ಅಲೆಮಾರಿ ಕುಟುಂಬದ ಕರಾಟೆ ಕುಡಿಗಳು

7
ತಂದೆ ಪಾತ್ರೆ ವ್ಯಾಪಾರಿ; ಅಕ್ಕ, ತಮ್ಮ ಬ್ಲ್ಯಾಕ್‌ಬೆಲ್ಟ್‌ ಸಾಧಕರು

ಅಲೆಮಾರಿ ಕುಟುಂಬದ ಕರಾಟೆ ಕುಡಿಗಳು

Published:
Updated:

ಮೈಸೂರು: ನಿತ್ಯ ವಿವಿಧ ಹಳ್ಳಿಗಳ ಬೀದಿ ಸುತ್ತಿ ಪಾತ್ರೆ ಮಾರುವ ತಂದೆ. ಬಡತನದ ಬೇಗುದಿಯ ನಡುವೆಯೇ ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್‌ ಸಾಧನೆ ಮಾಡಿ ಕೀರ್ತಿ ತಂದಿರುವ ಮಕ್ಕಳು.

ಎಚ್‌.ಡಿ.ಕೋಟೆ ತಾಲ್ಲೂಕಿನ ಯರಹಳ್ಳಿ ಗ್ರಾಮದ ಎಚ್‌.ಎಂ.ಐಶ್ವರ್ಯಾ ಹಾಗೂ ಅವರ ತಮ್ಮ ಎಚ್‌.ಎಂ.ನಿತಿಲ್‌ ಕರಾಟೆ ಸಾಧಕರು. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಸೋಮವಾರ ಕೊನೆಗೊಂಡ 19ನೇ ಮಿಲೊ ಅಂತರರಾಷ್ಟ್ರೀಯ ಓಪನ್‌ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಇವರಿಬ್ಬರು ಕಂಚಿನ ಪದಕ ಜಯಿಸಿದ್ದಾರೆ. ಜೂನಿಯರ್‌ ಕುಮಿಟೆ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಇವರದ್ದು ಅಲೆಮಾರಿ ಸಮುದಾಯ. ಈ ಮಕ್ಕಳ ತಂದೆ ಮಂಜು ರಾವ್‌, ತಾಯಿ ದಿವ್ಯಾ. ಆಶ್ರಯ ಯೋಜನೆಯಲ್ಲಿ ಲಭಿಸಿರುವ ಮನೆಯಲ್ಲಿ ವಾಸಿಸುತ್ತಿರುವ ಇವರು 20 ವರ್ಷಗಳಿಂದ ಪಾತ್ರೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಹಳ್ಳಿಗಳಲ್ಲಿ ಅಲ್ಯೂಮಿನಿಯಂ, ಸ್ಟೀಲ್‌ ಪಾತ್ರೆ ಮಾರಾಟ ಮಾಡುತ್ತಾರೆ. ‌

13 ವರ್ಷ ವಯಸ್ಸಿನ ನಿತಿಲ್‌ 9ನೇ ತರಗತಿ ಓದುತ್ತಿದ್ದರೆ, 16 ವರ್ಷ ವಯಸ್ಸಿನ ಐಶ್ವರ್ಯಾ ಪ್ರಥಮ ಪಿಯುನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕರಾಟೆ ಮಾಸ್ಟರ್‌ ಪ್ರೇಮಸಾಗರ್‌ ಬಳಿ ತರಬೇತಿ ಪಡೆಯುತ್ತಿದ್ದಾರೆ.

‘ಚಿಕ್ಕಂದಿನಿಂದಲೇ ಮಕ್ಕಳಿಗೆ ಕರಾಟೆ ಮೇಲೆ ಒಲವು ಮೂಡಿತು. ಅದಕ್ಕೆ ಕಾರಣ ಕರಾಟೆ ಮಾಸ್ಟರ್‌ ಪ್ರೇಮಸಾಗರ್‌. ಏಳನೇ ಕ್ಲಾಸ್‌ ಓದಿರುವ ನನಗೆ ಈ ಕ್ರೀಡೆ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ, ನಮ್ಮ ರೀತಿ ಮಕ್ಕಳ ಆಗಬಾರದು ಎಂಬ ಕಾರಣದಿಂದ ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸಲಿ ಎಂದು ಪ್ರೋತ್ಸಾಹಿಸಿದೆವು‌. ಈಗ ಮಕ್ಕಳ ಸಾಧನೆ ಕಂಡು ಖುಷಿಯಾಗುತ್ತಿದೆ’ ಎಂದು ಮಂಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಐಶ್ವರ್ಯಾ ಹಾಗೂ ನಿತಿಲ್‌ ದಸರಾ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ್ದಾರೆ. ಮೈಸೂರು, ಬೆಂಗಳೂರು, ಸೇಲಂ, ಸಿಕಂದರಾಬಾದ್‌ನಲ್ಲಿ ನಡೆದ ಕರಾಟೆ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದಾರೆ.

‘ಸ್ಪರ್ಧೆಯಲ್ಲಿ ಭಾಗವಹಿಸಲು ಇದೇ ಮೊದಲ ಬಾರಿ ವಿದೇಶಕ್ಕೆ ತೆರಳಿದ್ದರು. ಪಾಸ್‌ಪೋರ್ಟ್‌ ಮಾಡಿಸಲು ಹಾಗೂ ಪ್ರವಾಸಕ್ಕೆ ಹಣ ಹೊಂದಿಸಲು ತುಂಬಾ ತೊಂದರೆ ಉಂಟಾಯಿತು. ಇಬ್ಬರಿಗೂ ಹೊಸದಾಗಿ ಕರಾಟೆ ಕಿಟ್‌ ಖರೀದಿಸಿಕೊಟ್ಟಿದ್ದೇನೆ. ಸಾರ್ವಜನಿಕರು, ಜನಪ್ರತಿನಿಧಿಗಳು ಸಹಾಯ ಮಾಡಿದ್ದಾರೆ. ಒಂದಿಷ್ಟು ಸಾಲ ಮಾಡಿದ್ದೇನೆ’ ಎಂದು ನುಡಿದರು.

ಭಾರತೀಯ ಕರಾಟೆ ಸಂಸ್ಥೆ ಹಾಗೂ ವಿಶ್ವ ಕರಾಟೆ ಫೆಡರೇಷನ್‌ನಲ್ಲಿ ನೋಂದಾಯಿತವಾಗಿರುವ ರೆಕ್‌ ಕಿಯೋ ಶಿನ್‌ ಕಾಯ್‌ ಮಾರ್ಷಲ್‌ ಆರ್ಟ್ಸ್‌ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಇವರಿಬ್ಬರು ಆಯ್ಕೆಯಾಗಿದ್ದರು. 

*
ಪಾತ್ರೆ ಮಾರಾಟದಿಂದಲೇ ನಮ್ಮ ಜೀವನ ಸಾಗುತ್ತಿದೆ. ಪೊಲೀಸ್‌ ಆಗಬೇಕೆಂಬುದು ಮಗಳ ಆಸೆ. ಆಕೆಯ ಆಸೆ ಈಡೇರಿಸಲು <br/>ನಾನು ಸಿದ್ಧ.
-ಮಂಜು ರಾವ್‌, ಸಾಧಕ ಮಕ್ಕಳ ತಂದೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !