡುಗರಾದರೂ ಆರ್‌ಸಿಬಿಯಲ್ಲಿ ಇರುತ್ತಾರೆನ್ನುವ ಇಲ್ಲಿಯ ಕ್ರಿಕೆಟ್‌ ಪ್ರೇಮಿಗಳ ನಿರೀಕ್ಷೆ ಹುಸಿಯಾಗಿದೆ. ಇದರೊಂದಿಗೆ ಐಪಿಎಲ್ ತಂಡಗಳಲ್ಲಿ ಸ್ಥಳೀಯ ಆಟಗಾರರ ಆಯ್ಕೆಯ ಸಂಖ್ಯೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಐಪಿಎಲ್ ಬೈಲಾದಲ್ಲಿ ಲೋಕಲ್ ಆಟಗಾರರಿಗೆ ಆದ್ಯತೆ ಕುರಿತ ನಿಯಮವೊಂದಿದೆ. ಆದರೆ, ಈ ನಿಯಮದ ಪ್ರಕಾರ ಲೋಕಲ್ ಅಥವಾ ಸ್ಥಳೀಯ ಎಂದರೆ ಭಾರತದ ಆಟಗಾರ ಎಂಬ ಅರ್ಥ ಇದೆ. ಆದ್ದರಿಂದ ಫ್ರ್ಯಾಂಚೈಸ್‌ಗಳು ತಮ್ಮ ತವರಿನ ನಗರದ ಅಥವಾ ರಾಜ್ಯದ ಆಟಗಾರರಿಗೇ ಮಣೆ ಹಾಕಬೇಕು ಎಂಬ ಮಾತಿಲ್ಲ. ಆದ್ದರಿಂದ ತಂಡಗಳು ತಮ್ಮ ಬಳಿ ಇರುವ ಹಣವನ್ನು ಖ್ಯಾತನಾಮ ಆಟಗಾರರ ಮೇಲೆ ವಿನಿಯೋಗಿಸಲು ಉತ್ಸುಕರಾಗಿರುತ್ತಾರೆ. ಬ್ರ್ಯಾಂಡ್‌ ವ್ಯಾಲ್ಯೂ ಹೆಚ್ಚಿಸುವತ್ತ ಮಾತ್ರ ಅವರ ಚಿತ್ತ ನೆಟ್ಟಿರುತ್ತದೆ ಎಂಬ ಟೀಕೆಗಳು ಇವೆ.

ಆದರೂ ಇದಕ್ಕೆ ಅಪವಾದವೆಂಬಂತೆ ಕೆಲವು ತಂಡಗಳು ಇವೆ. ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಮುರಳಿ ವಿಜಯ್, ನಾರಾಯಣ ಜಗದೀಶ್, ಕಿಂಗ್ಸ್‌ ಇಲೆವನ್ ಪಂಜಾಬ್‌ನಲ್ಲಿ ಹರಪ್ರೀತ್ ಬ್ರಾರ್, ಮನದೀಪ್ ಸಿಂಗ್, ಸಿಮ್ರನ್ ಸಿಂಗ್, ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ, ಸಿದ್ಧೇಶ್ ಲಾಡ್, ಡೆಲ್ಲಿ ಕ್ಯಾಪಿಟಲ್‌ನಲ್ಲಿ ರಿಷಭ್ ಪಂತ್ ಮತ್ತು ಶಿಖರ್ ಧವನ್ ಇದ್ದಾರೆ. ಈ ತಂಡಗಳು ನಿರಂತರವಾಗಿ ತಮ್ಮ ತವರಿನಂಗಳದ ಒಬ್ಬಿಬ್ಬರಿಗೆ ನಿರಂತರವಾಗಿ ಅವಕಾಶ ನೀಡುತ್ತಿವೆ.

ಈ ಬಾರಿ ಆರ್‌ಸಿಬಿಯು ತವರಿನ ಅಭಿಮಾನಿಗಳೊಂದಿಗೆ ಮತ್ತಷ್ಟು ನಿಕಟ ಸಂಪರ್ಕ ಸಾಧಿಸಲು ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಆ್ಯಪ್, ಡಾಗ್‌ಔಟ್ ಮತ್ತಿತರ ವಿನೂತನ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಆದರೆ 2008ರಲ್ಲಿ ಆರ್‌ಸಿಬಿಯಲ್ಲಿ ಆಡಿದ್ದ ಮನೀಷ್ ಪಾಂಡೆ ಶತಕ ದಾಖಲಿಸಿದಾಗ ಲಭಿಸಿದ್ದ ಫ್ಯಾನ್‌ ಫಾಲೋಯಿಂಗ್ ಬೇರೆ ಯಾವುದರಿಂದ ಸಿಗಲು ಸಾಧ್ಯ. ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಪರವಾಗಿ ರಿಷಭ್ ಪಂತ್, ಪಂಜಾಬ್ ಪರ ಯುವರಾಜ್ ಸಿಂಗ್ ಸಿಡಿದಾಗ ಅಲ್ಲಿಯ ಅಭಿಮಾನಿಗಳು ಹರಿಸಿದ್ದ ಪ್ರೀತಿಯ ಹೊಳೆ ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಕಾರ್ಪೊರೆಟ್‌ ಥಳಕು–ಬಳಕು ಏನೇ ಇದ್ದರೂ ‘ಸ್ಥಳೀಯ ಸೊಗಡು’ ಇರದೇ ಹೋದರೆ ಗಟ್ಟಿಯಾದ ಫ್ಯಾನ್‌ ಬೇಸ್ ಹೊಂದುವುದು ಕಷ್ಟ. ಬೆಂಗಳೂರಿನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದ ಕ್ರಿಸ್ ಗೇಲ್ ಈಗ ಆರ್‌ಸಿಬಿಯಲ್ಲಿ ಇಲ್ಲ. ಎಬಿ ಡಿವಿಲಿಯರ್ಸ್‌ ಈ ವರ್ಷ ಆಡಲಿದ್ದಾರೆ. ಮುಂದಿನ ವರ್ಷ ಆಡುವ ಖಾತ್ರಿಯಿಲ್ಲ. ಅವರಿಬ್ಬರ ಸ್ಥಾನವನ್ನು ತುಂಬುವ ಸಾಮರ್ಥ್ಯ ಕರ್ನಾಟಕದ ಆಟಗಾರರಲ್ಲಿ ಇದೆ. ಅವರನ್ನು ಹುಡುಕಿ ಸ್ಥಾನ ನೀಡಬೇಕಷ್ಟೇ. ಇತ್ತೀಚೆಗೆ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಚಾಂಪಿಯನ್ ಆಗಿರುವ ಕರ್ನಾಟಕ ತಂಡದಿಂದ ಉತ್ತಮ ಆಟಗಾರರನ್ನು ಶೋಧಿಸುವುದು ಕಷ್ಟವೇನಲ್ಲ.

ಆಟಗಾರರನ್ನು ಖರೀದಿಸುವ ಪ್ರಕ್ರಿಯೆಗಳು

l ವಾರ್ಷಿಕ ಹರಾಜು ಪ್ರಕ್ರಿಯೆ

l ದೇಶಿ ತಂಡಗಳ ಆಟಗಾರರನ್ನು ಕೊಳ್ಳುವುದು

l ಹೊಸ ಆಟಗಾರ (ಅನ್‌ಕ್ಯಾಪ್‌)ರೊಂದಿಗೆ ಗುತ್ತಿಗೆ ಮಾಡಿಕೊಳ್ಳುವುದು

l ಗಾಯ ಮತ್ತಿತರ ಕಾರಣಗಳಿಂದ ತಂಡದ ಹೊರಗುಳಿಯುವ ಆಟಗಾರರ ಬದಲಿಗೆ ಬೇರೆಯವರನ್ನು ಖರೀದಿಸುವುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !