ಸೋಮವಾರ, ಸೆಪ್ಟೆಂಬರ್ 16, 2019
22 °C
ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌, ರಾಜ್ಯ ಚಾಂಪಿಯನ್‌ಷಿಪ್‌ಗೆ ಸಜ್ಜಾಗುತ್ತಿದೆ ಬೆಂಗಳೂರು

ಹೊಂಡ–ಗುಂಡಿಗಳಲ್ಲಿ ಅಥ್ಲೆಟಿಕ್ ಕೂಟ?

Published:
Updated:
Prajavani

ಬೆಂಗಳೂರು: ಈ ಬಾರಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಕೂಟದ ಆತಿಥ್ಯ ವಹಿಸುವ ಅವಕಾಶ ಬೆಂಗಳೂರಿಗೆ ಲಭಿಸಿದೆ. ಅನೇಕ ವರ್ಷಗಳ ನಂತರ ದೇಶದ ಅತಿದೊಡ್ಡ ಕ್ರೀಡಾಕೂಟ ಉದ್ಯಾನ ನಗರಿಯಲ್ಲಿ ನಡೆಯಲಿದೆ ಎಂಬ ಸುದ್ದಿ ಕ್ರೀಡಾಪ್ರಿಯರಿಗೆ ಖುಷಿ ನೀಡಿದೆ. ಆದರೆ ರಾಜ್ಯ ಅಥ್ಲೆಟಿಕ್ ಸಂಸ್ಥೆಯವರು ಮಾತ್ರ ಮೈ–ಕೈ ಪರಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದುಸ್ಥಿತಿಯಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸುವುದಾದರೂ ಹೇಗೆ ಎಂಬ ಚಿಂತೆ ಸಂಸ್ಥೆಯ ಪದಾಧಿಕಾರಿಗಳನ್ನು ಕಾಡುತ್ತಿದ್ದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಒಂದೆರಡು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಾಣುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಮುಕ್ತ ಕೂಟ ಇಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳಲು ದೇಶದ ಅಥ್ಲೀಟ್‌ಗಳಿಗೆ ಹಾದಿ ತೋರುವ ಈ ಕೂಟ ಗುಂಡಿಗಳು ತುಂಬಿರುವ ಟ್ರ್ಯಾಕ್‌ನಲ್ಲಿ ನಡೆದರೆ ಸಿಗುವ ಫಲವೇನು ಎಂಬ ಆತಂಕ ಕೋಚ್‌ಗಳನ್ನೂ ಕಾಡುತ್ತಿದೆ. 

ಕಂಠೀರವ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಸೌಲಭ್ಯ ಕಲ್ಪಿಸಿದ್ದು 1997ರಲ್ಲಿ. ನಂತರ ಇಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಟ್ರ್ಯಾಕ್ ಸಂಪೂರ್ಣ ಹಾಳಾಗಿದೆ. ಅಥ್ಲೆಟಿಕ್ಸ್‌ಗಿಂತ ಫುಟ್‌ಬಾಲ್ ಚಟುವಟಿಕೆ ಇತ್ತೀಚೆಗೆ ಇಲ್ಲಿ ಹೆಚ್ಚಾಗಿ ನಡೆಯುತ್ತಿರುವುದರಿಂದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಟ್ರ್ಯಾಕ್‌ಗೆ ಹೊದಿಸಲಾದ ಸಿಂಥೆಟಿಕ್ ಪೂರ್ತಿ ಎದ್ದು ಹೋಗಿದೆ. ಆದ್ದರಿಂದ ಅಲ್ಲಲ್ಲಿ ಹೊಂಡಗಳು ಕಾಣಿಸುತ್ತಿವೆ. ಲಾಂಗ್ ಜಂಪ್ ಪ್ರದೇಶ ಹೆಚ್ಚು ಅಪಾಯಕಾರಿಯಾಗಿದೆ. ಇದರ ರನ್‌ವೇಯನ್ನು ಬಳಸಿದರೆ ಕ್ರೀಡಾಪಟುಗಳು ಬಿದ್ದು ಗಾಯಗೊಳ್ಳದೇ ಇರಲಾರರು. 2006ರಲ್ಲಿ ಹೊಸದಾಗಿ ಸಿಂಥೆಟಿಕ್ ಹಾಸಲಾಗಿತ್ತು. ನಂತರ ಈ ಕಡೆಗೆ ಯಾರೂ ತಿರುಗಿ ನೋಡದ ಕಾರಣ ಹೀಗಾಗಿದೆ.

ನಮಗೆ ಮಾತ್ರ ಯಾಕೆ ಸ್ವಂತಕ್ಕಿಲ್ಲ?

ಕ್ರಿಕೆಟ್ ಸಂಸ್ಥೆ, ಫುಟ್‌ಬಾಲ್ ಸಂಸ್ಥೆ, ಹಾಕಿ ಸಂಸ್ಥೆ ಮೊದಲಾಗಿ ಎಲ್ಲ ಕ್ರೀಡಾ ಸಂಸ್ಥೆಗಳ ಅಂಗಣಗಳು ಆಯಾ ಸಂಸ್ಥೆಗಳ ಸ್ವಂತಕ್ಕೆ ಬಳಕೆಯಾಗುತ್ತಿವೆ. ಆದರೆ ಅಥ್ಲೆಟಿಕ್ಸ್‌ಗೆ ಮೀಸಲಾಗಿರುವ ಕಂಠೀರವ ಕ್ರೀಡಾಂಗಣದ ಮೇಲೆ ರಾಜ್ಯ ಅಥ್ಲೆಟಿಕ್ ಸಂಸ್ಥೆಗೆ (ಕೆಎಎ) ಅಧಿಕಾರ ಇಲ್ಲದಂತಾಗಿದೆ. ಟ್ರ್ಯಾಕ್ ಸರಿಪಡಿಸುವಂತೆ ಸರ್ಕಾರಕ್ಕೆ ಮೊರೆ ಇಟ್ಟು ಸಾಕಾಗಿದೆ. ಈ ಬಾರಿಯೂ ಎಂದಿನಂತೆ ಆಶ್ವಾಸನೆ ನೀಡಿದ್ದಾರೆ. ಆದರೆ ಅದನ್ನು ಈಡೇರಿಸುವ ಭರವಸೆ ಇಲ್ಲ ಎಂದು ಕೆಎಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಧಿಕಾರಿ ಎಲ್ವಿಸ್ ಜೋಸೆಫ್‌ ಬೇಸರ ವ್ಯಕ್ತಪಡಿಸಿದರು.

‘ರಾಜ್ಯ ಚಾಂಪಿಯನ್‌ಷಿಪ್‌ ಮತ್ತು ರಾಷ್ಟ್ರೀಯ ಮುಕ್ತ ಕೂಟಕ್ಕೆ ಸಜ್ಜಾಗಬೇಕಿದೆ. ಟ್ರ್ಯಾಕ್‌ ಸರಿಯಾದ ಸ್ಥಿತಿಗೆ ಬಾರದೆ ಏನೂ ಮಾಡಲಾಗದು. ಕ್ರೀಡಾಂಗಣವನ್ನು ಫುಟ್‌ಬಾಲ್ ಚಟುವಟಿಕೆಗೆ ಮುಕ್ತಗೊಳಿಸಿದ್ದರಿಂದ ಸಮಸ್ಯೆಗಳು ಹೆಚ್ಚಾಗಿವೆ. ಈ ನಡುವೆ ಜುಲೈನಲ್ಲಿ ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯನ್ನೂ ಇಲ್ಲೇ ನಡೆಸುವುದಾಗಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಹೇಳಿದೆ. ಆ ಟೂರ್ನಿಯ ಪಂದ್ಯಗಳೂ ನಡೆದರೆ ಟ್ರ್ಯಾಕ್ ಇನ್ನಷ್ಟು ಹಾಳಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ರಾಜ್ಯ ಚಾಂಪಿಯನ್‌ಷಿಪ್‌ ಮತ್ತು ರಾಷ್ಟ್ರೀಯ ಕೂಟಕ್ಕೆ ಸಾಯ್‌ ಆವರಣದ ಟ್ರ್ಯಾಕ್ ಬಳಸುವ ಕುರಿತು ಆಲೋಚನೆ ಇದೆ. ಆದರೆ ಆ ಸಂದರ್ಭದಲ್ಲಿ ಅಲ್ಲಿ ಯಾವುದಾದರೂ ತರಬೇತಿ ಅಥವಾ ಆಯ್ಕೆ ಶಿಬಿರ ನಡೆಯಲಿದ್ದರೆ ಏನೂ ಮಾಡಲಾಗದು’ ಎಂದು ಅವರು ಹೇಳಿದರು.

Post Comments (+)